ಸಾರಾಂಶ
ಕಲಾವಿದೆ ಭೀಮವ್ವ ಅವರು ಕಲೆಗೆ ಬದುಕನ್ನು ಅರ್ಪಿಸಿಕೊಂಡವರು.
ಕನ್ನಡಪ್ರಭ ವಾರ್ತೆ ಕೊಪ್ಪಳ
ವಿದ್ಯೆ ಪಡೆಯಲಾಗದಿದ್ದರೂ ಹದಿನೆಂಟು ಪರ್ವದ ಮಹಾಭಾರತ ಎಂಟು ಅಧ್ಯಾಯಗಳ ರಾಮಾಯಣವನ್ನು ನಿರರ್ಗಳವಾಗಿ ಹಾಡು, ಕಥೆ ಮೂಲಕ ಹೇಳುತ್ತಾ ತೊಗಲುಗೊಂಬೆ ಆಟದ ಕಲಾವಿದೆ ಭೀಮವ್ವ ಅವರು ಕಲೆಗೆ ಬದುಕನ್ನು ಅರ್ಪಿಸಿಕೊಂಡವರು. ಅವರ ಪಾಲಿಗೆ ಕಲೆಯೇ ದೇವರು ಎಂದು ಅಂಚೆ ನಿರೀಕ್ಷಕ ಮಹಾಂತೇಶ ತೊಗರಿ ಹೇಳಿದರು.ಸೋಮವಾರ ಕೊಪ್ಪಳದ ಪ್ರಧಾನ ಅಂಚೆ ಕಚೇರಿಯಲ್ಲಿ ಜರುಗಿದ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿರುವ ಭೀಮವ್ವ ಶಿಳ್ಳಿಕ್ಯಾತರ ಅವರ ಅಂಚೆ ಚೀಟಿ ಸಮರ್ಪಣೆ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸುಮಾರು 12ನೇ ವಯಸ್ಸಿನಿಂದ ಆರಂಭಿಸಿ ಈವರೆಗಿನ ಸುದೀರ್ಘ ಬದುಕಿನ ಪಯಣದಲ್ಲಿ ಯುರೋಪ್ ಸ್ವಿಟ್ಜರ್ಲ್ಯಾಂಡ್, ನೆದರ್ಲ್ಯಾಂಡ್ ಫ್ರಾನ್ಸ್, ಇಟಲಿ ಅಮೆರಿಕದಂಥ ದೇಶಗಳಿಗೆ ಹೋಗಿ ತೊಗಲುಗೊಂಬೆ ಆಟದ ಪ್ರದರ್ಶನ ನೀಡಿರುವುದು ದೇಶವೆ ಹೆಮ್ಮೆ ಪಡುವಂಥದ್ದು ಎಂದರು.ಭೀಮವ್ವ ಅವರ ಅಂಚೆ ಚೀಟಿ ಪ್ರಾಯೋಜಿಸಿದ ಸಾಹಿತಿ ಸಾವಿತ್ರಿ ಮುಜುಮದಾರ ಮಾತನಾಡಿ, ಬಸ್ಸುಗಳ ಸೌಕರ್ಯ ಇಲ್ಲದಂಥ ಕಾಲದಲ್ಲಿ ಗ್ರಾಮಗಳಿಗೆ ನಡೆದುಕೊಂಡು ಹೋಗಿ, ಬದುಕಿನ ಅತ್ಯಂತ ಕಷ್ಟದ ಕಾಲದಲ್ಲಿಯೂ ತೊಗಲುಗೊಂಬೆ ಆಟದ ಪ್ರದರ್ಶನ ಮಾಡಿ ಕಲಾನಿಷ್ಠೆ ತೋರಿದವರು ಭೀಮವ್ವ. ಅವರ ಬದುಕು ಮತ್ತು ಕಲಾ ಸಾಧನೆ ಕುರಿತು ಪಿಎಚ್‌ಡಿ ಮಾಡುವಷ್ಟು ಅನುಭವದ ಗಣಿ. ಅವರಿಗೆ ಪದ್ಮಶ್ರೀ ಪ್ರಶಸ್ತಿ ಬಂದಿರುವುದು ಕೊಪ್ಪಳಕ್ಕೆ ಮಾತ್ರವಲ್ಲ ಕರ್ನಾಟಕಕ್ಕೂ ಹೆಮ್ಮೆ ಎಂದು ಹೇಳಿದರು.
ಕೊಪ್ಪಳದ ಅಂಚೆ ವಿಭಾಗೀಯ ಅಧೀಕ್ಷಕ ಎನ್.ಜಿ. ಬಂಗಿಗೌಡರ್, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೊಪ್ಪಳ ಪ್ರಧಾನ ಅಂಚೆ ಕಚೇರಿ ಪಾಲಕ ಬಿ. ನಾಗರಾಜ್ ಮಾತನಾಡಿದರು.ತೇಜಸ್ವಿನಿ ಪ್ರಾರ್ಥಿಸಿದರು. ಜಿ.ಎನ್. ಹಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸಕ್ರಪ್ಪ ಹೂಗಾರ್ ನಿರೂಪಿಸಿದರು. ರವಿ ಕಾಂತನವರ ವಂದಿಸಿದರು.