ಸಾರಾಂಶ
ಕನ್ನಡಪ್ರಭ ವಾರ್ತೆ ಸಿಂದಗಿ
ತಾಲೂಕಿನ ಬೊಮ್ಮನಜೋಗಿ ತಾಂಡಾದ ಪ್ರಾಥಮಿಕ ಶಾಲೆಯನ್ನು ಸರ್ಕಾರ ಉನ್ನತೀಕರಿಸಿ ಪ್ರೌಢಶಾಲೆಯನ್ನಾಗಿ ಮಾಡಿ ಆದೇಶ ಹೊರಡಿಸಿದೆ. ಆದರೆ ಅಧಿಕಾರಿ ವರ್ಗ ಅದನ್ನು ಕೊಂಡುಗೊಳಿ ಗ್ರಾಮದ ಪ್ರಾಥಮಿಕ ಶಾಲೆಗೆ ಉನ್ನತಿ ಕರಿಸಿ ಪ್ರೌಢಶಾಲೆಯನ್ನಾಗಿ ಮಾಡಲು ಆದೇಶ ನೀಡಿದ್ದಾರೆ. ಕೂಡಲೇ ಸರ್ಕಾರ ಮಕ್ಕಳ ಹಿತದೃಷ್ಟಿಯಿಂದ ಈ ಹಿಂದೆ ಅನುಮೋದನೆಗೊಂಡಿರುವ ಬೊಮ್ಮನಜೋಗಿ ತಾಂಡಾ ಎಲ್.ಟಿ.1 ಪ್ರಾಥಮಿಕ ಶಾಲೆಗೆ ಅದನ್ನು ಮರಳಿ ನೀಡಬೇಕು ಎಂದು ಒತ್ತಾಯಿಸಿ ತಾಂಡಾದ ಗ್ರಾಮಸ್ಥರು ಮತ್ತು ಹಿರಿಯರು ಬುಧವಾರ ಕ್ಷೇತ್ರ ಶಿಕ್ಷಣಾಧಿಕಾರಿ ಮಹಾಂತೇಶ್ ಯಡ್ರಾಮಿಗೆ ಮನವಿ ಸಲ್ಲಿಸಿದರು.ಈ ವೇಳೆ ಎಸ್‌ಡಿಎಂಸಿ ಅಧ್ಯಕ್ಷ ಅಶೋಕ್ ನಾಯಕ್ ಮಾತನಾಡಿ, ಬೊಮ್ಮನಜೋಗಿಯ ತಾಂಡಾದಲ್ಲಿ ಪ್ರಾಥಮಿಕ ಶಾಲೆ ಇದ್ದು ಅದನ್ನು ಹೋರಾಟ ಮಾಡಿ ಪ್ರೌಢಶಾಲೆಯನ್ನಾಗಿ ಉನ್ನತೀಕರಿಸಲು ಗ್ರಾಮಸ್ಥರೆಲ್ಲರೂ ಕಾರ್ಯಪ್ರವೃತ್ತರಾಗಿದ್ದರು. ಅದನ್ನು ಸರ್ಕಾರ ಉನ್ನತೀಕರಣ ಮಾಡಿ ಆದೇಶ ಹೊರಡಿಸಿದೆ. ಆದರೆ ಅಧಿಕಾರಿ ವರ್ಗ ಇದನ್ನು ಕೊಂಡಗೂಳಿ ಗ್ರಾಮಕ್ಕೆ ವರ್ಗಾಯಿಸಿದ್ದು ನಮಗೆ ನೋವು ಉಂಟಾಗಿದೆ. ಇಲ್ಲಿ ನೂರಾರು ಮಕ್ಕಳು ಪ್ರೌಢ ಶಿಕ್ಷಣ ಪಡೆಯಲು ಸಿಂದಗಿ ಪಟ್ಟಣಕ್ಕೆ ಹೋಗಬೇಕಾಗುತ್ತದೆ. ಇದನ್ನು ನಿಯಂತ್ರಿಸಲು ಸರ್ಕಾರ ಮಟ್ಟದಲ್ಲಿ ಹೋರಾಟ ಮಾಡಿದ್ದೇವೆ. ಇಲ್ಲಿಯ ಮಕ್ಕಳ ಸ್ಥಿತಿ ವ್ಯವಸ್ಥಿತವಾಗಿ ಸಾಗುತ್ತದೆ. ಕೂಡಲೇ ಅಧಿಕಾರಿ ವರ್ಗ ಮತ್ತು ಜನಪ್ರತಿನಿಧಿಗಳು ಸರ್ಕಾರ ಆದೇಶ ಮಾಡಿರುವ ಹಾಗೆ ಪ್ರೌಢಶಾಲೆಯನ್ನು ಬೊಮ್ಮನಜೋಗಿ ಪ್ರಾಥಮಿಕ ಶಾಲೆಯಲ್ಲಿಯೇ ಉನ್ನತೀಕರಿಸಬೇಕಾಗಿ ಒತ್ತಾಯ ಮಾಡುತ್ತೇವೆ. ಒಂದು ವೇಳೆ ನಮ್ಮ ನ್ಯಾಯಕ್ಕೆ ತಕ್ಕ ಉತ್ತರ ಸಿಗದೇ ಇದ್ದಲ್ಲಿ ಜಿಲ್ಲಾ ಮತ್ತು ತಾಲೂಕು ಅಧಿಕಾರಿಗಳ ಕಚೇರಿಯ ಮುಂದೆ ಮಕ್ಕಳೊಂದಿಗೆ ಧರಣಿ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ವೇಳೆ ಗ್ರಾಮದ ದೇಸು ರಾಠೋಡ್, ಆನಂದ್ ರಾಠೋಡ್, ಹೇಗ್ಗು ರಾಠೋಡ್, ಭೀಮು ನಾಯಕ್, ಕಿಶನ್ ಪವಾರ್, ದಿಲೀಪ್ ಚೌಹಾನ್, ಶಂಕರ್ ರಾಠೋಡ್, ಅರವಿಂದ್ ನಾಯಕ್, ನೀಲು ರಾಠೋಡ್, ಕಾಮ ಸಿಂಗ್ ಚೌಹಾಣ್, ಶಾಂತು ರಾಠೋಡ್, ಕಾಸು ಕಾರಬಾರಿ ಸೇರಿದಂತೆ ಗ್ರಾಮಸ್ಥರು ಮತ್ತು ಗ್ರಾಮ ಪಂಚಾಯಿತಿ ಸದಸ್ಯರು ಇದ್ದರು.