ಬಿಜೆಪಿಯವರು ಹುಟ್ಟು ಸುಳ್ಳುಗಾರರು: ರಾಮಲಿಂಗಾರೆಡ್ಡಿ

| Published : Feb 13 2024, 12:46 AM IST

ಸಾರಾಂಶ

ಮಾಜಿ ಸಿಎಂ ಕುಮಾರಸ್ವಾಮಿ ಮತ್ತು ಬಿಜೆಪಿಯವರು ಒಂದೇ ಅಲ್ವಾ? ಅದಕ್ಕೆ ಅವರು ಆರೋಪ ಮಾಡುತ್ತಿದ್ದಾರೆ. ಮೈತ್ರಿಯಾಗಿರುವ ಕಾರಣ ಅವರು ಒಬ್ಬರನ್ನೊಬ್ಬರು ಬಿಟ್ಟು ಕೊಡುವುದಿಲ್ಲ.

ಕನ್ನಡಪ್ರಭ ವಾರ್ತೆ ರಾಮನಗರ

ಬಿಜೆಪಿಯವರು ಹುಟ್ಟು ಸುಳ್ಳುಗಾರರು. ಅವರ ಮನೆದೇವರೇ ಸುಳ್ಳು. ಅವರಂತೆ ನಾವು ಇಲ್ಲದೇ ಇರೋದನ್ನು ಸುಳ್ಳು ಹೇಳಿಕೊಂಡು ಬರಲ್ಲ. ನಮ್ಮ ಸರ್ಕಾರ ಏನು ಮಾಡಿದಿಯೋ ಅದನ್ನು ರಾಜ್ಯಪಾಲರು ಭಾಷಣದಲ್ಲಿ ಹೇಳಿದ್ದಾರೆ ಎಂದು ಬಿಜೆಪಿ ವಿರುದ್ಧ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಹರಿಹಾಯ್ದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರ ಮಾತಿಗೆ ಕಿಮ್ಮತ್ತಿಲ್ಲ, ನಾವು ಏನ್ ಮಾಡಿದ್ದೀವೋ ಅದನ್ನೇ ರಾಜ್ಯಪಾಲರು ಭಾಷಣ ಮಾಡಿದ್ದಾರೆ. ಬಿಜೆಪಿಯವರ ರೀತಿ ಇಲ್ಲದೇ ಇರೋದನ್ನು ಸುಳ್ಳು ಹೇಳಿಕೊಂಡು ಬರಲ್ಲ ಎಂದರು.

ರಾಜ್ಯಪಾಲರ ಭಾಷಣದಲ್ಲಿ ರಾಜ್ಯ ಸರ್ಕಾರ ಸುಳ್ಳು ಹೇಳಿಸಿದೆ ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರು ಹುಟ್ಟು ಸುಳ್ಳುಗಾರರು. ಈ ಹಿಂದೆಯೂ ಬಜೆಟ್ ಮೇಲೆ ಭಾಷಣ ಮಾಡಲಾಗಿದೆ. 9 ವರ್ಷಗಳ ಕಾಲ ಅವರು ಆಳ್ವಿಕೆ ಮಾಡಿದ್ದಾರೆ. ಸರ್ಕಾರ ಏನ್ ಬರೆದುಕೊಡುತ್ತದೆ ಅದನ್ನು ರಾಜ್ಯಪಾಲರು ಭಾಷಣ ಮಾಡುತ್ತಾರೆ ಎಂದು ಹೇಳಿದರು.

ಮಾಜಿ ಸಿಎಂ ಕುಮಾರಸ್ವಾಮಿ ಮತ್ತು ಬಿಜೆಪಿಯವರು ಒಂದೇ ಅಲ್ವಾ? ಅದಕ್ಕೆ ಅವರು ಆರೋಪ ಮಾಡುತ್ತಿದ್ದಾರೆ. ಮೈತ್ರಿಯಾಗಿರುವ ಕಾರಣ ಅವರು ಒಬ್ಬರನ್ನೊಬ್ಬರು ಬಿಟ್ಟು ಕೊಡುವುದಿಲ್ಲ ಎಂದು ಟಾಂಗ್ ನೀಡಿದರು.

ರಾಜ್ಯ ಸರ್ಕಾರ ಜಾಹೀರಾತು ಸರ್ಕಾರ, ಬಸ್ ನಲ್ಲಿ ಜನರ ಕರೆತಂದು ಜನಸಂಪರ್ಕ ಸಭೆ ಮಾಡಿಲ್ಲ ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಬಹಿರಂಗ ಸಭೆಯೆಂದರೆ ಬೇರೆ. ಅದಕ್ಕೆ ಯಾರು ಬೇಕಾದರೂ ಬರಬಹುದು. ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಜನಸಂಪರ್ಕ ಸಭೆ ನಡೆಯುತ್ತವೆ. ಫಲಾನುಭವಿಗಳು ಎಲ್ಲಾ ಒಂದೇ ಕಡೆ ಇರುವುದಿಲ್ಲ. ಎಲ್ಲಾ ಸರ್ಕಾರ ಜನ ಕರೆದುಕೊಂಡು ಬಂದಂತೆಯೇ ನಮ್ಮ ಸರ್ಕಾರವೂ ಕರೆತಂದಿದೆ ಎಂದರು.

ಗೃಹಲಕ್ಷ್ಮೀ ಹಣ ಬಂದಿಲ್ಲವೆಂದು ಹೆಣ್ಣುಮಕ್ಕಳು ಅರ್ಜಿ ಹಿಡಿದು ಬರುತ್ತಿದ್ದಾರೆ ಎಂಬ ಕುಮಾರಸ್ವಾಮಿ ಹೇಳಿಕೆಗೆ ರಾಮಲಿಂಗಾರೆಡ್ಡಿಯವರು, ಗ್ಯಾರಂಟಿ ಯೋಜನೆಯಲ್ಲಿನ ಫಲಾನುಭವಿಗಳ ವಿವರವನ್ನು ಅಂಕಿ ಅಂಶಗಳ ಸಮೇತ ಓದಿ ತಿರುಗೇಟು ನೀಡಿದರು.

ಶಕ್ತಿ ಯೋಜನೆಯಡಿ ಸಾರಿಗೆ ಬಸ್ಸುಗಳಲ್ಲಿ ಪ್ರತಿ ನಿತ್ಯ 60-65 ಲಕ್ಷ ಜನ ಪ್ರಯಾಣ ಮಾಡುತ್ತಿದ್ದಾರೆ. ಗೃಹಲಕ್ಷ್ಮೀ ಯೋಜನೆಯಲ್ಲಿ ಒಟ್ಟು 1 ಕೋಟಿ 17 ಲಕ್ಷ ಜನರಿಗೆ ಹಣ ತಲುಪುತ್ತಿದೆ. ಎಲ್ಲೋ ಒಬ್ಬರು ಇಬ್ಬರಿಗೆ ದಾಖಲೆ ಸಮಸ್ಯೆಯಾಗಿರಬಹುದು.

ಯಾರಾದರೂ ಆ ತರಹ ಇರಬಹುದು. ಈಗ ಕಮಿಟಿ ಮಾಡುತ್ತಿದ್ದು, ಅಲ್ಲಿ ಸಮಸ್ಯೆ ಬಗೆಹರಿಸುವ ಕೆಲಸ ಮಾಡಲಾಗುವುದು ಎಂದರು.

ವಿದ್ಯುತ್ ಎಷ್ಟು ಬಳಸುತ್ತಾರೋ ಅದರ ಮೇಲೆ ಶೇ.10ರಷ್ಟು ಹೆಚ್ಚು ಮಾಡಿದ್ದೇವೆ. ನಮ್ಮ ಸರ್ಕಾರ ಚುನಾವಣೆ ಸಂದರ್ಭದಲ್ಲಿ ಹೇಳಿದ ಎಲ್ಲವನ್ನೂ ಕಾರ್ಯಗತಗೊಳಿಸಿದೆ. ಬಡವರ ಪರ ಇರುವ ಕಾರ್ಯಕ್ರಮ ತಪ್ಪಾಗಿದೆ ಸರಿಮಾಡಿಕೊಳ್ಳಿ ಅಂತ ಕುಮಾರಸ್ವಾಮಿ ಹೇಳಿದ್ದರೆ ಕೇಳಬಹುದಾಗಿತ್ತು. ಆದರೆ, ರಾಜಕೀಯ ಕಾರಣಕ್ಕಾಗಿ ವಿನಾಃ ಕಾರಣ ಅವರು ಆರೋಪದಲ್ಲಿ ತೊಡಗಿದ್ದಾರೆ ಎಂದು ರಾಮಲಿಂಗಾರೆಡ್ಡಿ ಟೀಕಿಸಿದರು.

ಬಿಜೆಪಿ ಸರ್ಕಾರದಲ್ಲಿ 40 ಪರ್ಸೆಂಟ್ ಕಮಿಷನ್ ಇತ್ತು. ಆಗ ಮಾಜಿ ಸಿಎಂ ಕುಮಾರಸ್ವಾಮಿ ಏನೂ ಮಾತಾಡಲಿಲ್ಲ. ಈಗ ನಮ್ಮ ಸರ್ಕಾರದಲ್ಲಿ 40 ಪರ್ಸೆಂಟ್ ಅಲ್ಲ, ಲಂಚವೇ ಇಲ್ಲ. ಅದಕ್ಕೆ ನಾವು ಇಲ್ಲ ಅಂತ ಹೇಳುತ್ತಿದ್ದೇವೆ. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣರವರ ಹೇಳಿಕೆಯನ್ನು ನಾನು ಪೇಪರ್ ನಲ್ಲಿ ಓದಿದ್ದು ಅಷ್ಟೇ. ನನಗೆ ಅವರ ಹೇಳಿಕೆ ಬಗ್ಗೆ ಏನೂ ಗೊತ್ತಿಲ್ಲ.

- ರಾಮಲಿಂಗಾರೆಡ್ಡಿ, ಜಿಲ್ಲಾ ಉಸ್ತುವಾರಿ ಸಚಿವರು, ರಾಮನಗರ