ಬ್ರಿಟಿಷರಿಗೆ ಸಿಂಹಸ್ವಪ್ನರಾಗಿ ಕಾಡಿದ ಬಿರ್ಸಾ ಮುಂಡಾ

| Published : Nov 16 2025, 01:45 AM IST

ಸಾರಾಂಶ

ಚಾಮರಾಜನಗರ: ಬ್ರಿಟಿಷರ ದಬ್ಬಾಳಿಕೆ, ಮತಾಂತರದಂತಹ ದೌರ್ಜನ್ಯಗಳನ್ನು ಮೆಟ್ಟಿನಿಂತು ಅರಣ್ಯ ಸಂಪತ್ತು ರಕ್ಷಣೆ ಹಕ್ಕುಗಳಿಗಾಗಿ ಬುಡಕಟ್ಟು ಜನರನ್ನು ಸಂಘಟಿಸಿದ ಸ್ವಾತಂತ್ರ್ಯ ಹೋರಾಟಗಾರ ಬಿರ್ಸಾ ಮುಂಡಾ ಅವರು ಆದಿವಾಸಿಗಳ ಅಸ್ಮಿತೆ ಎಂದು ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ ಹೇಳಿದರು.

ಚಾಮರಾಜನಗರ: ಬ್ರಿಟಿಷರ ದಬ್ಬಾಳಿಕೆ, ಮತಾಂತರದಂತಹ ದೌರ್ಜನ್ಯಗಳನ್ನು ಮೆಟ್ಟಿನಿಂತು ಅರಣ್ಯ ಸಂಪತ್ತು ರಕ್ಷಣೆ ಹಕ್ಕುಗಳಿಗಾಗಿ ಬುಡಕಟ್ಟು ಜನರನ್ನು ಸಂಘಟಿಸಿದ ಸ್ವಾತಂತ್ರ್ಯ ಹೋರಾಟಗಾರ ಬಿರ್ಸಾ ಮುಂಡಾ ಅವರು ಆದಿವಾಸಿಗಳ ಅಸ್ಮಿತೆ ಎಂದು ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ ಹೇಳಿದರು.

ನಗರದಲ್ಲಿ ಕೇಂದ್ರ ಬುಡಕಟ್ಟು ವ್ಯವಹಾರಗಳ ಮಂತ್ರಾಲಯ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಮೈಸೂರಿನ ಕೇಂದ್ರ ಸಂವಹನ ಇಲಾಖೆ, ಜಿಲ್ಲಾಡಳಿತ, ಜಿಪಂ ಹಾಗೂ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಜನಜಾತೀಯ ಗೌರವ ದಿವಸದ ಅಂಗವಾಗಿ ಆಯೋಜಿಸಿದ್ದ ಕ್ರಾಂತಿಕಾರಿ ಬುಡಕಟ್ಟು ನಾಯಕ ಭಗವಾನ್ ಶ್ರೀ ಬಿರ್ಸಾ ಮುಂಡಾ ೧೫೦ನೇ ಜಯಂತಿ ಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಭಾರತದ ಸ್ವಾತಂತ್ರ್ಯಕ್ಕಾಗಿ ಹಲವಾರು ನಾಯಕರು ಹೋರಾಟ ನಡೆಸಿದ್ದಾರೆ. ಕಾಡನ್ನು ದಿಢೀರ್ ಪ್ರವೇಶಿಸಿ ಆದಿವಾಸಿಗಳನ್ನು ಕ್ರಿಶ್ಚಿಯನ್ನರು ಮತಾಂತರ ಮಾಡಿ ದೌರ್ಜನ್ಯ ನಡೆಸಿ ಕಾಡಿನ ಸಂಪತ್ತನ್ನು ದೋಚುತ್ತಿದ್ದ ಬಿರ್ಸಾ ಮುಂಡಾ ಬ್ರಿಟಿಷರಿಗೆ ಸಿಂಹಸ್ವಪ್ನರಾಗಿ ಕಾಡಿದರು. ಬಿರ್ಸಾ ಮುಂಡಾ ಅವರು ದೇಶದ ಹಲವು ಭಾಗಗಳಲ್ಲಿದ್ದ ಬುಡಕಟ್ಟು ಜನರಿಗೆ ಸ್ವಾತಂತ್ರ್ಯದ ಜನಜಾಗೃತಿ ಮೂಡಿಸಿ ಗೆರಿಲ್ಲಾ ಯುದ್ಧತಂತ್ರದ ಮೂಲಕ ಬ್ರಿಟಿಷರನ್ನು ಹಿಮ್ಮೆಟ್ಟಿಸಿದರು. ಆದರೂ ಪಿರಂಗಿಗಳ ಆಧುನಿಕ ಯುದ್ದೋಪಕರಣಗಳ ಮುಂದೆ ತಲೆಬಾಗಿ ಸೆರೆಯಾದ ಬಿರ್ಸಾ ಮುಂಡಾ, ಆದಿವಾಸಿ ಸಂಸ್ಕೃತಿಗೆ ಮರುಹುಟ್ಟು ನೀಡಿದರು. ಬುಡಕಟ್ಟು ಜನರ ದನಿಯಾದ ಬಿರ್ಸಾ ಮುಂಡ ಅವರ ತ್ಯಾಗ, ಬಲಿದಾನ ಇಂದಿನ ಯುವ ಪೀಳಿಗೆಗೆ ಪ್ರೇರಣೆಯಾಗಿದೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಶಿಲ್ಪಾನಾಗ್ ಮಾತನಾಡಿ, ಚಾಮರಾಜನಗರ ಜಿಲ್ಲೆಯಲ್ಲಿ ಶೇ.೫೦ಕ್ಕೂ ಅರಣ್ಯ ಪ್ರದೇಶವಿದ್ದು, ಆದಿವಾಸಿಗಳ ದಿನನಿತ್ಯದ ಜೀವನ ಕಾಡಿನೊಂದಿಗೆ ಆರಂಭವಾಗಲಿದೆ. ಕಾಡಿನ ನಿಜವಾದ ರಕ್ಷಕರು ನೀವು, ಅರಣ್ಯ ಸಂಪತ್ತು, ವನ್ಯಜೀವಿ ಸಂರಕ್ಷಣೆ ನಿಮ್ಮ ಕಾಯಕವಾಗಿದೆ. ಅರಣ್ಯ ರಕ್ಷಣೆ ಕಾರ್ಯದಲ್ಲಿ ನಿರಂತರವಾಗಿ ಮುಂದುವರಿಯಬೇಕು. ಪ್ರಜಾಪ್ರಭುತ್ವ ಎಲ್ಲರಿಗೂ ಬದುಕುವ ಹಕ್ಕು ನೀಡಿದೆ. ಆದಿವಾಸಿಗಳು ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಹೇಳಿದರು.

ಆದಿವಾಸಿ ಯುವಜನತೆ ಬಾಲ್ಯವಿವಾಹದ ವಿರುದ್ಧ ಜಾಗೃತರಾಗಬೇಕು. ಆರೋಗ್ಯ ಇಲಾಖೆಯಿಂದ ಹೆಣ್ಣುಮಕ್ಕಳಲ್ಲಿ ರಕ್ತಹೀನತೆ ತಡೆಯಲು ಮೊಬೈಲ್ ಅನಿಮಿಯಾ ಕಿಟ್ ನೀಡಲಾಗುತ್ತಿದೆ. ಹೆಣ್ಣುಮಕ್ಕಳು ಮುಟ್ಟಿನ ತೊಂದರೆ ಅನುಭವಿಸದಿರಲು ಪ್ರಾಣಸಖಿ ಕಾರ್ಯಕ್ರಮ ಜಾರಿಗೊಳಿಸಲಾಗಿದೆ. ಹಾಡಿಗಳಿಗೆ ಮೂಲಸೌಲಭ್ಯ ಒದಗಿಸಲು ೪೨ ಕೋಟಿ ವೆಚ್ಚದಲ್ಲಿ ಪ್ರತಿ ಮನೆಗೂ ವಿದ್ಯುತ್ ಸಂಪರ್ಕ ನೀಡಲಾಗಿದೆ, ರಸ್ತೆ, ಕುಡಿಯುವ ನೀರು, ಅರಣ್ಯ ಹಕ್ಕುಪತ್ರ, ಆಧಾರ್ ಕಾರ್ಡ್ ಸೌಲಭ್ಯಗಳನ್ನು ಒದಗಿಸಿ ಆದಿವಾಸಿಗಳನ್ನು ಮುಖ್ಯವಾಹಿನಿಗೆ ತರಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಚಾಮರಾಜನಗರ ವಿವಿ ಕುಲಪತಿ ಪ್ರೊ.ಎಂ.ಆರ್.ಗಂಗಾಧರ್ ಮಾತನಾಡಿ, ಚಿಕ್ಕವಯಸ್ಸಿನಲ್ಲಿಯೇ ಅತ್ಯಂತ ಚುರುಕು ಬುದ್ದಿಯ ಬಿರ್ಸಾ ಮುಂಡಾ ಬ್ರಿಟಿಷರ ಧರ್ಮಾಂಧತೆ ಅದಿವಾಸಿಗಳ ಮೂಲ ಸಂಸ್ಕೃತಿ ನಾಶಕ್ಕೆ ಕಾರಣವಾಗಿತ್ತು. ಪೊಲೀಸರ ಬೆದರಿಕೆ, ತೆರಿಗೆ ಹೆಚ್ಚಳದ ಹಿಂಸೆ ಸೇರಿದಂತೆ ಬ್ರಿಟಿಷರ ಅನ್ಯಾಯವನ್ನು ಸಹಿಸದ ಬಿರ್ಸಾ ಮುಂಡಾ ಅವರು ಆದಿವಾಸಿಗಳ ಆಶಾಕಿರಣವಾಗಿ ಮೂಡಿಬಂದರು. ದನಿ ಇಲ್ಲದವರಿಗೆ ಗಟ್ಟಿಧ್ವನಿಯಾಗಿದ್ದರು ಎಂದರು.

ಇದೇ ವೇಳೆ ಎಸ್ಸೆಸ್ಸೆಲ್ಸಿ, ಪಿಯುಸಿ ಹಾಗೂ ಉನ್ನತ ಶಿಕ್ಷಣ ಪಡೆಯುತ್ತಿರುವ ಆದಿವಾಸಿ ವಿದ್ಯಾರ್ಥಿಗಳಿಗೆ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ರಾಜ್ಯ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಾಮೇಗೌಡ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ.ಸಿ.ಮಾದೇಗೌಡ, ಬಿರ್ಸಾ ಮುಂಡಾ ಪ್ರತಿಮೆ ಶಿಲ್ಪಿ ಮಧುಸೂಧನ್ ಅವರನ್ನು ಗೌರವಿಸಲಾಯಿತು. ಪಿ.ಎಂ.ಜನ್‌ಮನ್ ಯೋಜನೆಯಡಿ ಮನೆಗಳ ಕೀ ಹಾಗೂ ಪಡಿತರ ಚೀಟಿ ಫಲಾನುಭವಿಗಳಿಗೆ ಹಸ್ತಾಂತರ ಮಾಡಲಾಯಿತು.

ಚುಡಾ ಅಧ್ಯಕ್ಷರಾದ ಮಹಮದ್ ಅಸ್ಗರ್ ಮುನ್ನಾ, ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಮೈಸೂರಿನ ಕೇಂದ್ರ ಸಂವಹನ ಇಲಾಖೆಯ ಕ್ಷೇತ್ರ ಪ್ರಚಾರಾಧಿಕಾರಿ ಶೃತಿ, ಜಿಪಂ ಮುಖ್ಯ ಯೋಜನಾಧಿಕಾರಿ ಹೊನ್ನರಾಜು, ಬುಡಕಟ್ಟು ಜನಾಂಗದ ಮುಖಂಡರಾದ ರಂಗೇಗೌಡ, ಜಡೇಗೌಡ, ಕೋಣೂರೇಗೌಡ, ಮುದ್ದಯ್ಯ, ಕೇತಮ್ಮ, ರತ್ನಮ್ಮ, ಪುಟ್ಟಮ್ಮ, ದೊಡ್ಡಸಿದ್ದಯ್ಯ, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಚಾಮರಾಜೇಶ್ವರ ದೇವಾಲಯದಿಂದ ಬೆಳ್ಳಿರಥದಲ್ಲಿ ಅಲಂಕೃತಗೊಂಡ ಬಿರ್ಸಾ ಮುಂಡಾ ಅವರ ಭಾವಚಿತ್ರ ಮೆರವಣಿಗೆಗೆ ಎಂಎಸ್‌ಐಎಲ್ ಅಧ್ಯಕ್ಷರು ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಚಾಲನೆ ನೀಡಿದರು. ಬಿರ್ಸಾ ಮುಂಡಾ ಅವರ ಭಾವಚಿತ್ರಕ್ಕೆ ಶಾಸಕ ಎ.ಆರ್. ಕೃಷ್ಣಮೂರ್ತಿ ಪುಷ್ಪ ನಮನ ಸಲ್ಲಿಸಿದರು.

15ಸಿಎಚ್ಎನ್22

ಚಾಮರಾಜನಗರದಲ್ಲಿ ಕೇಂದ್ರ ಬುಡಕಟ್ಟು ವ್ಯವಹಾರಗಳ ಮಂತ್ರಾಲಯ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಮೈಸೂರಿನ ಕೇಂದ್ರ ಸಂವಹನ ಇಲಾಖೆ, ಜಿಲ್ಲಾಡಳಿತ, ಜಿಪಂ ಹಾಗೂ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಜನಜಾತೀಯ ಗೌರವ ದಿವಸದ ಅಂಗವಾಗಿ ಆಯೋಜಿಸಿದ್ದ ಕ್ರಾಂತಿಕಾರಿ ಬುಡಕಟ್ಟು ನಾಯಕ ಭಗವಾನ್ ಬಿರ್ಸಾ ಮುಂಡಾ ೧೫೦ನೇ ಜಯಂತಿ ಮಹೋತ್ಸವವನ್ನು ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ ಉದ್ಘಾಟಿಸಿದರು.

15ಸಿಎಚ್ಎನ್23

ಕೇಂದ್ರ ಬುಡಕಟ್ಟು ವ್ಯವಹಾರಗಳ ಮಂತ್ರಾಲಯ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಮೈಸೂರಿನ ಕೇಂದ್ರ ಸಂವಹನ ಇಲಾಖೆ, ಜಿಲ್ಲಾಡಳಿತ, ಜಿಪಂ ಹಾಗೂ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಜನಜಾತೀಯ ಗೌರವ ದಿವಸದ ಅಂಗವಾಗಿ ಆಯೋಜಿಸಿದ್ದ ಕ್ರಾಂತಿಕಾರಿ ಬುಡಕಟ್ಟು ನಾಯಕ ಭಗವಾನ್ ಬಿರ್ಸಾ ಮುಂಡಾ ೧೫೦ನೇ ಜಯಂತಿ ಮಹೋತ್ಸವದ ಮೆರವಣಿಗೆಗೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಚಾಲನೆ ನೀಡಿದರು.