ಜಾತಿ- ಉಪ ಜಾತಿ ಮಾದಿಗ ಎಂದೇ ಬರೆಸಿ

| Published : Sep 22 2025, 01:00 AM IST

ಸಾರಾಂಶ

ಹಿಂದುಳಿದ ವರ್ಗಗಳ ಆಯೋಗದಿಂದ ಸೆ.22ರಿಂದ ಅ.7 ರವರೆಗೆ ನಡೆಯುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯಲ್ಲಿ ಮಾದಿಗ ಸಮಾಜ ಬಾಂಧವರು ಎಕೆ, ಎಡಿ, ಎಎ ಅಂತೆಲ್ಲ ಬರೆಸಬಾರದು. ಮಾದಿಗ ಎಂಬುದಾಗಿ ಮೂಲ ಜಾತಿ ಮಾತ್ರ ಬರೆಸಬೇಕು ಎಂದು ಒಳಮೀಸಲಾತಿ ಹೋರಾಟ ಸಮಿತಿ ಮುಖಂಡರಾದ ಹೆಗ್ಗೆರೆ ರಂಗಪ್ಪ ಹೇಳಿದ್ದಾರೆ.

- ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಅಂತ ಬರೆಸಬೇಡಿ: ಹೆಗ್ಗೆರೆ ರಂಗಪ್ಪ ಮನವಿ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಹಿಂದುಳಿದ ವರ್ಗಗಳ ಆಯೋಗದಿಂದ ಸೆ.22ರಿಂದ ಅ.7 ರವರೆಗೆ ನಡೆಯುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯಲ್ಲಿ ಮಾದಿಗ ಸಮಾಜ ಬಾಂಧವರು ಎಕೆ, ಎಡಿ, ಎಎ ಅಂತೆಲ್ಲ ಬರೆಸಬಾರದು. ಮಾದಿಗ ಎಂಬುದಾಗಿ ಮೂಲ ಜಾತಿ ಮಾತ್ರ ಬರೆಸಬೇಕು ಎಂದು ಒಳಮೀಸಲಾತಿ ಹೋರಾಟ ಸಮಿತಿ ಮುಖಂಡರಾದ ಹೆಗ್ಗೆರೆ ರಂಗಪ್ಪ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾದಿಗರಲ್ಲಿ ಕೆಲವರು ತಮ್ಮ ಮೂಲ ಜಾತಿಯನ್ನು ಹೇಳಿಕೊಳ್ಳದಿದ್ದರೆ ಸಮೀಕ್ಷೆಯಲ್ಲಿ ಕಡಿಮೆ ಸಂಖ್ಯೆ ದಾಖಲಾಗುವ ಜೊತೆಗೆ ಜನಸಂಖ್ಯೆ ಆದಾರಿತವಾಗಿ ಒಳಮೀಸಲಾತಿಯಲ್ಲಿ ಸೌಲಭ್ಯಗಳು ಕಡಿಮೆ ಆಗುವಂತಹ ಅನ್ಯಾಯವಾಗುವ ಅಪಾಯ, ಸಾಧ್ಯತೆಗಳು ಹೆಚ್ಚಾಗಿವೆ ಎಂದರು.

ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಅಂತೆಲ್ಲಾ ಜಾತಿಗಣತಿ ವೇಳೆ ಬರೆಸಬಾರದು. ತಮ್ಮ ಮೂಲ ಜಾತಿ ಮಾದಿಗ ಅಂತಲೇ ಸಮಾಜ ಬಾಂಧವರು ಬರೆಸಬೇಕು. 1931ರಲ್ಲಿ ಬ್ರಿಟಿಷರು ಕೈಗೊಂಡಿದ್ದ ಜಾತಿಗಣತಿಯಲ್ಲಿ ಮಾದಿಗರ ಸಂಖ್ಯೆ ಹೆಚ್ಚಾಗಿತ್ತು. 1972-73ರಲ್ಲಿ ನ್ಯಾ. ಎಲ್.ಜಿ. ಹಾವನೂರು ಆಯೋಗದ ಸಮೀಕ್ಷೆಯಲ್ಲೂ ಮಾದಿಗರ ಸಂಖ್ಯೆ ಹೆಚ್ಚಾಗಿತ್ತು. ಒಳಮೀಸಲಾತಿ ವರ್ಗೀಕರಣಕ್ಕೆ ಸಂಬಂಧಿಸಿದಂತೆ ರಚಿಸಲಾದ ನ್ಯಾ.ಸದಾಶಿವ ಆಯೋಗ, ಕಾಂತರಾಜ ನೇತೃತ್ವದ ಹಿಂದುಳಿದ ವರ್ಗಗಳ ಆಯೋಗ, ಮಾಧುಸ್ವಾಮಿ ನೇತೃತ್ವದ ಸಂಪುಟ ಉಪ ಸಮಿತಿ, ನ್ಯಾ.ನಾಗಮೋಹನ ದಾಸ್‌ ಆಯೋಗ ಎಲ್ಲವೂ ರಾಜ್ಯದಲ್ಲಿ ಮಾದಿಗರ ಸಂಖ್ಯೆಯೇ ಮೇಲುಗೈ ಎಂದಿವೆ ಎಂದು ತಿಳಿಸಿದರು.

ಎಲ್ಲ ಆಯೋಗಗಳು ಮಾದಿಗರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ಔದ್ಯೋಗಿಕ ರಾಜಕೀಯ ಸ್ಥಿತಿಗತಿಗಳು ತುಂಬಾ ಶೋಚನೀಯವಾಗಿವೆ ಎಂದು ಪ್ರತಿಪಾದಿಸಿವೆ. ಮಾದಿಗರಿಗೆ ಶೇ.6 ಒಳಮೀಸಲಾತಿ ನೀಡುವಂತೆ ಶಿಫಾರಸು ಮಾಡಿವೆ. ಈ ಹಿನ್ನೆಲೆ ಸಿಎಂ ಸಿದ್ದರಾಮಯ್ಯ ಸರ್ಕಾರ ಸಂಪುಟ ಸಭೆಯಲ್ಲಿ ಮಾದಿಗರನ್ನು ಎ ಗುಂಪಿಗೆ ಸೇರಿಸಿ, ಶೇ.6 ಒಳಮೀಸಲಾತಿ ಘೋಷಿಸಿದೆ. ಕಾಲಕಾಲಕ್ಕೆ ಒಳ ಮೀಸಲಾತಿ ಪ್ರಮಾಣವನ್ನು ಜನಸಂಖ್ಯೆ ಆಧಾರಿತವಾಗಿ ನಿಗದಿಪಡಿಸಲು ಪರಿಶಿಷ್ಟ ಜಾತಿಗಳ ಶಾಶ್ವತ ಆಯೋಗ ರಚಿಸುವ ತೀರ್ಮಾನ ಕೈಗೊಂಡಿದೆ ಎಂದು ಹೇಳಿದರು.

ಸುಮಾರು 59 ಅಲೆಮಾರಿ ಸಮುದಾಯಗಳಿಗೆ ನ್ಯಾ.ನಾಗಮೋಹನ ದಾಸ್‌ ಆಯೋಗದ ಶಿಫಾರಸಿನಂತೆ ಶೇ.1ರಷ್ಟು ಒಳಮೀಸಲಾತಿಯನ್ನು ರಾಜ್ಯ ಸರ್ಕಾರ ಪ್ರತ್ಯೇಕವಾಗಿ ನೀಡಬೇಕು. ಮುಂಬಡ್ತಿಯಲ್ಲೂ ಒಳ ಮೀಸಲಾತಿ ಬಿಂದುಗಳನ್ನು ಅನುಸರಿಸಬೇಕು. ಅಲ್ಲದೇ, ರಾಜ್ಯ ಸರ್ಕಾರ ಕೈಗೆತ್ತಿಕೊಂಡ ದೇವದಾಸಿಯರ ಸಮೀಕ್ಷೆಯಲ್ಲಿ ಎಲ್ಲ ದೇವದಾಸಿಯರ ಪಾಲ್ಗೊಂಡು, ರಾಜ್ಯ ಸರ್ಕಾರ ಘೋಷಿಸಿರುವ ಮೂರು ತಲೆಮಾರಿನ ಸೌಲಭ್ಯಗಳು ಕೈತಪ್ಪಿ ಹೋಗದಂತೆ ನೋಡಿಕೊಳ್ಳಬೇಕು ಎಂದು ಮಾಡಿದರು.

ಸಮಾಜದ ಮುಖಂಡರಾದ ನಿವೃತ್ತ ಪೊಲೀಸ್ ಅಧೀಕ್ಷಕ ರವಿನಾರಾಯಣ, ಗಾಂಧಿ ನಗರ ಚಿದಾನಂದ, ಎಸ್ಒಜಿ ಕಾಲನಿ ಎಲ್.ಜಯಪ್ಪ, ಕೆರೆಯಾಗಳಹಳ್ಳಿ ಆರ್.ಬಸವರಾಜ, ತೋಳಹುಣಸೆ ಎಸ್.ಜಯಪ್ಪ, ಲಕ್ಷ್ಮಣ ಹರಿಜನ, ಎನ್.ನಿಂಗರಾಜ ಶಿರಮಗೊಂಡನಹಳ್ಳಿ ಇತರರು ಇದ್ದರು.

- - -

-21ಕೆಡಿವಿಜಿ2.ಜೆಪಿಜಿ:

ದಾವಣಗೆರೆಯಲ್ಲಿ ಭಾನುವಾರ ಒಳಮೀಸಲಾತಿ ಹೋರಾಟ ಸಮಿತಿ ಮುಖಂಡರಾದ ಹೆಗ್ಗೆರೆ ರಂಗಪ್ಪ, ನಿವೃತ್ತ ಪೊಲೀಸ್ ಅಧೀಕ್ಷಕ ರವಿನಾರಾಯಣ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.