-ವಿಶ್ವದಲ್ಲಿ 17ನೇ ಸ್ಥಾನ । ಎನ್ಜಿಒ ಸಂಸ್ಥೆಯಿಂದ ವರದಿ ಬಹಿರಂಗ । ಟ್ರಾಫಿಕ್ ಮ್ಯಾನೇಜ್ಮೆಂಟ್ ಕೇಂದ್ರದಲ್ಲಿ ದುಂಡು ಮೇಜಿನ ಸಮ್ಮೇಳನಕನ್ನಡಪ್ರಭ ವಾರ್ತೆ ಬೆಂಗಳೂರು
ಮಹಿಳೆ ಮತ್ತು ಮಕ್ಕಳ ಸುರಕ್ಷತೆ ಮತ್ತು ಭದ್ರತೆಗೆ ದೇಶದಲ್ಲೇ ಬೆಂಗಳೂರು ಮೊದಲ ಸ್ಥಾನದಲ್ಲಿದ್ದು, ವಿಶ್ವದಲ್ಲಿ 17ನೇ ಸ್ಥಾನದಲ್ಲಿದೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಹೇಳಿದರು. ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ (ಎನ್ಎಲ್ಎಸ್ಐಯು) ಮತ್ತು ನಗರ ಪೊಲೀಸ್ ವಿಭಾಗ ಸಹಭಾಗಿತ್ವದಲ್ಲಿ ಮಂಗಳವಾರ ನಗರದ ಟ್ರಾಫಿಕ್ ಮ್ಯಾನೇಜ್ಮೆಂಟ್ ಕೇಂದ್ರದಲ್ಲಿ ಆಯೋಜಿಸಿದ್ದ ದುಂಡು ಮೇಜಿನ ಸಮ್ಮೇಳನ ಕಾರ್ಯಕ್ರಮದಲ್ಲಿ ಮಾತನಾಡಿದರು.ಇತ್ತೀಚೆಗೆ ಎನ್ಜಿಒ ಸಂಸ್ಥೆಯಿಂದ ಬಿಡುಗಡೆ ಮಾಡಿದ ವರದಿಯಲ್ಲಿ ಬೆಂಗಳೂರು ಮಹಿಳೆಯರಿಗೆ ಎಷ್ಟು ಸುರಕ್ಷಿತ? ಯಾವ ಸ್ಥಾನದಲ್ಲಿದೆ ಎಂದು ತಿಳಿಸಿದೆ. ತುರ್ತು ಸಂದರ್ಭದಲ್ಲಿ ಪೊಲೀಸ್ ಸಹಾಯವಾಣಿ-112ಗೆ ಕರೆ ಮಾಡಿದ ಕೆಲವೇ ನಿಮಿಷಗಳಲ್ಲಿ ನಮ್ಮ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ತಲುಪುತ್ತಾರೆ. ಇದರೊಂದಿಗೆ ತುರ್ತು ಕರೆ ಜತೆಗೆ ಸುರಕ್ಷಾ ಆ್ಯಪ್ ಸೇರಿ ಇತರೆ ಸಹಾಯವಾಣಿಗಳನ್ನು ಅಭಿವೃದ್ಧಿಪಡಿಸಿ ಮಹಿಳೆ ಮತ್ತು ಮಕ್ಕಳ ಸುರಕ್ಷತೆಗೆ ಆದ್ಯತೆ ನೀಡಲಾಗಿದೆ. ಈ ಸುರಕ್ಷತಾ ಕ್ರಮಗಳಿಗಾಗಿ ಕಾನ್ಸ್ಟೇಬಲ್ನಿಂದ ಪೊಲೀಸ್ ಇನ್ಸ್ಪೆಕ್ಟರ್ವರೆಗೂ ಕಳೆದೊಂದು ವರ್ಷದಲ್ಲಿ 20 ಸಾವಿರ ಅಧಿಕಾರಿ-ಸಿಬ್ಬಂದಿಗೆ ತರಬೇತಿ ನೀಡಲಾಗಿದೆ ಎಂದು ಹೇಳಿದರು.
ರಾಜಧಾನಿಯಲ್ಲಿ ನೆರೆ ರಾಜ್ಯಗಳ ನಿವಾಸಿಗಳು ಮಾತ್ರವಲ್ಲ, ವಿದೇಶಿಗರು ಉದ್ಯೋಗ ಅರಸಿ ಬಂದು ನಗರದಲ್ಲಿ ವಾಸವಾಗಿದ್ದು, ದಿನದ 24 ಗಂಟೆಯೂ ಬೆಂಗಳೂರು ಸಕ್ರಿಯವಾಗಿರುತ್ತದೆ. ಐಟಿ ಸೆಕ್ಟರ್ ಸೇರಿ ಹಲವು ಉದ್ಯಮಗಳು ತಡರಾತ್ರಿವರೆಗೂ ಕಾರ್ಯ ನಿರ್ವಹಿಸುತ್ತವೆ. ಹೀಗಾಗಿ ಸಾಮಾನ್ಯವಾಗಿ ಜನ ಓಡಾಡುತ್ತಾರೆ. ಯಾವುದೇ ಆತಂಕ, ಭಯವಿಲ್ಲದೆ ಜೀವನ ನಡೆಸುತ್ತಿದ್ದಾರೆ ಎಂದರು.ಜರ್ಮನಿ ಪೊಲೀಸರು ಭಾಗಿ: ದುಂಡು ಮೇಜಿನ ಸಮ್ಮೇಳನದಲ್ಲಿ ರಾಜ್ಯ ಪೊಲೀಸ್ ತರಬೇತಿ ಸುಧಾರಣೆ ಕುರಿತು ತಿಳಿದುಕೊಳ್ಳಲು ದೇಶದ ವಿವಿಧ ರಾಜ್ಯಗಳ ಹಿರಿಯ ಪೊಲೀಸ್ ಅಧಿಕಾರಿಗಳು, ಜರ್ಮನಿಯ ಬವೇರಿಯಾ ಪೊಲೀಸ್ ಅಧಿಕಾರಿಗಳು ಭಾಗಿಯಾಗಿ ತರಬೇತಿಯಲ್ಲಿ ಲಿಂಗ ಸಮಾನತೆ ಜಾರಿಗೆ ತಂದಿರುವ ಸುಧಾರಣೆಗಳ ಕುರಿತು ಚರ್ಚಿಸಿದರು. ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ.ಸಲಿಂ ಮಾತನಾಡಿ, ಇಲಾಖೆಯಲ್ಲಿ ಲಿಂಗಸಂವೇದನಾಶೀಲತೆ ಬೆಳೆಸುವುದು, ಮಹಿಳಾ ಪೊಲೀಸ್ ಸಿಬ್ಬಂದಿಯ ಸಂಖ್ಯೆಯನ್ನು ಹೆಚ್ಚಿಸುವುದು ಹಾಗೂ ತರಬೇತಿಯಲ್ಲಿ ಸಂಶೋಧನೆ ಮತ್ತು ಸಂಸ್ಥೆಗಳ ನಡುವಿನ ಸಹಯೋಗ ಬಲಪಡಿಸುವುದು ಅಗತ್ಯ ಎಂದರು.
ಎನ್ಎಲ್ಎಸ್ಐಯು ಕುಲಪತಿ ಪ್ರೊ.ಸುಧೀರ್ ಕೃಷ್ಣಸ್ವಾಮಿ, ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಸೌಮೇಂದು ಮುಖರ್ಜಿ, ಡಿಐಜಿ ಡಿ.ದೇವರಾಜ್, ಹಾನ್ಸ್ ಸೀಡಲ್ ಪ್ರತಿಷ್ಠಾನದ ಮುಖ್ಯಸ್ಥ ಜುಡಿತ್ ವೈನ್ಬರ್ಗರ್ ಸಿಂಗ್ ಹಾಗೂ ತೆಲಂಗಾಣ, ಒಡಿಶಾ, ಕೇರಳ, ರಾಜಸ್ಥಾನ ಮತ್ತು ಉತ್ತರ ಪ್ರದೇಶದ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.
