ತಾಲೂಕಿನ ಸಮಸ್ಯೆಗಳ ಗಂಭೀರ ಪರಿಗಣಿಸಿ, ಪರಿಹಾರ ಕಲ್ಪಿಸಿ: ಶಾಸಕ ಬಿ.ವೈ.ವಿಜಯೇಂದ್ರ

| Published : Sep 05 2024, 12:36 AM IST

ತಾಲೂಕಿನ ಸಮಸ್ಯೆಗಳ ಗಂಭೀರ ಪರಿಗಣಿಸಿ, ಪರಿಹಾರ ಕಲ್ಪಿಸಿ: ಶಾಸಕ ಬಿ.ವೈ.ವಿಜಯೇಂದ್ರ
Share this Article
  • FB
  • TW
  • Linkdin
  • Email

ಸಾರಾಂಶ

ಪೊಲೀಸ್ ಬಿಗಿ ಬಂದೋಬಸ್ತ್‌ನಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಹಲವು ಸಮಸ್ಯೆಗಳ ಕುರಿತು ಚರ್ಚೆ ನಡೆಯಿತು.

ಕನ್ನಡಪ್ರಭ ವಾರ್ತೆ ಶಿಕಾರಿಪುರ

ಪೊಲೀಸ್ ಬಿಗಿ ಬಂದೋಬಸ್ತ್‌ನಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಹಲವು ಸಮಸ್ಯೆಗಳ ಕುರಿತು ಚರ್ಚೆ ನಡೆಯಿತು.

ಶಾಸಕ ಬಿ.ವೈ.ವಿಜಯೇಂದ್ರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಯಾವುದೇ ರಾಜಕೀಯ ಇಲ್ಲದೆ ಕೆಡಿಪಿ ಸಭೆ ನಡೆಯ ಬೇಕು. ತಾಲೂಕಿನ ಜನರಿಗೆ ಸಮರ್ಪಕ ಆಡಳಿತ ತಲುಪಿಸುವುದಕ್ಕೆ ಅದು ಕಾರಣವಾಗಲಿ, ಇಲ್ಲಿ ಚರ್ಚೆಯಾಗುವ ಯಾವುದೇ ಸಮಸ್ಯೆ ಕುರಿತು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಸಮಸ್ಯೆ ಪರಿಹಾರಕ್ಕೆ ಗಮನ ನೀಡಬೇಕು ಅದಕ್ಕೆ ಸರಕಾರದ ಅಗತ್ಯ ಅನುಮತಿ ಕೊಡಿಸುವ ಕೆಲಸ ಮಾಡುತ್ತೇನೆ ಎಂದರು.

ಕೆಡಿಪಿ ಸದಸ್ಯ ನಾಗರಾಜಗೌಡ ಮಾತನಾಡಿ, ಬಹು ಗ್ರಾಮ ಕುಡಿಯುವ ನೀರಿನ ಯೋಜನೆಯಿಂದ ಅಂಜನಾಪುರ ಜಲಾಶಯ ದ ಮೇಲೆ ಒತ್ತಡ ಸೃಷ್ಟಿ ಆಗುತ್ತದೆ. ರೈತರ ಬೆಳೆಗೆ ನೀರು, ಇಡೀ ತಾಲೂಕಿಗೆ ಕುಡಿಯುವ ನೀರು ಒದಗಿಸುವಾಗ ಬರಗಾಲದಲ್ಲಿ ರೈತರಿಗೆ ತೊಂದರೆ ಆಗುತ್ತದೆ, ಅದಕ್ಕಾಗಿ ಯೋಜನೆ ಕುರಿತು ಚಿಂತನೆ ನಡೆಸಬೇಕು ಎಂದರು.

ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಜಲಾಶಯ ಹೂಳೆತ್ತುವ ಕಾರ್ಯಕ್ಕೆ ಚಿಂತನೆ, ತುಂಗಾ ನದಿಯಿಂದ ಹೆಚ್ಚು ನೀರು ತರುವುದು ಸೇರಿ ಅಗತ್ಯ ಕ್ರಮ ಕೈಗೊಂಡು ಯಾರಿಗೂ ತೊಂದರೆಯಾಗದಂತೆ ಯೋಜನೆ ಮುನ್ನಡೆಸೋಣ ಎಂದರು.

ಸದಸ್ಯ ರಾಘವೇಂದ್ರ ನಾಯ್ಕ ಮಾತನಾಡಿ, ಕೆಎನ್ಎನ್ಎಲ್, ಲ್ಯಾಂಡ್‌ ಆರ್ಮಿ ತಾಲೂಕಿನಲ್ಲಿ ಕೈಗೊಂಡಿರುವ ಎಸ್ಟಿಪಿಟಿಎಸ್ಪಿ ಯೊಜನೆಯಡಿ ಅಂಬಾರಗೊಪ್ಪ, ತರಲಘಟ್ಟ ಗ್ರಾಮದಲ್ಲಿ ಮಾಡಿರುವ ಸಿಸಿ ರಸ್ತೆ, ಚರಂಡಿ ಸೇರಿ ಹಲವು ಕಾಮಗಾರಿ ಕಳಪೆ ಆಗಿವೆ. ಬಿಜೆಪಿ ಮುಖಂಡರ ಜಮೀನಿಗೆ ತೆರಳುವ ರಸ್ತೆಗಾಗಿ ಕೆರೆ ಒತ್ತುವರಿ ಮಾಡಿದ್ದಲ್ಲದೆ ಖಾಸಗಿ ವ್ಯಕ್ತಿ ಜಮೀನಿನಲ್ಲಿ ರಸ್ತೆ ನಿರ್ಮಿಸಿದ್ದಾರೆ. ಕಲ್ಮನೆ, ಸಾಲೂರು ಸೇರಿ ಹಲವೆಡೆ ಜಲಜೀವನ್ ಮಿಷನ್ ಯೋಜನೆ ಕಾಮಗಾರಿ ಕಳಪೆ ಆಗಿದೆ. ಮೆಸ್ಕಾಂ ಕಾಮಗಾರಿ ಮೂರು ಗುತ್ತಿಗೆದಾರರಿಗೆ ಮಾತ್ರ ಹೆಚ್ಚು ಕೆಲಸ ನೀಡುತ್ತಿದ್ದಾರೆ. ಅದರಲ್ಲಿ ಮೆಸ್ಕಾಂ ಅಭಿಯಂತರ ಶಾಮೀಲಾಗಿದ್ದಾರೆ. ಈ ಕುರಿತು ತನಿಖೆ ನಡೆಸುವಂತೆ ಒತ್ತಾಯಿಸಿದರು. ಇದಕ್ಕೆ ಸಂಸದ ಬಿ.ವೈ.ರಾಘವೇಂದ್ರ ಪ್ರತಿಕ್ರಿಯೆ ನೀಡಿ, ಆರೋಪಗಳ ಕುರಿತು ತನಿಖೆ ನಡೆಸುವ ಭರವಸೆ ನೀಡಿದರು.

ಪುರಸಭೆ ಆಡಳಿತ ಕುರಿತು ಜನತೆ ಬೇಸತ್ತಿದ್ದಾರೆ. ಇ-ಸ್ವತ್ತು ಸೇರಿ ಅಗತ್ಯ ಕೆಲಸಗಳು ಲಂಚ ಇಲ್ಲದೆ ಆಗುತ್ತಿಲ್ಲ ಎಂದು ನಾಗರಾಜಗೌಡ ಸಭೆ ಗಮನ ಸೆಳೆದರು. ಈ ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದರಲ್ಲದೆ ಮುಂದೆ ಅಂತಹ ಆರೋಪ ಬಾರದಂತೆ ಎಚ್ಚರಿಕೆ ವಹಿಸುವಂತೆ ಎಚ್ಚರಿಸಿದರು.

ಮಳೆಯಿಂದ ಅಡಕೆ, ಮೆಕ್ಕೆಜೋಳ ಸೇರಿದಂತೆ ಹಾನಿಗೊಳಗಾದ ರೈತರ ಬೆಳೆಗಳ ಕುರಿತು ಮಾಹಿತಿ ಪಡೆದು ಅದಕ್ಕೆ ನೀಡ ಬಹುದಾದ ಪರಿಹಾರ, ಸರಕಾರಕ್ಕೆ ವರದಿ ಸಲ್ಲಿಸಲು ಸೂಚಿಸಲಾಯಿತು. ಕ್ಷೇತ್ರದ ವಿವಿಧ ಇಲಾಖೆಗಳ ಪ್ರಗತಿಯಲ್ಲಿರುವ ಅಭಿವೃದ್ಧಿ ಕಾರ್ಯಗಳು ಹಾಗೂ ತುರ್ತಾಗಿ ಕೈಗೆತ್ತಿಕೊಳ್ಳಬೇಕಿರುವ ವಿವಿಧ ಕಾಮಗಾರಿಗಳ ಕುರಿತು ಚರ್ಚಿಸಿ ಅಗತ್ಯ ಕ್ರಮ ವಹಿಸುವಂತೆ ನಿರ್ದೇಶನ ನೀಡಲಾಯಿತು.

ತಹಸೀಲ್ದಾರ್ ಮಲ್ಲೇಶ್ ಬೀರಪ್ಪ ಪೂಜಾರ್, ಎಲ್ಲ ಇಲಾಖೆ ಹಿರಿಯ ಅಧಿಕಾರಿಗಳು, ಗ್ರಾ.ಪಂ. ಅಧ್ಯಕ್ಷರು, ಕೆಡಿಪಿ ಸದಸ್ಯರು ಇದ್ದರು.

ಮಳೆಹಾನಿ, ಸಂತ್ರಸ್ತರ ಬಗ್ಗೆ ಚರ್ಚಿಸಿ, ಸಮಸ್ಯೆ ಪರಿಹರಿಸಿ

ತಾಲೂಕಿನಲ್ಲಿ ಮಳೆಯಿಂದಾಗಿ ಆಗಿರುವ ಹಾನಿ, ಮನೆ ಕಳೆದುಕೊಂಡ ಕುಟುಂಬಗಳ ಕುರಿತು ಚರ್ಚಿಸಿ ಶೀಘ್ರ ಪರಿಹಾರಕ್ಕೆ ಡಿಪಿ ಸಭೆಯಲ್ಲಿ ಸಂಸದ ರಾಘವೇಂದ್ರ ಸೂಚಿಸಿದರಲ್ಲದೆ, ಕೆರೆ-ಕಟ್ಟೆಗಳು, ಲೋಕೋಪಯೋಗಿ ವ್ಯಾಪ್ತಿಯ ಕಟ್ಟಡಗಳ ಪರಿಸ್ಥಿತಿ ಕುರಿತು ಮಾಹಿತಿ ಪಡೆದು ಸಮಸ್ಯೆಗೆ ಪರಿಹಾರ ಸೂಚಿಸಲಾಯಿತು. ವಿದ್ಯಾರ್ಥಿಗಳಿಗೆ ಸಾರಿಗೆ ಸಮಸ್ಯೆಗೆ ಪರಿಹಾರ ಕಲ್ಪಿಸುವ ಭರವಸೆಯನ್ನೂ ನೀಡಲಾಯಿತು. ಸಾಂಕ್ರಾಮಿಕ ರೋಗಗಳು ಹರಡದಂತೆ ಮುನ್ನೆಚ್ಚರಿಕೆ ತೆಗೆದುಕೊಳ್ಳುವಂತೆ ಇದೇ ವೇಳೆ ಸೂಚನೆ ನೀಡಲಾಯಿತು.