ಕಡೂರು ಪುರಸಭೆಗೆ ಮತ್ತೆ ಭಂಡಾರಿ ಶ್ರೀನಿವಾಸ್ ಅಧ್ಯಕ್ಷ

| Published : Aug 27 2024, 01:39 AM IST

ಸಾರಾಂಶ

ಕಡೂರು, ತೀವ್ರ ಕುತೂಹಲ ಮೂಡಿಸಿದ್ದ ಕಡೂರು ಪುರಸಭೆ ಅಧ್ಯಕ್ಷರಾಗಿ ಭಂಡಾರಿ ಶ್ರೀನಿವಾಸ್ ಪುನರಾಯ್ಕೆಯಾಗಿದ್ದು, ಉಪಾಧ್ಯಕ್ಷೆ ಯಾಗಿ ಮಂಜುಳಾ ಚಂದ್ರು ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ಬಿಜೆಪಿಯ ಮಂಜುಳಾ ಆಯ್ಕೆ । ಕಳೆದ ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್‌ ಸೇರಿರುವ ಶ್ರೀನಿವಾಸ್‌

ಕನ್ನಡಪ್ರಭ ವಾರ್ತೆ, ಕಡೂರು

ತೀವ್ರ ಕುತೂಹಲ ಮೂಡಿಸಿದ್ದ ಕಡೂರು ಪುರಸಭೆ ಅಧ್ಯಕ್ಷರಾಗಿ ಭಂಡಾರಿ ಶ್ರೀನಿವಾಸ್ ಪುನರಾಯ್ಕೆಯಾಗಿದ್ದು, ಉಪಾಧ್ಯಕ್ಷೆ ಯಾಗಿ ಮಂಜುಳಾ ಚಂದ್ರು ಆಯ್ಕೆಯಾಗಿದ್ದಾರೆ.

ಪುರಸಭೆ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ ಎರಡನೇ ಅವಧಿ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ-ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಭಂಡಾರಿ ಶ್ರೀನಿವಾಸ್, ಕಾಂಗ್ರೆಸ್‌ನ ತೋಟದಮನೆ ಮೋಹನ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿ-ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಮಂಜುಳಾ ಚಂದ್ರು ಮತ್ತು ಕಾಂಗ್ರೆಸ್ಸಿನ ಜ್ಯೋತಿ ಆನಂದ್ ನಾಮಪತ್ರ ಸಲ್ಲಿಸಿದ್ದರು. ಭಂಡಾರಿ ಶ್ರೀನಿವಾಸ್ ಮತ್ತು ಮಂಜುಳಾ ಚಂದ್ರು ತಲಾ 15 ಮತ ಪಡೆದರೆ, ತೋಟದಮನೆ ಮೋಹನ್ ಮತ್ತು ಜ್ಯೋತಿ ಆನಂದ್ ತಲಾ 5 ಮತ ಪಡೆದರು. ಕಾಂಗ್ರೆಸ್ ಸದಸ್ಯರಾದ ಮಂಡಿ ಎಕ್ಬಾಲ್, ಸೈಯ್ಯದ್ ಯಾಸೀನ್ ಮತ್ತು ಪಕ್ಷೇತರ ಸದಸ್ಯ ಈರಳ್ಳಿ ರಮೇಶ್ ಗೈರು ಹಾಜರಾಗಿದ್ದರು. ಚುನಾವಣಾಧಿಕಾರಿಯಾಗಿ ತಹಸೀಲ್ದಾರ್ ಪೂರ್ಣಿಮಾ ಕರ್ತವ್ಯ ನಿರ್ವಹಿಸಿದರು.

- ಕಾಂಗ್ರೆಸ್ ಪಕ್ಷದಲ್ಲಿದ್ದೇನೆ: ಅಧ್ಯಕ್ಷರ ಸ್ಪಷ್ಟನೆ

ಆನಂತರ ಪುರಸಭೆ ಮುಂಭಾಗದಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಪುರಸಭಾ ನೂತನ ಅಧ್ಯಕ್ಷ ಭಂಡಾರಿ ಶ್ರೀನಿವಾಸ್‌ ಮಾತನಾಡಿ, ಈ ಚುನಾವಣೆಯಲ್ಲಿ ಮೈತ್ರಿ ಧರ್ಮ ಪಾಲನೆ ಮಾಡುವ ಮೂಲಕ ಅಧ್ಯಕ್ಷನಾಗಿದ್ದೇನೆ. ಆದರೆ ಕಳೆದ ವಿಧಾನಸಭೆ ಚುನಾವಣೆ ಸಮಯದಲ್ಲಿ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾದ ಕಾರಣ ನಾನು ಈಗ ಕಾಂಗ್ರೆಸ್ ಪಕ್ಷದಲ್ಲಿದ್ದು, ಅಧ್ಯಕ್ಷನಾಗಿ ಆಯ್ಕೆಯಾಗಿರುವೆ ಎಂದು ಸ್ಪಷ್ಟಪಡಿಸಿದರು.

ಈ ಹಿಂದಿನ ಮೊದಲ ಅವಧಿಯಲ್ಲಿ ಜೆಡಿಎಸ್‌ಗೆ ಅಧ್ಯಕ್ಷ ಮತ್ತು ಬಿಜೆಪಿಗೆ ಉಪಾಧ್ಯಕ್ಷ ಸ್ಥಾನ ದೊರೆತಿತ್ತು. ಆಗ ಎರಡನೇ ಅವಧಿಗೆ ಅಧ್ಯಕ್ಷ ಸ್ಥಾನ ಬಿಜೆಪಿಗೆ ಮತ್ತು ಉಪಾಧ್ಯಕ್ಷ ಸ್ಥಾನ ಜೆಡಿಎಸ್‌ಗೆ ಎಂಬ ಒಪ್ಪಂದವಾಗಿತ್ತು. ಆದರೆ ಅಧ್ಯಕ್ಷರಾಗಿ ಜೆಡಿಎಸ್ ಸದಸ್ಯನಾದ ನನ್ನನ್ನೆ ಮುಂದುವರಿಸುವ ಮತ್ತು ಉಪಾಧ್ಯಕ್ಷರಾಗಿ ಬಿಜೆಪಿಯ ಮಂಜುಳಾ ಚಂದ್ರು ಅವರನ್ನು ಆಯ್ಕೆ ಮಾಡುವ ನಿರ್ಧಾರವನ್ನು ಬೆಳ್ಳಿಪ್ರಕಾಶ್ ಪ್ರಕಟಿಸಿದ್ದಾರೆ. ಮೂವರು ಪಕ್ಷೇತರರು ಬೆಂಬಲಿಸಿದ್ದಾರೆ ಎಂದರು.

ಚುನಾವಣೆಗೆ ಮಾತ್ರ ಪಕ್ಷ. ಪಕ್ಷ ಭೇದವಿಲ್ಲದೆ ಎಲ್ಲ ಸದಸ್ಯರೂ ಒಟ್ಟಾಗಿ ಪಟ್ಟಣದ ಅಭಿವೃದ್ಧಿಯತ್ತ ಗಮನ ಹರಿಸುತ್ತೇವೆ. ಶಾಸಕರಾದ ಕೆ.ಎಸ್. ಆನಂದ್‌ ಅವರ ಪರಿಶ್ರಮದಿಂದ ಶೀಘ್ರದಲ್ಲೆ ಕಡೂರು ಪುರಸಭೆ ನಗರಸಭೆಯಾಗಿ ಮೇಲ್ದರ್ಜೆಗೇರಲಿದೆ ಎಂದು ತಿಳಿಸಿದರು.

ಶಾಸಕ ಕೆ.ಎಸ್.ಆನಂದ್ ಮತ್ತು ಮಾಜಿ ಶಾಸಕ ಬೆಳ್ಳಿ ಪ್ರಕಾಶ್, ವೈ.ಎಸ್.ವಿ.ದತ್ತ, ಪುರಸಭೆ ಸದಸ್ಯರು ಮತ್ತು ಪುರಸಭೆ ಅಧಿಕಾರಿ ವರ್ಗ ರವರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ನೂತನ ಉಪಾಧ್ಯಕ್ಷೆ ಮಂಜುಳಾ ಚಂದ್ರು ಮಾತನಾಡಿ, ಎರಡೂ ಪಕ್ಷದ ಸದಸ್ಯರು ಮೈತ್ರಿ ಧರ್ಮ ಪಾಲನೆ ಮಾಡಿದ್ದಾರೆ. ಪಟ್ಟಣದ ಅಭಿವೃದ್ಧಿಯಲ್ಲಿ ಪ್ರಾಮಾಣಿಕವಾಗಿ ತೊಡಗಿಸಿಕೊಳ್ಳುತ್ತೇನೆ. ನನ್ನ ಆಯ್ಕೆಗೆ ಕಾರಣರಾದ ಮಾಜಿ ಶಾಸಕ ಬೆಳ್ಳಿಪ್ರಕಾಶ್ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ಸಮಾರಂಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಮಂಜುನಾಥ್, ಪುರಸಭೆ ಸದಸ್ಯರು, ನೌಕರರು, ಗಣ್ಯ ವ್ಯಕ್ತಿಗಳು, ವಿವಿಧ ಪಕ್ಷಗಳ ಮುಖಂಡರು ಅಭಿನಂದಿಸಿದರು. -- ಬಾಕ್ಸ್ ---.

ಒಟ್ಟು 23 ಸದಸ್ಯ ಬಲದ ಪುರಸಭೆಯಲ್ಲಿ ಕಾಂಗ್ರೆಸ್ 7, ಬಿಜೆಪಿ ಮತ್ತು ಜೆಡಿಎಸ್ ತಲಾ 6 , ಪಕ್ಷೇತರ 4 ಸದಸ್ಯರಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಕಾರಣದಿಂದ ಎರಡೂ ಪಕ್ಷಗಳ 12 ಹಾಗೂ 3 ಪಕ್ಷೇತರ ಸದಸ್ಯರ ಬೆಂಬಲ ಪಡೆದು ಭಂಡಾರಿ ಶ್ರೀನಿವಾಸ್ ಹಾಗೂ ಮಂಜುಳಾ ಚಂದ್ರು ಅಧ್ಯಕ್ಷ ಉಪಾಧ್ಯಕ್ಷರಾಗಿ ಆಯ್ಕೆಯಾದರು.

ಬಿಜೆಪಿ- ಜೆಡಿಎಸ್ ಕಾರ್ಯಕರ್ತರು ತಮ್ಮ ಪಕ್ಷಗಳ ಬಾವುಟ ಹಿಡಿದು ಪಟಾಕಿ ಸಿಡಿಸಿ ಸಂಭ್ರಮಿಸಿದರೆ. ಕಾಂಗ್ರೆಸ್ ಕಾರ್ಯಕರ್ತರು ಕೂಡ ಕಾಂಗ್ರೆಸ್ ಬಾವುಟ ಹಿಡಿದು ಜೈಕಾರ ಕೂಗಿದರು. ಶಾಸಕ ಕೆ.ಎಸ್ ಆನಂದ್, ಮಾಜಿ ಶಾಸಕ ಬೆಳ್ಳಿ ಪ್ರಕಾಶ್, ವೈ.ಎಸ್‌.ವಿ.ದತ್ತ ಅಭಿನಂದನಾ ಕಾರ್ಯಕ್ರಮಕ್ಕೆ ಗೈರಾಗಿದ್ದರು. ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. --------------------

26ಕೆಕೆಡಿಯು1.

ಕಡೂರು ಪುರಸಭೆ ನೂತನ ಅಧ್ಯಕ್ಷರಾದ ಭಂಡಾರಿ ಶ್ರೀನಿವಾಸ್ ಮತ್ತು ಉಪಾಧ್ಯಕ್ಷೆ ಮಂಜುಳಾ ಚಂದ್ರು ರವರನ್ನು ಅಭಿನಂದಿಸಲಾಯಿತು.26ಕೆಕೆಡಿು1ಎ.

ಕಡೂರು ಪುರಸಭೆಯ ನೂತನ ಅಧ್ಯಕ್ಷರಾದ ಭಂಡಾರಿ ಶ್ರೀನಿವಾಸ್ ಮತ್ತು ಉಪಾಧ್ಯಕ್ಷರಾದ ಶ್ರೀಮತಿ ಮಂಜುಳಾ ಚಂದ್ರು ಗೆಲುವಿನ ನಗೆ ಬೀರಿದರು.