ಪುತ್ತೂರಿನಲ್ಲಿ ಬಿಜೆಪಿ ಮತ್ತು ಪುತ್ತಿಲ ಪರಿವಾರದ ನಡುವಿನ ಗುದ್ದಾಟ ಮುಂದುವರಿಯುತ್ತಿದ್ದು, ಪುತ್ತಿಲ ಪರಿವಾರದಲ್ಲಿ ಗುರುತಿಸಿಕೊಂಡಿದ್ದ ಬಿಜೆಪಿಯ ಮೂವರು ಪದಾಧಿಕಾರಿಗಳಿಗೆ ಈಗಾಗಲೇ ಗೇಟ್ ಪಾಸ್ ನೀಡಿರುವ ಬಿಜೆಪಿಗೆ ಇದೀಗ ಪುತ್ತಿಲ ಪರಿವಾರದ ಕಾರ್ಯಕರ್ತರು ತಿರುಗೇಟು ನೀಡಿದ್ದಾರೆ.
ಪುತ್ತೂರು: ಪುತ್ತೂರಿನಲ್ಲಿ ಬಿಜೆಪಿ ಮತ್ತು ಪುತ್ತಿಲ ಪರಿವಾರದ ನಡುವಿನ ಗುದ್ದಾಟ ಮುಂದುವರಿಯುತ್ತಿದ್ದು, ಪುತ್ತಿಲ ಪರಿವಾರದಲ್ಲಿ ಗುರುತಿಸಿಕೊಂಡಿದ್ದ ಬಿಜೆಪಿಯ ಮೂವರು ಪದಾಧಿಕಾರಿಗಳಿಗೆ ಈಗಾಗಲೇ ಗೇಟ್ ಪಾಸ್ ನೀಡಿರುವ ಬಿಜೆಪಿಗೆ ಇದೀಗ ಪುತ್ತಿಲ ಪರಿವಾರದ ಕಾರ್ಯಕರ್ತರು ತಿರುಗೇಟು ನೀಡಿದ್ದಾರೆ. ಈ ಹಿಂದೆ ಪುತ್ತಿಲ ಟ್ರಸ್ಟ್ ಅಧ್ಯಕ್ಷರಾಗಿದ್ದು, ಬಿಜೆಪಿಯ ಜಿಲ್ಲಾ ಉಪಾಧ್ಯಕ್ಷ ಆಗಿರುವ ಪ್ರಸನ್ನ ಕುಮಾರ್ ಮಾರ್ತ ಅವರಿಗೆ ಪುತ್ತಿಲ ಪರಿವಾರದ ಕಾರ್ಯಕರ್ತರು ಶ್ರೀನಿವಾಸ ಕಲ್ಯಾಣೋತ್ಸವದಲ್ಲಿ ಭಾಗವಹಿಸಲು ಅಡ್ಡಿ ಪಡಿಸಿ ಅವಮಾನಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಮಾಧ್ಯಮಗಳ ಮುಂದೆ ಪ್ರಸನ್ನ ಕುಮಾರ್ ಮಾರ್ತ ಸೋಮವಾರ ಅಳಲು ತೋಡಿಕೊಂಡು ಕಣ್ಣೀರು ಹಾಕಿದ್ದಾರೆ. ಪ್ರಸನ್ನ ಕುಮಾರ್ ಮಾರ್ತ ಪತ್ನಿಯೊಂದಿಗೆ ಶ್ರೀನಿವಾಸ ಕಲ್ಯಾಣೋತ್ಸವಕ್ಕೆ ತೆರಳಿ ಸಭೆಯಲ್ಲಿ ಕುಳಿತುಕೊಳ್ಳಲೆಂದು ತೆರಳುತ್ತಿದ್ದ ವೇಳೆಯಲ್ಲಿ ಅವರನ್ನು ಮುಂದೆ ಹೋಗದಂತೆ ತಡೆದು ಅವಮಾನ ಮಾಡಿದ್ದಾರೆ ಎನ್ನಲಾಗಿದೆ. ತನಗೆ ಅವಮಾನ ಮಾಡಿರುವ ಬಗ್ಗೆ ಅವರು ಸೋಮವಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ನಾನು ಬಿಜೆಪಿ ಜಿಲ್ಲಾ ಉಪಾಧ್ಯಕ್ಷನಾಗಿದ್ದು, ಪುತ್ತಿಲ ಪರಿವಾರದಲ್ಲಿ ಅಧ್ಯಕ್ಷನಾಗಿ ಕೆಲಸ ಮಾಡಿದ್ದೆ. ಹಿಂದು ಸಮಾಜದ ಒಗ್ಗಟ್ಟಿಗಾಗಿ ಸಕ್ರಿಯವಾಗಿ ನಿಷ್ಠೆಯಲ್ಲಿ ಕೆಲಸ ಮಾಡಿದ್ದೇನೆ. ಶ್ರೀನಿವಾಸ ಕಲ್ಯಾಣೋತ್ಸವದ ಚಪ್ಪರ ಮುಹೂರ್ತ, ಆಮಂತ್ರಣ ಪತ್ರಿಕೆ ವಿತರಣೆ, ಗ್ರಾಮದಲ್ಲಿ ವಿತರಣೆಯಲ್ಲೂ ಭಾಗವಹಿಸಿದ್ದೇನೆ. ಆದರೂ ನಿನ್ನೆ ಕಲ್ಯಾಣೋತ್ಸವ ಸಭಾಂಗಣದಲ್ಲಿ ಕಾರ್ಯಕರ್ತರೋರ್ವರು ನನಗೆ ಮತ್ತು ಪತ್ನಿಗೆ ಒಳ ಹೋಗದಂತೆ ತಡೆದು ಅವಮಾನಿಸಿದ್ದಾರೆ. ಇದಕ್ಕಾಗಿ ದೇವರ ನಡೆಯಲ್ಲಿ ಪ್ರಾರ್ಥನೆ ಮಾಡಿದ್ದೇನೆ ಎಂದರು.ಸತ್ಯದ ಜಾಗದಲ್ಲಿ ಆ ರೀತಿಯ ವರ್ತನೆ ಸರಿಯಲ್ಲ ಈ ಸಂದರ್ಭ ಪರಿವಾರದ ರಾಜು ಶೆಟ್ಟಿ, ಸನ್ಮತ್, ಅಜಿತ್, ಮಹೇಂದ್ರ ವರ್ಮ ಅವರು ಬಂದು ನಮ್ಮನ್ನು ವೇದಿಕೆಯ ಮುಂದೆ ಕರೆದುಕೊಂಡು ಬಂದು ಕೂರಿಸಿದರು. ನನಗೆ ಅವಮಾನ ಆಗಿರುವ ಹಿನ್ನೆಲೆಯಲ್ಲಿ ಮನಸ್ಸಿಲ್ಲದೆ ವಾಪಸ್ ಹೋಗಲು ಹೊರಟೆನಾದರೂ ಶ್ರೀನಿವಾಸ ಕಲ್ಯಾಣ ಆಗಲಿ ಎಂದು ಕುಳಿತುಕೊಂಡಿದ್ದೆ. ಪ್ರವೀಣ್ ಶೆಟ್ಟಿ ತಿಂಗಳಾಡಿ, ನವೀನ್ ರೈ ಪಂಜಳ, ಹರೀಶ್ ಮರುವಾಳ ಅವರು ನಮ್ಮಲ್ಲಿಗೆ ಬಂದು ಸಮಾಧಾನಿಸಿದರು ಎಂದು ತಿಳಿಸಿದರು. ಈ ವಿದ್ಯಮಾನದಿಂದ ಕೊರಗಿ ನನ್ನ ಪತ್ನಿ ಮಹಾಲಿಂಗೇಶ್ವರ ದೇವರ ಮಣ್ಣಿನಲ್ಲಿ ಕಣ್ಣಿರು ಹಾಕಿದ್ದಾಳೆ. ಪುತ್ತಿಲ ಪರಿವಾರದ ಕಾರ್ಯಕರ್ತರ ನಡೆಯಿಂದ ತುಂಬಾ ಬೇಸರಗೊಂಡಿದ್ದೇನೆ. ಪುತ್ತಿಲ ಪರಿವಾರದವ್ರು ನನಗೆ ಮಾಡಿದ ಅವಮಾನ ಮಹಾಲಿಂಗೇಶ್ವರ ದೇವರಿಗೆ ಗೊತ್ತಿದೆ. ನನಗೆ ಅವಮಾನ ಮಾಡಿದಂತ ವ್ಯಕ್ತಿಗೆ ಸಂಸಾರ ಇರುವ ಕಾರಣ ಆತನಿಗೆ ಶಿಕ್ಷೆ ಬೇಡ, ಬದಲಿಗೆ ಬುದ್ಧಿಕೊಡಿ ಎಂದು ಕೇಳಿಕೊಂಡಿದ್ದೇನೆ ಎಂದರು.ನನ್ನ ರಾಜೀನಾಮೆಗೆ ಒತ್ತಾಯಿಸಿದ ವ್ಯಕ್ತಿಯ ಹೆಸರನ್ನು ಮುಂದಿನ ದಿನಗಳಲ್ಲಿ ಹೇಳುತ್ತೇನೆ ಎಂದು ಅವರು ತಿಳಿಸಿದರು.
ಪ್ರಸನ್ನ ಕುಮಾರ್ ಮಾರ್ತ ಅವರು ಪತ್ನಿ ಸಮೇತ ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿ ಸೇವಾಕರ್ತರಿಗೆ ಮೀಸಲಿರಿಸಲಾಗಿದ್ದ ಆಸನದೆಡೆಗೆ ಹೋಗುತ್ತಿದ್ದಂತೆ ಗೇಟ್‌ನಲ್ಲಿದ್ದ ಸ್ವಯಂ ಸೇವಕನೋರ್ವ ಅವರನ್ನು ಮುಂದೆ ಹೋಗದಂತೆ ತಡೆದಿದ್ದರು. ಬಳಿಕ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಪ್ರಮುಖರು ಆಗಮಿಸಿ ಪ್ರಸನ್ನ ಮಾರ್ತ ದಂಪತಿಯನ್ನು ಸ್ವಾಗತಿಸಿ, ವಿಶೇಷ ಅತಿಥಿಗಳ ಆಸನದಲ್ಲಿ ಆಸೀನರಾಗಲು ಅವಕಾಶ ಕಲ್ಪಿಸಿಕೊಟ್ಟರು ಎನ್ನಲಾಗಿದೆ.