ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ವಿಧಾನಸಭೆಯಿಂದ ೧೮ ಶಾಸಕರ ಅಮಾನತು ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅನುದಾನ ದುರ್ಬಳಕೆ ಖಂಡಿಸಿ ನಗರದಲ್ಲಿ ಗುರುವಾರ ಕಾಂಗ್ರೆಸ್ ವಿರುದ್ಧ ಜಿಲ್ಲಾ ಬಿಜೆಪಿ ಪಕ್ಷದಿಂದ ಪ್ರತಿಭಟನೆ ನಡೆಸಿ ಅಮಾನತು ವಾಪಸ್ ಪಡೆಯುವಂತೆ ಜಿಲ್ಲಾಧಿಕಾರಿ ಸಿ. ಸತ್ಯಭಾಮ ಅವರಿಗೆ ಮನವಿ ಸಲ್ಲಿಸಿದರು.ನಗರದ ಆರ್.ಸಿ. ರಸ್ತೆ ಬಳಿ ಇರುವ ಬಿಜೆಪಿ ಕಚೇರಿ ಬಳಿಯಿಂದ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಜಿಲ್ಲಾ ಪಂಚಾಯತ್ ಮುಂದೆ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿದರು. ಬಳಿಕ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ಆಗಮಿಸಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ನೆರವೇರಿಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಶಾಸಕ ಹಾಗೂ ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯಾಧ್ಯಕ್ಷ ಸಿಮೆಂಟ್ ಮಂಜು ಮಾತನಾಡಿ, ವಿಧಾನಸಭೆಯಲ್ಲಿ ಸಣ್ಣ ಕಾರಣಕ್ಕೆ ೧೮ ಜನ ಶಾಸಕರನ್ನು ರಾಜಕೀಯ ದುರುದ್ದೇಶದಿಂದ ೬ ತಿಂಗಳ ಕಾಲ ಅಮಾನತು ಮಾಡಿ ಸ್ಪೀಕರ್ ಆದೇಶ ಹೊರಡಿಸಿರುವುದು ಖಂಡನೀಯ, ಇದೊಂದು ರಾಜಕೀಯ ಪಿತೂರಿಯಾಗಿದೆ. ಕೂಡಲೇ ಅಮಾನತು ಆದೇಶವನ್ನು ಹಿಂಪಡೆದು ಎಲ್ಲರನ್ನೂ ಸಮಾನವಾಗಿ ತೆಗೆದುಕೊಂಡು ಹೋಗುವ ನಿಟ್ಟಿನಲ್ಲಿ ಸ್ಪೀಕರ್ ಮುಂದಾಗಬೇಕು ಎಂದರು.ಕಾಂಗ್ರೆಸ್ ಸರ್ಕಾರ ಸಂವಿಧಾನ ವಿರೋಧಿ ನೀತಿ ಅನುಸರಿಸುತ್ತಿದೆ, ಧರ್ಮದ ಮೇಲೆ ರಾಜಕೀಯ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರ ಸಂವಿಧಾನದ ನೀತಿ ವಿರೋಧಿಸಿ ಗುತ್ತಿಗೆಯಲ್ಲಿ ಮುಸಲ್ಮಾನರಿಗೆ ಶೇ.೪ರಷ್ಟು ಮೀಸಲಾತಿ ನೀಡಲು ಮುಂದಾಗಿದೆ ಅಲ್ಲದೆ, ಪ.ಜಾತಿ, ಪ.ಪಂಗಡಕ್ಕೆ ಮೀಸಲಿಟ್ಟಿದ್ದ ೨೯ ಸಾವಿರ ಕೋಟಿ ಹಣವನ್ನು ದುರ್ಬಳಕೆ ಮಾಡಿ ದಲಿತರಿಗೆ ಸೇರಬೇಕಿದ್ದ ಪಾಲನ್ನು ಇತರೆ ಕಾರ್ಯಕ್ರಮಗಳಿಗೆ ಬಳಸಿಕೊಂಡಿದೆ. ಜೊತೆಗೆ ರಾಜ್ಯದಲ್ಲಿ ಯಾವುದೇ ಹೊಸ ಕಾರ್ಯಕ್ರಮಗಳು ಹಾಗೂ ಹೊಸ ಯೋಜನಗಳು ಜಾರಿಗೆ ಬರುತ್ತಿಲ್ಲ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ಡಿಕೆಶಿಯನ್ನೂ ಅಮಾನತು ಮಾಡಿ:ಅಧಿವೇಶನದಲ್ಲಿ ಸಚಿವ ಕೆ. ಎನ್ ರಾಜಣ್ಣ ತಮ್ಮದೇ ಸರ್ಕಾರದ ವಿರುದ್ಧ ಹನಿಟ್ರ್ಯಾಪ್ ಆರೋಪ ಮಾಡಿದ್ದು ಸರ್ಕಾರ ಯಾರು ಎಂಬುದನ್ನು ಪತ್ತೆ ಹಚ್ಚಿ ಅವರನ್ನು ವಜಾ ಮಾಡುವ ಕೆಲಸ ಮಾಡಬೇಕಿದೆ. ಕೇವಲ ಭ್ರಷ್ಟಾಚಾರದಲ್ಲಿ ಮುಳುಗಿರುವ ಕಾಂಗ್ರೆಸ್ ಸರ್ಕಾರದ ಕಿರುಕುಳದಿಂದ ಹಲವು ಗುತ್ತಿಗೆದಾರರು ಹಾಗೂ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಳ್ಳುವ ಪ್ರಕರಣಗಳು ಕಂಡು ಬರುತ್ತಿವೆ.
ಸರ್ವಾಧಿಕಾರಿ ಧೋರಣೆ:ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ಅವರು ಹನಿಟ್ರ್ಯಾಪ್ ಪ್ರಕರಣ ನನ್ನ ಮೇಲೆ ಪ್ರಯತ್ನ ಆಗಿದೆ ಎಂದು ಸಭೆಯಲ್ಲಿ ತನ್ನ ಅಸಹಾಯಕತೆ ತೋಡಿಕೊಂಡಾಗ ಇದರ ವಿರುದ್ಧ ತನಿಖೆ ಆಗಲಿ ಎಂದು ವಿಧಾನಸೌಧದಲ್ಲಿ ಬಿಜೆಪಿ ಶಾಸಕರು ಧ್ವನಿ ಕೂಗಿ ಪ್ರತಿಭಟನೆ ಮಾಡಿದರೇ ಈ ಭಾರತ ದೇಶದ ಇತಿಹಾಸದಲ್ಲಿ ೬ ತಿಂಗಳ ಕಾಲ ಅಮಾನತು ಮಾಡಿರುವ ಘಟನೆ ನಡೆದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಈ ಸರ್ಕಾರ ತುಘಲಕ್ ಸರ್ಕಾರವಾಗಿ ಬಿಜೆಪಿ ಶಾಸಕರನ್ನು ಅಮಾನತು ಮಾಡಿರುವುದು ನೋಡಿದರೇ ಸರ್ವಾಧಿಕಾರಿ ಧೋರಣೆ ಮಾಡಿದೆ ಎಂದು ಖಂಡಿಸಿದರು. ಇದೇ ವೇಳೆ ಕೂಡಲೇ ಸರ್ಕಾರ ಸಂವಿಧಾನ ವಿರೋಧಿ ಹೇಳಿಕೆ ನೀಡಿರುವ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿದರು.
ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ, ಪ್ರಧಾನ ಕಾರ್ಯದರ್ಶಿ ಅಮಿತ್ ಶೆಟ್ಟಿ, ಹುಡಾ ಮಾಜಿ ಅಧ್ಯಕ್ಷ ನವಿಲೆ ಅಣ್ಣಪ್ಪ, ಅಟಲ್ ಬಿಹಾರಿ ವಾಜಪೇಯಿ ಜನ್ಮ ಶತಾಬ್ಧಿ ಸಹ ಸಂಚಾಲಕ ಪಣೀಶ್, ಬಿಜೆಪಿ ಸಂಘಟನಾ ಪರ್ವ ಜಿಲ್ಲಾ ಸಂಚಾಲಕ ರಾಜಕುಮಾರ್, ನಾರಾಯಣ ಗೌಡ, ಎಸ್.ಡಿ. ಚಂದ್ರು, ರತೀಶ್, ಚನ್ನಕೇಶವ, ಶೋಭನ್ ಬಾಬು, ಶೇಷಮ್ಮ, ಕುಮಾರ್, ರಘು, ಕೆ.ಕೆ. ಪ್ರಸಾದ್, ಸೇರಿದಂತೆ ಮುಖಂಡರು ಹಾಗೂ ಕಾರ್ಯಕರ್ತರು ಇತರರು ಉಪಸ್ಥಿತರಿದ್ದರು.* ಹೇಳಿಕೆ-ದಲಿತರ ಉದ್ಧಾರದ ಹಣವನ್ನು ಗ್ಯಾರಂಟಿ ಯೋಜನೆಗೆ ಉಪಯೋಗಿಸಿಕೊಂಡು ಈ ಜನಾಂಗಕ್ಕೆ ಮೋಸ ಮಾಡಲಾಗುತ್ತಿದೆ. ಹಿಂದುಳಿದ ದಲಿತರಿಗೆ ವಂಚನೆ ಮಾಡಿರುವುದರ ಜೊತೆಗೆ ಮುಸ್ಲಿಮರಿಗೆ ಬಜೆಟ್‌ನಲ್ಲಿ ಹಣ ಮೀಸಲಿಟ್ಟಿದೆ. ಮುಸಲ್ಮಾನರ ಗುತ್ತಿಗೆದಾರರಿಗೆ ಮೀಸಲಾತಿ ನೀಡುವ ಕರಾಳ ಮಸೂದೆ ತಂದಿದೆ. ಹಿಂದೂಗಳ ಮಾರಣಹೋಮಕ್ಕೆ ಕಾಂಗ್ರೆಸ್ ಕಾರಣವಾಗಿದೆ.
- ನವಿಲೆ ಅಣ್ಣಪ್ಪ,ಹುಡಾ ಮಾಜಿ ಅಧ್ಯಕ್ಷ