‘ರಾಷ್ಟ್ರಪಿತ ಗಾಂಧೀಜಿ ಅವರ ಹೆಸರನ್ನೇ ಅಳಿಸುವ ಪಿತೂರಿಯನ್ನು ಬಿಜೆಪಿ ಮಾಡುತ್ತಿದೆ. ಈ ದ್ವೇಷ ರಾಜಕಾರಣ ಸೋಲಿಸಲು ಜ.5 ರಿಂದ ಗ್ರಾಮ ಪಂಚಾಯ್ತಿಯಿಂದ ರಾಜ್ಯಮಟ್ಟದವರೆಗೆ ಹೋರಾಟ ಹಮ್ಮಿಕೊಂಡಿದ್ದು, ಎಲ್ಲರೂ ಕೈಜೋಡಿಸಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ, ಬೆಂಗಳೂರು

‘ರಾಷ್ಟ್ರಪಿತ ಗಾಂಧೀಜಿ ಅವರ ಹೆಸರನ್ನೇ ಅಳಿಸುವ ಪಿತೂರಿಯನ್ನು ಬಿಜೆಪಿ ಮಾಡುತ್ತಿದೆ. ಈ ದ್ವೇಷ ರಾಜಕಾರಣ ಸೋಲಿಸಲು ಜ.5 ರಿಂದ ಗ್ರಾಮ ಪಂಚಾಯ್ತಿಯಿಂದ ರಾಜ್ಯಮಟ್ಟದವರೆಗೆ ಹೋರಾಟ ಹಮ್ಮಿಕೊಂಡಿದ್ದು, ಎಲ್ಲರೂ ಕೈಜೋಡಿಸಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದ್ದಾರೆ.

ಗಾಂಧೀಜಿ ಸತ್ತ ಮೇಲೂ ಬಿಜೆಪಿಯವರು ಅವರ ಮೇಲಿನ ದ್ವೇಷ ಬಿಟ್ಟಿಲ್ಲ. ಮಹಾತ್ಮ ಗಾಂಧೀಜಿ ನರೇಗಾ ಯೋಜನೆಯನ್ನು ಜಿ ರಾಮ್‌ ಜಿ ಎಂದು ಬದಲಿಸಿದ್ದಾರೆ. ಈ ರಾಮ ದಶರಥ ರಾಮ ಅಲ್ಲ ಬಿಜೆಪಿ ರಾಮ. ಈ ಷಡ್ಯಂತ್ರವನ್ನು ವಿಫಲಗೊಳಿಸಬೇಕಿದೆ ಎಂದೂ ಅವರು ತೀಕ್ಷ್ಣವಾಗಿ ಹೇಳಿದ್ದಾರೆ.

ಭಾನುವಾರ ಕೆಪಿಸಿಸಿ ವತಿಯಿಂದ ಕೆಪಿಸಿಸಿಯ ಭಾರತ್ ಜೋಡೋ ಭವನದಲ್ಲಿ ಆಯೋಜಿಸಲಾಗಿದ್ದ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಎಂಜಿ-ನರೇಗಾ ಹೆಸರು ಹಾಗೂ ರೂಪುರೇಷೆ ಬದಲಿಸುವ ಮೂಲಕ ಗ್ರಾಮೀಣ ಆರ್ಥಿಕತೆಯನ್ನೇ ಹಾಳು ಮಾಡುವ ಹುನ್ನಾರ ಮಾಡಲಾಗಿದೆ. ಈ ಯೋಜನೆಯಡಿ ದಲಿತರು, ಹಿಂದುಳಿದವರಿಗೆ ಹೆಚ್ಚಾಗಿ ಕೆಲಸ ದೊರಕುತ್ತಿತ್ತು. ಜನರಿಗೆ ಕೆಲಸ ಇಲ್ಲದ ಸಮಯದಲ್ಲಿ ಕೆಲಸ ಸಿಗುತ್ತಿತ್ತು. ಇದಕ್ಕೆ ಕೇಂದ್ರ ಶೇ.90 ರಷ್ಟು ನೆರವು ನೀಡುತ್ತಿತ್ತು. ಕೇಂದ್ರದ ಪಾಲನ್ನು ಶೇ.60ಕ್ಕೆ ಇಳಿಸುವ ಮೂಲಕ ರಾಜ್ಯಗಳ ಮೇಲೆ ಹೊರೆ ಹೊರಿಸಿ ಯೋಜನೆ ವಿಫಲಗೊಳಿಸಲು ಯತ್ನಿಸುತ್ತಿದ್ದಾರೆ ಎಂದು ಸಿದ್ದರಾಮಯ್ಯ ದೂರಿದರು.

ದೇಶಕ್ಕೆ ಸ್ವಾತಂತ್ರ್ಯ ಬಂದಿದ್ದರೆ ಅದಕ್ಕೆ ಕಾಂಗ್ರೆಸ್ ಕಾರಣ. ಜನಸಂಘ, ಆರ್‌ಎಸ್‌ಎಸ್, ಹಿಂದೂ ಮಹಾ ಸಭಾ, ಬಿಜೆಪಿ ಸಂಘಟನೆಗಳು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿರಲಿಲ್ಲ. ಬಿಜೆಪಿಯ ಒಬ್ಬ ನಾಯಕರೂ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಲಿಲ್ಲ. ಈಗ ಮಹಾತ್ಮಾ ಗಾಂಧಿಯವರನ್ನು ದ್ವೇಷಿಸಲು ಪ್ರಾರಂಭಿಸಿದ್ದಾರೆ. ದೇಶ ಮತ್ತು ಸಮಾಜ ಒಡೆಯುದೇ ಕೆಲಸವೇ ಬಿಜೆಪಿಯ ಸಾಧನೆ. ಮತಗಳ್ಳತನ ಬಿಟ್ಟರೆ ದೇಶಕ್ಕೆ ಅವರು ಇನ್ನೂ ನೀಡಿಲ್ಲ ಎಂದು ಕಿಡಿ ಕಾರಿದರು.

ರಾಜ್ಯಾದ್ಯಂತ ಹೋರಾಟ- ಡಿಕೆಶಿ:

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಮಾತನಾಡಿ, ವಿಶ್ವದಲ್ಲಿ ಎಂತೆಂಥಹ ಚಕ್ರವರ್ತಿಗಳೇ ಮೂಲೆಗುಂಪಾಗಿ ಹೋಗಿದ್ದಾರೆ. ಮುಕ್ಕಾಲು ಪ್ರಪಂಚ ಗೆದ್ದ ಅಲೆಕ್ಸಾಂಡರ್ ಶಾಶ್ವತ ಇರಲಿಲ್ಲ, ಸದ್ದಾಂ ಹುಸೇನ್ ಅವಿತುಕೊಂಡ, ಇನ್ನು ಬೇರೆಯವರದು ಯಾವ ಲೆಕ್ಕ. ಅಹಂಕಾರದಿಂದ ನರೇಗಾ ಯೋಜನೆಯಲ್ಲಿನ ಗಾಂಧೀಜಿ ಹೆಸರು ಬದಲಿಸಲು ಹೊರಟಿದ್ದಾರೆ. ಹೊಸ ನಿಯಮಗಳ ಪ್ರಕಾರ, ಬಿಜೆಪಿ ರಾಜ್ಯಗಳಲ್ಲೇ ನರೇಗಾ ಯೋಜನೆ ಅನುಷ್ಠಾನ ಸಾದ್ಯವಿಲ್ಲ. ಹೀಗಾಗಿ ಇದರ ವಿರುದ್ಧ ಜ.5 ರಿಂದ ರಾಜ್ಯಾದ್ಯಂತ ಹೋರಾಟ ರೂಪಿಸಲಾಗುವುದು ಎಂದು ಹೇಳಿದರು.

ಗ್ಯಾರಂಟಿ ಸಮಿತಿ ಸದಸ್ಯರು, ಬೆಸ್ಕಾಂ, ಆರೋಗ್ಯ ಸಮಿತಿ ಸೇರಿದಂತೆ ಇತರೇ ಇಲಾಖೆಗಳಿಂದ ನಾಮನಿರ್ದೇಶನ ಮಾಡಿರುವ ಸದಸ್ಯರ ಸಂಖ್ಯೆಯೇ 150- 200 ಇದೆ. ಇವರೆಲ್ಲರೂ ಹೋರಾಟದ ಜವಾಬ್ದಾರಿ ತೆಗೆದುಕೊಳ್ಳಬೇಕು. ಇದರ ಉಸ್ತುವಾರಿಗೆ ಜಿ.ಸಿ.ಚಂದ್ರಶೇಖರ್ ‌ಅವರ ನೇತೃತ್ವದಲ್ಲಿ ವೀಕ್ಷಕರನ್ನು ನೇಮಿಸಲಾಗುತ್ತದೆ ಎಂದರು.

70 ಕಾಂಗ್ರೆಸ್ ಕಚೇರಿ ನಿರ್ಮಾಣ

ರಾಜ್ಯಾದ್ಯಂತ 100 ಕಾಂಗ್ರೆಸ್ ಕಚೇರಿಗಳ ನಿರ್ಮಾಣಕ್ಕೆ ಉದ್ದೇಶಿಸಿದ್ದು, ಈಗಾಗಲೇ 70 ಕಾಂಗ್ರೆಸ್ ಕಚೇರಿಗಳು ನಿರ್ಮಾಣವಾಗಿವೆ. ಬೆಂಗಳೂರಿನಲ್ಲೂ ಎರಡು ಕಚೇರಿಗಳ ನಿರ್ಮಾಣ ಮಾಡುತ್ತಿದ್ದೇವೆ. ಮೈಸೂರು ಕಾಂಗ್ರೆಸ್ ಭವನಕ್ಕೆ ಎಲ್ಲಾ ಯೋಜನೆ ಅಂತಿಮ ಮಾಡಿ ಭೂಮಿಪೂಜೆ ಕೂಡ ನೆರವೇರಿಸಿದ್ದೇನೆ ಎಂದು ಇದೇ ವೇಳೆ ಶಿವಕುಮಾರ್ ಮಾಹಿತಿ ನೀಡಿದರು.

ಎಲ್ಲಾ ಜಿಲ್ಲಾ ಹಾಗೂ ತಾಲ್ಲೂಕು ಅಧ್ಯಕ್ಷರುಗಳು ಅಡಿಪಾಯ ಹಾಕಲು ಕಾಯಲು ಹೋಗಬೇಡಿ. ಏಕೆಂದರೆ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್‌ ಗಾಂಧಿ ಅವರು ಬೆಂಗಳೂರಿನಲ್ಲಿ ವರ್ಚುಯಲ್ ಆಗಿ ಎಲ್ಲಾ ಕಾಂಗ್ರೆಸ್ ಭವನಗಳ ಅಡಿಪಾಯಗಳಿಗೆ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು. ಸಚಿವ ಕೆ.ಜೆ. ಜಾರ್ಜ್, ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ. ಚಂದ್ರಶೇಖರ್, ಎಐಸಿಸಿ ಕಾರ್ಯದರ್ಶಿ ಗೋಪಿನಾಥ್ ಹಾಜರಿದ್ದರು.-ಬಾಕ್ಸ್-

2-3 ತಿಂಗಳಿನಲ್ಲಿ ಜಿ.ಪಂ,

ತಾ.ಪಂ. ಚುನಾವಣೆ: ಡಿಕೆಶಿ

ಎರಡು- ಮೂರು ತಿಂಗಳಿನಲ್ಲಿ ಜಿಲ್ಲಾ ಪಂಚಾಯಿತಿ‌ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಗಳನ್ನು ನಡೆಸಬೇಕಿದೆ.‌‌ ಅದಕ್ಕೂ ಈಗಿನಿಂದಲೇ ತಯಾರಿ ಮಾಡಿಕೊಳ್ಳಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತಿಳಿಸಿದ್ದಾರೆ. ಪ್ರಿಯಾಂಕ್ ಖರ್ಗೆ ಅವರಿಗೂ ಇದರ ಬಗ್ಗೆ ತಿಳಿಸಿದ್ದು, ಮೀಸಲಾತಿ ವಿಚಾರವಾಗಿ ನ್ಯಾಯಾಲಯಗಳಲ್ಲಿ ಇರುವ ಕಂಟಕಗಳನ್ನು ಬಗೆಹರಿಸಿ ಇನ್ನೆರಡು ತಿಂಗಳಲ್ಲಿ ಚುನಾವಣೆ ನಡೆಸಲು ಸಿದ್ಧತೆ ಮಾಡಿಕೊಳ್ಳಬೇಕು ಎಂದು ತಿಳಿಸಲಾಗಿದೆ ಎಂದರು.

-ಬಾಕ್ಸ್‌-

ಗಾಂಧಿ ಭಾರತ ಪುಸ್ತಕ

ರೂಪಿಸಿದ್ದೇನೆ: ಡಿಕೆಶಿ

ಮಹಾತ್ಮ ಗಾಂಧಿಯವರ ನೇತೃತ್ವದಲ್ಲಿ ಎಐಸಿಸಿ ಅಧಿವೇಶನ ಹೇಗೆ ನಡೆಯಿತು ಎನ್ನುವ ಕುರಿತಾದ ಗಾಂಧಿ ಭಾರತ ಪುಸ್ತಕವನ್ನು ರೂಪಿಸಿದ್ದೇನೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಇಂಗ್ಲಿಷ್ ಹಾಗೂ ಕನ್ನಡದಲ್ಲಿ ಪುಸ್ತಕ ಲಭ್ಯವಿದೆ. ಮಲ್ಲಿಕಾರ್ಜುನ ಖರ್ಗೆ ಅವರಿಂದ ಬಿಡುಗಡೆ ಮಾಡಿಸಬೇಕು ಎಂದು ಅವರ ಸಮಯ ಕೇಳಿದ್ದೇನೆ. ಇದೇ ಭಾರತ್ ಜೋಡೋ ಸಭಾಂಗಣದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.