ಜಾತಿ, ಧರ್ಮ, ಹಣದ ಮೇಲೆ ಜೀವನ: ಡಾ.ಎಚ್.ಎಸ್.ಅನುಪಮಾ

| Published : Feb 24 2025, 12:33 AM IST

ಜಾತಿ, ಧರ್ಮ, ಹಣದ ಮೇಲೆ ಜೀವನ: ಡಾ.ಎಚ್.ಎಸ್.ಅನುಪಮಾ
Share this Article
  • FB
  • TW
  • Linkdin
  • Email

ಸಾರಾಂಶ

ಮಂಡ್ಯ ಪ್ರಸ್ತುತ ನ್ಯಾಯದ ಕಣ್ಣುಗಳ ಮೇಲೆ ಧೂಳು ಕುಳಿತಿದೆ. ಪ್ರತಿಯೊಬ್ಬರಲ್ಲೂ ಪ್ರಜ್ಞಾ ಮನೋಭಾವ ಹೆಚ್ಚಾಗಬೇಕು. ಪ್ರಜ್ಞಾವಂತಿಕೆಯಿಂದ ಜೀವನ ನಡೆಸಿದಾಗ ಸಮಾಜದಲ್ಲಿ ಸುಧಾರಣೆ ಕಾಣಬಹುದು. ನಾವು ಯಾವುದನ್ನು ಕ್ಷುಲ್ಲಕವೆಂದು ಭಾವಿಸಿರುತ್ತೇವೆಯೋ ಅದರಲ್ಲೇ ಆಳವಾದ ವಿಷಯ ಅಡಗಿರುತ್ತದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಮನುಷ್ಯ ಸಮಾಜವು ಜಾತಿ, ಧರ್ಮ ಹಾಗೂ ಹಣದ ಆಧಾರದ ಮೇಲೆ ಜೀವನ ನಡೆಸುತ್ತಿರುವುದು ದುರಂತ ಎಂದು ಸಾಹಿತಿ ಡಾ.ಎಚ್.ಎಸ್.ಅನುಪಮಾ ವಿಷಾದಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಗ್ರಾಮ ಆಡಳಿತಾಧಿಕಾರಿಗಳ ಸಂಘ, ಬೆಳಗಿನೊಳಗು ಬಳಗದ ಸಹಯೋಗದಲ್ಲಿ ಶನಿವಾರ ನಡೆದ ಪ್ರಜ್ಞಾ ಜಾಗೃತಿ ಶಿಬಿರದಲ್ಲಿ ಅವರು ಮಾತನಾಡಿ, ಮಂಡ್ಯ ಪ್ರಸ್ತುತ ನ್ಯಾಯದ ಕಣ್ಣುಗಳ ಮೇಲೆ ಧೂಳು ಕುಳಿತಿದೆ. ಪ್ರತಿಯೊಬ್ಬರಲ್ಲೂ ಪ್ರಜ್ಞಾ ಮನೋಭಾವ ಹೆಚ್ಚಾಗಬೇಕು. ಪ್ರಜ್ಞಾವಂತಿಕೆಯಿಂದ ಜೀವನ ನಡೆಸಿದಾಗ ಸಮಾಜದಲ್ಲಿ ಸುಧಾರಣೆ ಕಾಣಬಹುದು. ನಾವು ಯಾವುದನ್ನು ಕ್ಷುಲ್ಲಕವೆಂದು ಭಾವಿಸಿರುತ್ತೇವೆಯೋ ಅದರಲ್ಲೇ ಆಳವಾದ ವಿಷಯ ಅಡಗಿರುತ್ತದೆ. ಮನುಷ್ಯನ ಬದುಕಿನಲ್ಲಿ ಹೊರಾಂಗಣ ಗ್ರಹಿಸುವುದು ಮುಖ್ಯವಾಗಬೇಕು. ನಮ್ಮೊಳಗೆ ಇರುವ ಸರಿ-ತಪ್ಪುಗಳನ್ನು ತಿಳಿದುಕೊಳ್ಳಬೇಕು ಎಂದರು.

ಅತ್ಯಾಚಾರ ಮಾಡಿ ಜೈಲಿಗೆ ಹೋಗಿ ಬಂದವನಿಗೆ ಅವರ ಕುಟುಂಬದ ಹೆಣ್ಣು ಮಕ್ಕಳು ಆರತಿ ಮಾಡಿ ಸ್ವಾಗತ ಮಾಡುತ್ತಾರೆ. ಪ್ರೀತಿ ಸಿಗಲಿಲ್ಲ ಎನ್ನುವ ಕಾರಣಕ್ಕೆ ಹುಡುಗಿಯನ್ನು ಕೊಂದವನ ಫೋಟೋಗಳನ್ನು ಕಟೌಟಲ್ಲಿ ಹಾಕಿಕೊಂಡು ಮೆರವಣಿಗೆ ಮಾಡಲಾಗುತ್ತಿದೆ. ಕುಸ್ತಿಪಟು ಒಬ್ಬರು ನನ್ನ ಮೇಲೆ ಅತ್ಯಾಚಾರ ಮಾಡಿರುವುದು ಇಂತಹ ವ್ಯಕ್ತಿಯೇ ಎಂಬ ಮಾತನ್ನು ಬಹಿರಂಗವಾಗಿ ಹೇಳಿದ್ದರೂ ಅಂತಹ ವ್ಯಕ್ತಿ ಚುನಾವಣೆಯಲ್ಲಿ ಗೆದ್ದು ಬರುತ್ತಾನೆ. ಇದು ನಮ್ಮ ವೈಫಲ್ಯ ಎಂದು ಬೇಸರ ವ್ಯಕ್ತಪಡಿಸಿದರು.

ಸರಿ ಮತ್ತು ತಪ್ಪುಗಳನ್ನು ನ್ಯಾಯ ಮತ್ತು ಅನ್ಯಾಯಗಳನ್ನು ಏಕೆ ನಾವು ವಿವೇಚನೆ ಮಾಡುತ್ತಿಲ್ಲ, ಪ್ರಕೃತಿಯು ಪದೇ ಪದೇ ಎಚ್ಚರಿಸುತ್ತಿದೆ. ಸುನಾಮಿ, ಕೋವಿಡ್ ಸೇರಿದಂತೆ ವಿವಿಧ ರೀತಿಯಲ್ಲಿ ಪರಿಸರ ನಮ್ಮನ್ನು ಜಾಗೃತಿಗೊಳಿಸುತ್ತಿದ್ದರೂ ನಾವು ಬದಲಾಗುತ್ತಿಲ್ಲ. ಈ ಎಚ್ಚರಿಕೆಯನ್ನು ನಾವು ಪರಿಗಣಿಸದೆ ವಿಜ್ಞಾನವನ್ನು ಮರೆಯುತ್ತಿದ್ದೇವೆ ಎಂದು ವಿಷಾದಿಸಿದರು.

ಉದ್ಘಾಟಿಸಿದ ತಹಸೀಲ್ದಾರ್ ಶಿವಕುಮಾರ್ ಬಿರಾದಾರ್ ಮಾತನಾಡಿ, ಸಮಾಜದಲ್ಲಿ ನಮ್ಮ ಕೆಲಸವೇನು ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು. ಪ್ರಾಣಿ, ಪಕ್ಷಿಗಳಿಗೆ ನಮ್ಮಷ್ಟು ಬುದ್ಧಿವಂತಿಕೆ ಇರುವುದಿಲ್ಲ, ಮಾನವರಾದ ನಾವು ಸಮಾಜಕ್ಕೆ ಒಳಿತಾಗುವ ಕೆಲಸವನ್ನು ಮಾಡಬೇಕು. ಈ ಶಿಬಿರದ ಪ್ರಯೋಜನವನ್ನು ಎಲ್ಲರೂ ಪಡೆದುಕೊಂಡು ಸದ್ಭಳಕೆ ಮಾಡಿಕೊಳ್ಳಿ ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಬೆಳಗಿನೊಳಗು ಬಳಗದ ವಿನೋದ್ ಮಹದೇವಪುರ, ಗ್ರಾಮ ಆಡಳಿತಾಧಿಕಾರಿಗಳ ಸಂಘದ ತಾಲೂಕು ಘಟಕದ ಅಧ್ಯಕ್ಷ ಕುಮಾರ್, ಇಂದ್ರಾಣಿ ಭಾಗವಹಿಸಿದ್ದರು.