ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆಯ ಅಬ್ಬರ ಮುಂದುವರೆಯಲಿದೆ. ಆದರೆ ಭಾನುವಾರದಿಂದ ಮಳೆ ಕಡಿಮೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬೆಂಗಳೂರು : ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆಯ ಅಬ್ಬರ ಮುಂದುವರೆಯಲಿದೆ. ಆದರೆ ಭಾನುವಾರದಿಂದ ಮಳೆ ಕಡಿಮೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕರಾವಳಿ, ಮಲೆನಾಡು ಸೇರಿದಂತೆ ಒಳನಾಡು ಜಿಲ್ಲೆಗಳಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಉತ್ತಮ ಮಳೆಯಾಗುತ್ತಿದೆ. ಶುಕ್ರವಾರ ಮತ್ತು ಶನಿವಾರವೂ ಮಳೆ ಮುಂದುವರೆಯಲಿದೆ. ಕರಾವಳಿಯ ಮೂರು ಜಿಲ್ಲೆಗಳಿಗೆ ಶುಕ್ರವಾರ ಆರೆಂಜ್‌ ಅಲರ್ಟ್‌, ಶನಿವಾರ ಯೆಲ್ಲೋ ಅಲರ್ಟ್‌ ಎಚ್ಚರಿಕೆ ನೀಡಿದೆ.

ಚಿಕ್ಕಮಗಳೂರು, ಚಿತ್ರದುರ್ಗ, ಶಿವಮೊಗ್ಗ ಮತ್ತು ತುಮಕೂರು ಜಿಲ್ಲೆಗಳಿಗೆ ಆರೆಂಜ್‌ ಅಲರ್ಟ್‌, ಬೀದರ್‌, ಗದಗ, ಕಲಬುರಗಿ, ರಾಯಚೂರು, ವಿಜಯಪುರ, ಧಾರವಾಡ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ದಾವಣಗೆರೆ, ಹಾಸನ, ಕೊಪ್ಪಳ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ನೀಡಲಾಗಿದೆ. ಕರಾವಳಿ ಹೊರತುಪಡಿಸಿ ಭಾನುವಾರದಿಂದ ರಾಜ್ಯದಲ್ಲಿ ಹಗುರ ಮಳೆ ಮುಂದುವರೆಯಲಿದೆ.

ಗುರುವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡ ಹವಾಮಾನ ಇಲಾಖೆಯ ವರದಿ ಪ್ರಕಾರ, ಕೊಪ್ಪಳದ ಕುಕನೂರಿನಲ್ಲಿ ಅತಿ ಹೆಚ್ಚು 7 ಸೆಂ.ಮೀ. ಮಳೆಯಾಗಿದೆ. ಬದಾಮಿ, ಕುಷ್ಟಗಿಯಲ್ಲಿ ತಲಾ 5, ದೇವದುರ್ಗ, ಮುದ್ದೇಬಿಹಾಳ, ಗುಳೇದಗುಡ್ಡ, ನಾಗಮಂಗಲ, ಬೆಂಗಳೂರಿನಲ್ಲಿ ತಲಾ 3 ಸೆಂ.ಮೀ. ಮಳೆಯಾಗಿದೆ. ಕಾರ್ಕಳ, ಬೀದರ್‌, ನರಗುಂದ, ಆಗುಂಬೆಯಲ್ಲಿ ತಲಾ 2 ಸೆಂ.ಮೀ. ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.