ಒಳ ಮೀಸಲಿಗೆ ವಿರೋಧಿಸಿದ ಮಾಯಾವತಿ ನಿಲುವಿಗೆ ಖಂಡನೆ

| Published : Sep 05 2024, 12:41 AM IST

ಸಾರಾಂಶ

ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲು ಕುರಿತಂತೆ ಬಿಎಸ್ಪಿ ರಾಷ್ಟ್ರೀಯ ಅಧ್ಯಕ್ಷೆ ಮಾಯಾವತಿ ಅವರು ಕೈಗೊಂಡಿರುವ ನಿಲುವನ್ನು ವಿರೋಧಿಸಿ ಜಿಲ್ಲೆಯ ಬಿಎಸ್ಪಿ ಮುಖಂಡರು, ಕಾರ್ಯಕರ್ತರು ಪಕ್ಷ ತೊರೆಯಲು ಮುಂದಾಗಿರುವುದಾಗಿ ಬಿಎಸ್ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ವೈ.ಸಿ.ಕಾಂಬಳೆ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲು ಕುರಿತಂತೆ ಬಿಎಸ್ಪಿ ರಾಷ್ಟ್ರೀಯ ಅಧ್ಯಕ್ಷೆ ಮಾಯಾವತಿ ಅವರು ಕೈಗೊಂಡಿರುವ ನಿಲುವನ್ನು ವಿರೋಧಿಸಿ ಜಿಲ್ಲೆಯ ಬಿಎಸ್ಪಿ ಮುಖಂಡರು, ಕಾರ್ಯಕರ್ತರು ಪಕ್ಷ ತೊರೆಯಲು ಮುಂದಾಗಿರುವುದಾಗಿ ಬಿಎಸ್ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ವೈ.ಸಿ.ಕಾಂಬಳೆ ಹೇಳಿದರು.

ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಶಿಷ್ಟ ಜಾತಿಯ ಒಳ ಮೀಸಲಾತಿಗಾಗಿ ರಾಜ್ಯದ ಬಿಎಸ್ಪಿ ಘಟಕ ಅನೇಕ ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿದೆ. ಹೋರಾಟದ ಫಲವಾಗಿ ಸರ್ಕಾರ ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಿಗೆ ಮುಂದಾಗಿದ್ದು ಸ್ವಾಗತಾರ್ಹವಾಗಿದೆ. ಆದರೆ ಮಾಯಾವತಿ ಅವರು ಒಳ ಮೀಸಲಾತಿಗೆ ವಿರೋಧ ವ್ಯಕ್ತಪಡಿಸಿದ್ದು ದುರದೃಷ್ಟಕರ ಸಂಗತಿಯಾಗಿದೆ ಎಂದರು.

ಒಳ ಮೀಸಲಾತಿ ಹೋರಾಟ ಕುರಿತ ಸಮಗ್ರ ಮಾಹಿತಿ ಮಾಯಾವತಿ ಅವರಿಗೆ ಇದ್ದರೂ ಅವರು ಏಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎನ್ನುವುದು ಗೊತ್ತಾಗುತ್ತಿಲ್ಲ. ಈ ಬಗ್ಗೆ ರಾಜ್ಯ ಮುಖಂಡರು ಅವರಿಗೆ ಮನವರಿಕೆ ಮಾಡಲು ಮುಂದಾದರೂ ಅದಕ್ಕೆ ಅವಕಾಶ ನೀಡಲಿಲ್ಲ. ಸತತವಾಗಿ ರಾಜ್ಯದ ನಾಯಕರು ಹಾಗೂ ಕಾರ್ಯಕರ್ತರು ಒಳ ಮೀಸಲಾತಿ ಪರ ಹೋರಾಟ ನಡೆಸಿಕೊಂಡು ಬಂದಿದ್ದರಿಂದ ಮಾಯಾವತಿ ಅವರ ನಿಲುವಿಗೆ ವಿರೋಧ ವ್ಯಕ್ತಪಡಿಸಿ ಈಗಾಗಲೇ ರಾಜ್ಯದ ಬಿಎಸ್ಪಿ ಮುಖಂಡರು ಪಕ್ಷ ತೊರೆಯುವ ನಿರ್ಧಾರ ಕೈಗೊಂಡಿದ್ದಾರೆ. ಹಾಗೆಯೇ ಜಿಲ್ಲೆಯ ಬಹುತೇಕ ಮುಖಂಡರು, ಕಾರ್ಯಕರ್ತರು ನೋವಿನಿಂದ ಅನಿವಾರ್ಯವಾಗಿ ಪಕ್ಷ ತೊರೆಯಲು ನಿರ್ಧರಿಸಿದ್ದೇವೆ ಎಂದು ತಿಳಿಸಿದರು.

ಮುಂದಿನನಿರ್ಧಾರದ ಕುರಿತು ರಾಜ್ಯ ಮುಖಂಡರು ಸಭೆ ಕರೆದಿದ್ದು, ಆ ಸಭೆಯಲ್ಲಿ ಕೈಗೊಳ್ಳುವ ನಿರ್ಣಯದ ಮೇಲೆ ಮುಂದಿನ ನಡೆ ಕೈಗೊಳ್ಳಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಗುರುಸಿದ್ದಪ್ಪ ಮದಿನಕರ, ಭೀಮರಾವ್ ಕಾಳವ್ವಗೋಳ, ಮಂಜುನಾಥ ಮಾದರ, ನಾಗೇಶ ಚಂದಾವರಿ, ಎಲ್.ವಾಯ್.ಮಾದರ ಇದ್ದರು.