ಗಂಗಾವತಿ: ಕನ್ನಡ ರಾಜ್ಯೋತ್ಸವವನ್ನು ಮನೆ ಮನೆಗಳಲ್ಲಿ ಆಚರಿಸಬೇಕು ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು. ನಗರದ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕು ಆಡಳಿತ, ನಗರಸಭೆಯಿಂದ ಜರುಗಿದ 71ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು. ಕನ್ನಡ ಭಾಷೆ, ನೆಲ, ಜಲ, ಕಲೆ ಸಂಸ್ಕೃತಿ ಹೊಂದಿರುವ ನಮ್ಮ ರಾಜ್ಯ ಶ್ರೀಮಂತವಾಗಿದೆ. ಇಂತಹ ರಾಜ್ಯದಲ್ಲಿ ನಾವು ನೀವೆಲ್ಲರೂ ಜನಿಸಿರುವುದು ಪುಣ್ಯ ಎಂದು ಹೇಳಿದರು.

ರಾಜ್ಯೋತ್ಸವ ಕೇವಲ ಸರ್ಕಾರಿ ಇಲಾಖೆ ಸೇರಿದಂತೆ ಸಂಘ-ಸಂಸ್ಥೆಗಳಲ್ಲಿ ಆಚರಿಸಿದರೆ ಸಾಲದು, ಮನೆ ಮನೆಗಳಲ್ಲಿ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಬೇಕು ಎಂದರು. ಜ್ಞಾನಪೀಠ ಪ್ರಶಸ್ತಿ ಪಡೆದಿರುವ ಅತಿ ಹೆಚ್ಚು ರಾಜ್ಯ ಕರ್ನಾಟಕವಾಗಿದೆ. ಇಂತಹ ಪುಣ್ಯಭೂಮಿಯಲ್ಲಿ ಸಾಹಿತಿಗಳು, ಬರಹಗಾರರು, ಕವಿಗಳು ಕನ್ನಡ ಸೇವೆ ಮಾಡಿದ್ದಾರೆ. ಮಕ್ಕಳು ಮೊಬೈಲು ಗೋಜಿಗೆ ಹೋಗದೆ ಶಿಕ್ಷಣಕ್ಕೆ ಮಹತ್ವ ನೀಡಬೇಕು. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಪುಸ್ತಕಗಳನ್ನು ಓದಬೇಕು ಎಂದರು. ಧ್ವಜಾರೋಹಣ ನೆರವೇರಿಸಿದ ತಹಸೀಲ್ದಾರ್‌ ವಿನಾಯಕ ಗೋಡಬಲೆ ಮಾತನಾಡಿ, ಕನ್ನಡ ರಾಜ್ಯೋತ್ಸವಕ್ಕೆ 71 ವರ್ಷ ಕಳೆದಿವೆ. ಎಲ್ಲ ಇಲಾಖೆಗಳಲ್ಲಿ ಕನ್ನಡ ಕಡ್ಡಾಯವಾಗಿ ಬಳಕೆ ಮಾಡಬೇಕು ಎಂದರು.

ಇದೇ ಸಂದರ್ಭದಲ್ಲಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ತಂಡಗಳಿಗೆ ಬಹುಮಾನ ವಿತರಿಸಿದರು. ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು. ವೇದಿಕೆ ಮೇಲೆ ಪ್ರಾಧಿಕಾರದ ಅಧ್ಯಕ್ಷ ಇಲಿಯಾಸ್ ಖಾದ್ರಿ, ಡಿವೈಎಸ್‌ಪಿ ಜಾಯಪ್ಪ ನ್ಯಾಮಗೌಡ, ನಗರಸಭೆ ಪ್ರಭಾರಿ ಪೌರಾಯುಕ್ತ ರಾಮರೆಡ್ಡಿ ಪಾಟೀಲ್, ಕ್ಷೇತ್ರ ಶಿಕ್ಷಣಾಧಿಕಾರಿ ರೋಷನ್ ಭಾಗವಹಿಸಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ರೋಷನ್ ಸ್ವಾಗತಿಸಿದರು. ಜಯಶ್ರೀ ಹಕ್ಕಂಡಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಣಾಧಿಕಾರಿ ಸರಸ್ವತಿ ಅವರು ವಂದಿಸಿದರು.