ಸಾರಾಂಶ
ನಾಗಮಂಗಲ : ಗಣೇಶ ಮೂರ್ತಿ ಮೆರವಣಿಗೆ ವೇಳೆ ಬುಧವಾರ ರಾತ್ರಿ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿ, ಮಚ್ಚು-ಲಾಂಗ್ ಝಳಪಿಸಿ, ಪೆಟ್ರೋಲ್ ಬಾಂಬ್ ಎಸೆದ ಘಟನೆಯಿಂದ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿರುವ ಮಂಡ್ಯ ಜಿಲ್ಲೆ ನಾಗಮಂಗಲ ಪಟ್ಟಣದ ಪರಿಸ್ಥಿತಿ ಇನ್ನೂ ಬೂದಿಮುಚ್ಚಿದ ಕೆಂಡದಂತಿದೆ.
ಪಟ್ಟಣದಲ್ಲಿ ಬಿಗುವಿನ ವಾತಾವರಣ ಮುಂದುವರಿದಿದ್ದು, ಪ್ರಮುಖ ಸ್ಥಳಗಳಲ್ಲಿ ಬಿಗಿ ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ. ಗಲಭೆಗೆ ಸಂಬಂಧಿಸಿದಂತೆ ಪೊಲೀಸರು 150ಕ್ಕೂ ಹೆಚ್ಚು ಮಂದಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಲ್ಲದೆ, ಮುಸ್ಲಿಂ ಸಮುದಾಯದ 23 ಮಂದಿ ಹಾಗೂ ಹಿಂದು ಸಮುದಾಯದ 31 ಮಂದಿ ಸೇರಿ ಒಟ್ಟು 54 ಮಂದಿಯನ್ನು ಬಂಧಿಸಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಸ್ಥಳೀಯ ನ್ಯಾಯಾಲಯ ಅವರಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ. ಉಳಿದವರ ಪತ್ತೆಗೆ ಶೋಧ ಕಾರ್ಯ ಮುಂದುವರಿದಿದೆ.
ಈ ಮಧ್ಯೆ, ಗಲಭೆಯಲ್ಲಿ 20ಕ್ಕೂ ಹೆಚ್ಚು ಅಂಗಡಿಗಳಿಗೆ ಹಾನಿಯಾಗಿದ್ದು, ಆ ಪೈಕಿ 6 ಅಂಗಡಿಗಳು ಸಂಪೂರ್ಣ ಭಸ್ಮವಾಗಿವೆ. 8 ಬೈಕ್‌ಗಳು ಬೆಂಕಿಗಾಹುತಿಯಾಗಿವೆ. ಬಜಾಜ್ ಶೋರೂಂನಲ್ಲಿದ್ದ ಲಕ್ಷಾಂತರ ರು.ಮೌಲ್ಯದ 8 ಹೊಸ ಬೈಕ್‌ಗಳನ್ನು ಕದ್ದೊಯ್ಯಲಾಗಿದೆ. ಅಲ್ಲದೆ, ಶೋಂ ರೂಂನಲ್ಲೇ ಒಂದು ಬೈಕ್‌ನ್ನು ಜಖಂಗೊಳಿಸಲಾಗಿದೆ. ಕಿಡಿಗೇಡಿಗಳು ನಡೆಸಿದ ಕಲ್ಲು ಮತ್ತು ಬಾಟಲ್‌ಗಳ ತೂರಾಟದಿಂದ ಪುರಸಭೆ ಕಚೇರಿಯ ಕಿಟಕಿ ಗಾಜುಗಳು ಪುಡಿ, ಪುಡಿಯಾಗಿವೆ. ಘಟನೆಯಿಂದಾಗಿ 25 ಕೋಟಿ ರು.ಗೂ ಹೆಚ್ಚು ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
ಮುಂಜಾಗ್ರತಾ ಕ್ರಮವಾಗಿ ಶನಿವಾರ ರಾತ್ರಿ 10ಗಂಟೆವರೆಗೆ ಪಟ್ಟಣದಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಶುಕ್ರವಾರ ರಾತ್ರಿ 12 ಗಂಟೆವರೆಗೆ ನಾಗಮಂಗಲ ಪಟ್ಟಣ ಹಾಗೂ ಅದರ ಸುತ್ತಮುತ್ತಲಿನ 3 ಕಿ.ಮೀ.ವ್ಯಾಪ್ತಿಯಲ್ಲಿ ಎಲ್ಲಾ ತರಹದ ಮದ್ಯದ ಅಂಗಡಿ, ಬಾರ್ ಮತ್ತು ರೆಸ್ಟೋರೆಂಟ್‌ಗಳನ್ನು ಮುಚ್ಚಲು ಹಾಗೂ ಮದ್ಯ ಮಾರಾಟ, ಮದ್ಯ ಸಂಗ್ರಹಣೆ, ಮದ್ಯ ಸಾಗಾಣಿಕೆ ಮತ್ತು ಶೇಖರಣೆ ಮಾಡುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿ ಡಾ.ಕುಮಾರ ಆದೇಶ ಹೊರಡಿಸಿದ್ದಾರೆ.
ಪಟ್ಟಣ ಬಂದ್:
ಘಟನೆ ಖಂಡಿಸಿ ಹಿಂದೂಪರ ಸಂಘಟನೆಗಳು ಗುರುವಾರ ನಾಗಮಂಗಲ ಬಂದ್‌ಗೆ ಕರೆ ನೀಡಿದ್ದವು. ಮುಂಜಾಗ್ರತಾ ಕ್ರಮವಾಗಿ ಪಟ್ಟಣ ವ್ಯಾಪ್ತಿಯ ಎಲ್ಲಾ ಶಾಲಾ-ಕಾಲೇಜುಗಳು ಮತ್ತು ಅಂಗನವಾಡಿಗಳಿಗೆ ಗುರುವಾರ ರಜೆ ಘೋಷಿಸಲಾಗಿತ್ತು. ಹಾಲು, ತರಕಾರಿ, ಔಷಧಿ ಅಂಗಡಿಗಳನ್ನು ಹೊರತುಪಡಿಸಿ ಬೇರೆ ಯಾವುದೇ ಅಂಗಡಿಗಳು ತೆರೆದಿರಲಿಲ್ಲ. ಜನ, ವಾಹನ ಸಂಚಾರ ವಿರಳವಾಗಿದ್ದು, ಪಟ್ಟಣದ ಪ್ರಮುಖ ರಸ್ತೆಗಳು ಬಿಕೋ ಎನ್ನುತ್ತಿದ್ದವು.
ಈ ಮಧ್ಯೆ, ತಮ್ಮವರ ಬಂಧನ ಖಂಡಿಸಿ ಹಿಂದು ಹಾಗೂ ಮುಸ್ಲಿಂ ಮಹಿಳೆಯರು ನಾಗಮಂಗಲ ಟೌನ್ ಪೊಲೀಸ್ ಠಾಣೆ ಎದುರು ಗುರುವಾರ ಪ್ರತ್ಯೇಕ ಪ್ರತಿಭಟನೆ ನಡೆಸಿದರು. ಜಿಲ್ಲಾ ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿಯವರು ಪ್ರತಿಭಟನಾನಿರತರ ಮನವೊಲಿಸಿ, ಮಹಿಳೆಯರನ್ನು ವಾಪಸ್ ಕಳುಹಿಸಿದರು.
--
ಇದು ಕೋಮುಗಲಭೆ ಅಲ್ಲ, ಆಕಸ್ಮಿಕ ಘಟನೆ: ಪರಂ
ಬೆಂಗಳೂರು : ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಗಣೇಶ ಮೆರವಣಿಗೆ ವೇಳೆ ನಡೆದ ಘಟನೆ ಒಂದು ಆಕಸ್ಮಿಕ. ಈ ಘಟನೆ ನಡೆಯಬಾರದಿತ್ತು. ಈ ಗಲಾಟೆ ಸಣ್ಣ ಪ್ರಮಾಣದಲ್ಲಿ ಇರುವಾಗಲೇ ಅಂತ್ಯವಾಗಿದ್ದು, ಪ್ರಕರಣದ ಸಂಬಂಧ 52 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ.ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂತಹ ಘಟನೆಗಳು ನಡೆಯಬಾರದಿತ್ತು. ಈ ಘಟನೆ ಆಕಸ್ಮಿಕವಾಗಿದ್ದು, ದೊಡ್ಡ ಪ್ರಮಾಣದ ಅನಾಹುತ, ಗಾಯಗಳಾಗಲೀ ಆಗಿಲ್ಲ. ಮುಂಜಾಗ್ರತಾ ಕ್ರಮವಾಗಿ ಕೆಎಸ್‌ಆರ್‌ಪಿ ತುಕಡಿಯನ್ನು ಸ್ಥಳದಲ್ಲಿ ನಿಯೋಜಿಸಲಾಗಿತ್ತು. ಆದ್ದರಿಂದ ಗಲಭೆ ಆರಂಭವಾಗುತ್ತಿದ್ದಂತೆ ಪೊಲೀಸರು ಮಧ್ಯಪ್ರವೇಶಿಸಿ ನಿಯಂತ್ರಿಸಿದ್ದಾರೆ. ಕಾನೂನು ಸುವ್ಯವಸ್ಥೆ ಎಡಿಜಿಪಿ ಅವರನ್ನು ಸ್ಥಳಕ್ಕೆ ಕಳುಹಿಸಿಕೊಟ್ಟಿದ್ದೇನೆ ಎಂದರು.
ಮೆರವಣಿಗೆ ವೇಳೆ ಕಲ್ಲು ತೂರಾಟವಾದಾಗ ಒಬ್ಬರಿಗೊಬ್ಬರಿಗೆ ಘರ್ಷಣೆ ಮಾಡಿಕೊಂಡಿದ್ದಾರೆ. ಆ ನಂತರ ಎಲ್ಲವೂ ಸರಿ ಹೋಯ್ತು ಅಂತ ವಾಪಸ್ ಹೋಗುವಾಗ, ಕೆಲವರು ವಾಹನಗಳಿಗೆ ಬೆಂಕಿ ಇಟ್ಟಿದ್ದಾರೆ. ಅಷ್ಟರೊಳಗೆ ಪೊಲೀಸರು ಎಚ್ಚೆತ್ತುಕೊಂಡು ಹತೋಟಿಗೆ ತೆಗೆದುಕೊಂಡಿದ್ದಾರೆ. ಇದು ಕಿಡಿಗೇಡಿಗಳ ಕೃತ್ಯವಾಗಿದ್ದು, ಕೋಮುಗಲಭೆ ಅಲ್ಲ. ಇದನ್ನು ಹೆಚ್ಚು ಬೆಳೆಯಲು ಬಿಡುವುದಿಲ್ಲ, ಇದರಲ್ಲಿ ರಾಜಕೀಯ ಮಾಡುವುದು ಬೇಡ ಎಂದು ಹೇಳಿದರು.ಘಟನೆಗೆ ಸಂಬಂಧಿಸಿದ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿವೆ. ಅದನ್ನು ಆಧರಿಸಿ ಯಾರೆಲ್ಲ ಕಲ್ಲು ತೂರಿದ್ದಾರೆ, ಬೆಂಕಿ ಹಾಕಿದ್ದಾರೆ ಅವರೆಲ್ಲರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ. ಪೊಲೀಸರಿಗು ಕಲ್ಲು ಏಟು ಬಿದ್ದಿದ್ದು, ಓರ್ವ ಎಎಸ್‌ಐ ಗಾಯಗೊಂಡಿದ್ದಾರೆ. ಇದರಲ್ಲಿ ರಾಜಕೀಯ ಪ್ರಚೋದನೆ ರೀತಿ ಕಾಣುತ್ತಿಲ್ಲ ಎಂದು ಹೇಳಿದರು.
--
ಇದು ಸಣ್ಣ ಘಟನೆಯೇ?: ಪರಂಗೆ ವಿಪಕ್ಷ ತರಾಟೆ
ಬೆಂಗಳೂರು: ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರು ಈ ಕೃತ್ಯವನ್ನು ಸಣ್ಣ ಘಟನೆ ಎಂದಿದ್ದಾರೆ. ಪೆಟ್ರೋಲ್ ಬಾಂಬ್ ಹಾಕಿರೋದು ಅವರಿಗೆ ಸಣ್ಣ ಘಟನೆಯೇ. ಕ್ಷಿಪಣಿ, ರಾಕೆಟ್ ಹಾಕಿದರಷ್ಟೇ ಅವರಿಗೆ ದೊಡ್ಡ ಘಟನೆಯೇ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಪ್ರಶ್ನಿಸಿದ್ದಾರೆ. ಇದೇ ವೇಳೆ ಪರಮೇಶ್ವರ್ ವಿರುದ್ಧ ಕಿಡಿಕಾರಿರುವ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಮನಸೋ ಇಚ್ಛೆ ದೊಂಬಿ ಎಬ್ಬಿಸಲಾಗಿದೆ. ಇಂತಹ ಕಳವಳಕಾರಿ ಘಟನೆಯನ್ನು ರಾಜ್ಯದ ಗೃಹ ಸಚಿವರು ಸಣ್ಣ ವಿಚಾರ ಎಂದು ಹೇಳಿರುವುದು ದುರದೃಷ್ಟಕರ ಎಂದರು.
--ಹಿಂಸೆಗೆ ಕಾಂಗ್ರೆಸ್‌ನ ತುಷ್ಟೀಕರಣ ಕಾರಣ: ಬಿಜೆಪಿ, ಜೆಡಿಎಸ್ ಕಿಡಿ
ಬೆಂಗಳೂರು: ನಾಗಮಂಗಲದಲ್ಲಿ ನಡೆದ ಕೋಮು ಹಿಂಸಾಚಾರಕ್ಕೆ ರಾಜ್ಯ ಕಾಂಗ್ರೆಸ್ ಹಾಗೂ ಕಾಂಗ್ರೆಸ್ ನೇತೃತ್ವದ ಸರ್ಕಾರ ಒಂದು ಸಮುದಾಯವನ್ನು ಅತಿಯಾಗಿ ಓಲೈಸುತ್ತಿರುವುದು, ತುಷ್ಟೀಕರಣವೇ ಕಾರಣ ಎಂದು ಬಿಜೆಪಿ, ಜೆಡಿಎಸ್ ನಾಯಕರು ಕಿಡಿಕಾರಿದ್ದಾರೆ. ಕರ್ನಾಟಕವನ್ನು ಕಾಂಗ್ರೆಸ್ ಮತ್ತೊಂದು ಪಾಕಿಸ್ತಾನ ಮಾಡಲು ಮುಂದಾಗಿದೆ ಎಂದು ಹರಿಹಾಯ್ದಿದ್ದಾರೆ.--
ತುಷ್ಟೀಕರಣವೇ ಕಾರಣಕಾಂಗ್ರೆಸ್ ಪಕ್ಷ, ಕಾಂಗ್ರೆಸ್ ಸರ್ಕಾರ ಒಂದು ನಿರ್ದಿಷ್ಟ ಸಮುದಾಯವನ್ನು ಅತಿಯಾಗಿ ಓಲೈಸಿ ತುಷ್ಟೀಕರಣ ಮಾಡುತ್ತಿರುವುದೇ ಇಂಥ ಘಟನೆಗಳಿಗೆ ಪ್ರಮುಖ ಕಾರಣ. ಮಂಡ್ಯದಲ್ಲಿ ಪೆಟ್ರೋಲ್ ಬಾಂಬ್ ಎಸೆತವನ್ನು ನೋಡಿದ್ದು ಇದೇ ಮೊದಲು.
- ಎಚ್.ಡಿ.ಕುಮಾರಸ್ವಾಮಿ ಕೇಂದ್ರ ಸಚಿವ--
ಪಾಕ್ ಆಗುತ್ತಿದೆ ಕರ್ನಾಟಕರಾಜಕೀಯ ತುಷ್ಟೀಕರಣಕ್ಕಾಗಿ ಕರ್ನಾಟಕವನ್ನು ಕಾಂಗ್ರೆಸ್ ಸರ್ಕಾರ ಮತ್ತೊಂದು ಪಾಕಿಸ್ತಾನ ಮಾಡಲು ಹೊರಟಿದೆ. ಮಸೀದಿ ಮುಂದೆ ಗಣೇಶ ಮೆರವಣಿಗೆ ಹೋಗಬಾರದೆ? ಆ ರೀತಿ ಕಾನೂನು, ನಿಯಮ ಎಲ್ಲಿದೆ?
- ಪ್ರಹ್ಲಾದ ಜೋಶಿ, ಕೇಂದ್ರ ಸಚಿವ--ಸಿದ್ದು ಸರ್ಕಾರವೇ ಕಾರಣ
ರಾಜ್ಯದಲ್ಲಿರುವ ಹಿಂದೂ ವಿರೋಧಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ನಡವಳಿಕೆಯ ಪರಿಣಾಮವಾಗಿ ದೇಶದ್ರೋಹಿಗಳು ಇಂತಹ ಅಟ್ಟಹಾಸಕ್ಕೆ ಕೈ ಹಾಕುತ್ತಿದ್ದಾರೆ. ಇದು ದೇಶದ್ರೋಹಿಗಳ ಪೂರ್ವನಿಯೋಜಿತ ಕೃತ್ಯ.
- ಬಿ.ವೈ. ವಿಜಯೇಂದ್ರ ಬಿಜೆಪಿ ಅಧ್ಯಕ್ಷ
ಪ್ರಚೋದನೆಗೆ ಒಳಗಾಗಬೇಡಿ
ದುರುಳರು ಯಾವುದೇ ಜಾತಿ, ಧರ್ಮದವರಾಗಿರಲಿ ಅಂಥವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರು ಪ್ರಚೋದನೆಗಳಿಗೆ ಒಳಗಾಗದೆ ಶಾಂತಿ, ಸಂಯಮ ಕಾಪಾಡಿಕೊಳ್ಳಬೇಕು.
- ಸಿದ್ದರಾಮಯ್ಯ ಮುಖ್ಯಮಂತ್ರಿ
ಬುಧವಾರ ರಾತ್ರಿ ನಡೆದಿದ್ದು ಏನು?
ಸಂಜೆ 6.30: ನಾಗಮಂಗಲದ ಬದರಿಕೊಪ್ಪಲು ಸರ್ಕಲ್‌ನಿಂದ ಗಣೇಶ ಮೆರವಣಿಗೆ ಆರಂಭ
ರಾತ್ರಿ 8.00: ನಾಗಮಂಗಲದ ಮಂಡ್ಯ ಸರ್ಕಲ್‌ಗೆ ಮೆರವಣಿಗೆ ಆಗಮನ
ರಾತ್ರಿ 9.00: ದರ್ಗಾ ಬಳಿ ಬಂದ ಮೆರವಣಿಗೆ. ಕಿಡಿಗೇಡಿಗಳಿಂದ ಏಕಾಏಕಿ ಕಲ್ಲು- ಬಾಟಲಿ ತೂರಾಟ. ಮೆರವಣಿಗೆಯಲ್ಲಿದ್ದವರಿಂದಲೂ ಕಲ್ಲೆಸೆತ. ಲಘು ಲಾಠಿ ಪ್ರಹಾರ
ರಾತ್ರಿ 9.15: ಎರಡೂ ಕಡೆಯಿಂದ ಮತ್ತಷ್ಟು ಜನರ ಜಮಾವಣೆ
ರಾತ್ರಿ 9.30: ನಾಗಮಂಗಲದ ವಿವಿಧೆಡೆ ಎರಡೂ ಕಡೆಯಿಂದ ಕಲ್ಲು-ಬಾಟಲಿಗಳ ತೂರಾಟ. ಲಾಠಿ ಪ್ರಹಾರ
ರಾತ್ರಿ 9.45: ಪೊಲೀಸ್ ಠಾಣೆ ಬಳಿ ಗಣೇಶ ಮೂರ್ತಿ ಇಟ್ಟು ಪ್ರತಿಭಟನೆ.
ರಾತ್ರಿ 10.15: ಹೆಚ್ಚುವರಿ ಪೊಲೀಸ್ ಪಡೆ ಆಗಮನ
ರಾತ್ರಿ 12.00: ಪರಿಸ್ಥಿತಿ ತಹಬದಿಗೆ
---
1 ಟ್ರ್ಯಾಕ್ಟರ್ ಲೋಡ್ ಕಲ್ಲು, ಗಾಜು ಪತ್ತೆ!
ಪಟ್ಟಣದ ಮಂಡ್ಯ ಸರ್ಕಲ್ ಹಾಗೂ ಟಿ.ಮರಿಯಪ್ಪ ವೃತ್ತದ ರಾಷ್ಟ್ರೀಯ ಹೆದ್ದಾರಿ ರಸ್ತೆಯಲ್ಲಿ ಒಂದು ಟ್ರಾಕ್ಟರ್‌ನಷ್ಟು ಕಲ್ಲು ಹಾಗೂ ಗಾಜಿನ ಚೂರುಗಳು ಬಿದ್ದಿದ್ದವು. ಗುರುವಾರ ನಸುಕಿನಲ್ಲಿಯೇ ಪುರಸಭೆಯ ಪೌರಕಾರ್ಮಿಕರು ಇವುಗಳನ್ನು ತೆರವುಗೊಳಿಸಿ ಹೆದ್ದಾರಿಯ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.
--
ಪೂರ್ವಯೋಜಿತ ಹಿಂಸಾಚಾರ?
ಕಳೆದ ವರ್ಷ ನಾಗಮಂಗಲದ ದರ್ಗಾ ಮುಂಭಾಗದಲ್ಲಿ ಗಣೇಶನ ಮೆರವಣಿಗೆ ಬರುತ್ತಿದ್ದಂತೆ ಹಿಂದೂ-ಮುಸ್ಲಿಂ ಯುವಕರ ನಡುವೆ ಮಾತಿನ ಚಕಮಕಿ, ವಾಗ್ವಾದ ನಡೆದಿತ್ತು. ಆ ವೇಳೆ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದ್ದರು. ಕಳೆದ ವರ್ಷದ ಸೇಡು ತೀರಿಸಿಕೊಳ್ಳಲು ಈ ಬಾರಿ ಗಲಭೆ ಸೃಷ್ಟಿಸಿರಬಹುದು. ಇಲ್ಲದಿದ್ದಲ್ಲಿ ಕಿಡಿಗೇಡಿಗಳಿಗೆ ಏಕಾಏಕಿ ಅಷ್ಟೊಂದು ಕಲ್ಲುಗಳು, ಬಾಟಲ್‌ಗಳು ಸಿಕ್ಕಿದ್ದಾದರೂ ಹೇಗೆ? ಪೆಟ್ರೋಲ್ ಬಾಂಬ್‌ಗಳು, ಮಚ್ಚು, ಲಾಂಗ್‌ಗಳು ಎಲ್ಲಿಂದ ಬಂದವು? ಸಂಘರ್ಷದ ಮುನ್ಸೂಚನೆ ಇದ್ದರೂ ಪೊಲೀಸರು ನಿರ್ಲಕ್ಷ್ಯವಹಿಸಿದರೆ ಎಂಬ ಪ್ರಶ್ನೆಗಳು ಎದ್ದಿವೆ.