ಜನಪರ ಒಕ್ಕೂಟದ ಹೋರಾಟಕ್ಕೆ ಕಾಂಗ್ರೆಸ್ ಬೆಂಬಲ: ರವೀಂದ್ರ

| Published : Sep 01 2024, 01:54 AM IST

ಸಾರಾಂಶ

ಮಲೆನಾಡು ಕರಾವಳಿ ಜನಪರ ಒಕ್ಕೂಟ ಕಳೆದ ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿದ್ದು, ಅದರ ಮುಂದುವರಿದ ಭಾಗವಾಗಿ ಸೆ.1ರಂದು ಬಾಳೆಹೊನ್ನೂರಿನಲ್ಲಿ ಒಕ್ಕೂಟ ಹಮ್ಮಿಕೊಂಡಿರುವ ಸಭೆಗೆ ಕೊಪ್ಪ ಬ್ಲಾಕ್ ಕಾಂಗ್ರೆಸ್ ಸಮಿತಿ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಸ್.ರವೀಂದ್ರ ಕುಕ್ಕುಡಿಗೆ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬಾಳೆಹೊನ್ನೂರು

ಮಲೆನಾಡು ಕರಾವಳಿ ಜನಪರ ಒಕ್ಕೂಟ ಕಳೆದ ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿದ್ದು, ಅದರ ಮುಂದುವರಿದ ಭಾಗವಾಗಿ ಸೆ.1ರಂದು ಬಾಳೆಹೊನ್ನೂರಿನಲ್ಲಿ ಒಕ್ಕೂಟ ಹಮ್ಮಿಕೊಂಡಿರುವ ಸಭೆಗೆ ಕೊಪ್ಪ ಬ್ಲಾಕ್ ಕಾಂಗ್ರೆಸ್ ಸಮಿತಿ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಸ್.ರವೀಂದ್ರ ಕುಕ್ಕುಡಿಗೆ ತಿಳಿಸಿದ್ದಾರೆ.

ಈಗಾಗಲೇ ಕಳೆದ ಹಲವಾರು ವರ್ಷಗಳಿಂದ ಮಲೆನಾಡಿನ ನೆಲವಾಸಿಗಳು ಕಠಿಣವಾದ ಅರಣ್ಯ ಕಾಯಿದೆಯಿಂದ ಹೊರ ಬರಲು ಸಾಧ್ಯವಾಗುತ್ತಿಲ್ಲ. ಪ್ರಸ್ತುತ ಈ ಸಂದರ್ಭದಲ್ಲಿ ಪರಿಹಾರ ಕಂಡುಕೊಳ್ಳಲು ಮುಕ್ತವಾಗಿ ಚರ್ಚಿಸಿ ಮುಂದಿನ ಹೆಜ್ಜೆ ಇಡಬೇಕಿದೆ. ಈ ನಿಟ್ಟಿನಲ್ಲಿ ಪಕ್ಷಾತೀತವಾಗಿ ನಡೆಯುವ ಸಭೆಗೆ ನಮ್ಮ ಬೆಂಬಲ ಅಗತ್ಯ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮಲೆನಾಡಿನ ಜನರ ಮೇಲೆ ಹಲವಾರು ವರ್ಷಗಳಿಂದ ಅರಣ್ಯ ಕಾಯ್ದೆಗಳಿಂದ ಆಗುತ್ತಿರುವ ಅನ್ಯಾಯ ಅದರಲ್ಲೂ ಮುಖ್ಯ ವಾಗಿ 2007ರಿಂದ 2019ರವರೆಗೆ ಸೆಕ್ಷೆನ್ 4(1) ಅಧಿಸೂಚಿಸುವ ಕಾಲದಲ್ಲಿ ಸಾರ್ವಜನಿಕ ಬಳಕೆಗೂ ಸಹ ಜಾಗ ಬಿಡದೆ ಅವೈಜ್ಞಾನಿಕವಾಗಿ ಅರಣ್ಯ ಇಲಾಖೆ ಕೆಲಸ ನಿರ್ವಹಿಸುವಾಗ ಜನಪ್ರತಿನಿಧಿಗಳು ವಹಿಸಿದ ಮೌನದಿಂದ ಇಲ್ಲಿವರೆಗೆ ಬಂದು ನಿಂತಿದೆ.

ಇದೆಲ್ಲದರ ವಿರುದ್ಧ 2008ರಿಂದಲೂ ಮಲೆನಾಡಿಗರಿಗೆ ಕರಾವಳಿ ಮಲೆನಾಡು ಜನಪರ ಒಕ್ಕೂಟ ಸರ್ಕಾರದ ಗಮನ ಸೆಳೆ ಯುತ್ತಾ ಹೋರಾಟ ರೂಪಿಸಿಕೊಂಡು ಬಂದಿದೆ. ಇತ್ತೀಚೆಗೆ ಅರಣ್ಯ ಹಕ್ಕು ಕಾಯ್ದೆಯ ಕಠಿಣ ಷರತ್ತುಗಳನ್ನು ಸಡಿಲಗೊಳಿಸಿ ಮಲೆನಾಡಿಗರಿಗೆ ಅರಣ್ಯದೊಳಗೆ ಬದುಕು ಕಟ್ಟಿಕೊಳ್ಳಲು ಅನುವು ಮಾಡಿಕೊಡಬೇಕೆಂಬ ಬೇಡಿಕೆಗೆ ಈಗಾಗಲೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಸಂಪುಟ ತೀರ್ಮಾನ ಕಳಿಸಿ ಕೊಟ್ಟಿದೆ.

ಮಲೆನಾಡು ಜನಪರ ಒಕ್ಕೂಟದ ಮತ್ತು ಇತರೆ ಸಂಘಟನೆಗಳು ಮಲೆನಾಡಿನ ಒತ್ತುವರಿ ಸಮಸ್ಯೆ ಮತ್ತು ಕೇಂದ್ರದಿಂದ ಆರನೇ ಬಾರಿಗೆ ಸೂಕ್ಷ್ಮ ಪರಿಸರ ಘೊಷಣೆಗೆ ಅಧಿಸೂಚನೆ ಹೊರಡಿಸಿದ್ದನ್ನು ವಿರೋಧಿಸಿ ಭಾನುವಾರ ಬಾಳೆಹೊನ್ನೂರಿನ ರಂಭಾಪುರಿ ಮಠದ ಸಮುದಾಯ ಭವನದಲ್ಲಿ ರಂಭಾಪುರಿ ಶ್ರೀಗಳ ಬೆಂಬಲದೊಂದಿಗೆ ಮಹತ್ವದ ಸಭೆ ನಡೆಸಲು ತೀರ್ಮಾನಿಸಿದೆ. ಕೊಪ್ಪ ಬ್ಲಾಕ್ ಕಾಂಗ್ರೆಸ್ ಈ ಹೋರಾಟಕ್ಕೆ ಸಂಪೂರ್ಣ ಬೆಂಬಲನೀಡಲಿದೆ ಎಂದು ತಿಳಿಸಿದ್ದಾರೆ.