ಲಕ್ಷ್ಮೇಶ್ವರ: ಕಟ್ಟಡ ಕಾರ್ಮಿಕರಿಗೆ ಗುಣಮಟ್ಟದ ಸುರಕ್ಷತಾ ಕಿಟ್ ವಿತರಣೆ ಬದಲು ಕಳಪೆ ಕಿಟ್ ವಿತರಿಸಿ ಗುತ್ತಿಗೆದಾರರು ಕೈತೊಳೆದುಕೊಂಡಿದ್ದಾರೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಆರೋಪಿಸಿದರು.
ಬುಧವಾರ ಪಟ್ಟಣದ ತಾಪಂ ಸಭಾಂಗಣದಲ್ಲಿ ಕಾರ್ಮಿಕ ಇಲಾಖೆ ಕೊಡಮಾಡಿರುವ ಸುರಕ್ಷತಾ ಕಿಟ್ ವಿತರಿಸಿ ಮಾತನಾಡಿದರು.ಸರ್ಕಾರ ಕಟ್ಟಡ ಹಾಗೂ ಇತರ ನಿರ್ಮಾಣ ಕಾರ್ಮಿಕರ ಸುರಕ್ಷತಾ ದೃಷ್ಟಿಯಿಂದ ಕಿಟ್ ವಿತರಣೆ ಮಾಡುತ್ತಿದೆ. ಆದರೆ ಲಕ್ಷ್ಮೇಶ್ವರ ತಾಲೂಕಿನಲ್ಲಿ ಕಿಟ್ ವಿತರಣೆ ಗುತ್ತಿಗೆ ಪಡೆದವರು ಕಳಪೆ ಗುಣಮಟ್ಟದ ವಸ್ತುಗಳನ್ನು ನೀಡಿದ್ದಾರೆ. ಕಾಟಾಚಾರಕ್ಕೆ ಸುರಕ್ಷತಾ ಕಿಟ್ ವಿತರಣೆ ಮಾಡಿದ್ದಾರೆ. ಕಾರ್ಮಿಕ ಇಲಾಖೆಯ ಅಧಿಕಾರಿಗಳಿಗೆ ಗುಣಮಟ್ಟದ ಕಿಟ್ ನೀಡುವಂತೆ ತಿಳಿಸಿದ್ದರೂ ನಿರ್ಲಕ್ಷ್ಯ ಮಾಡುತ್ತಿರುವುದು ಸರಿಯಾದ ಕ್ರಮವಲ್ಲ. ಕಾರ್ಮಿಕರಿಗೆ ಕಳಪೆ ಗುಣಮಟ್ಟದ ಕಿಟ್‌ಗಳ ಈ ಕುರಿತು ಮಾಹಿತಿ ನೀಡಿದ್ದೇವೆ. ಸುರಕ್ಷತಾ ಕಟ್ ವಿತರಣೆಯ ಗುತ್ತಿಗೆ ಪಡೆದವರು ಕಳಪೆ ಗುಣಮಟ್ಟದ ವಸ್ತುಗಳನ್ನುನೀಡಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಾಗೂ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ಆಗ್ರಹಿಸಿದರು.
ಕಟ್ಟಡ ಹಾಗೂ ಇತರೆ ಕಾರ್ಮಿಕರ ಆರೋಗ್ಯ ತಪಾಸಣೆ ಹಾಗೂ ರಕ್ತ ತಪಾಸಣೆ ಮಾಡಿಸುವಂತೆ ವಿಧಾನಸಭೆಯ ಬಜೆಟ್ ಅಧಿವೇಶನದಲ್ಲಿ ಮಾತನಾಡಲಾಗಿತ್ತು. ಆದರೂ ಸರ್ಕಾರ ಆರೋಗ್ಯ ತಪಾಸಣೆ ಮಾಡಿಸದಿರುವುದು ದುರ್ದೈವ ಸಂಗತಿ. ಕಟ್ಟಡ ಕಾರ್ಮಿಕರ ಆರೋಗ್ಯ ತಪಾಸಣಾ ಶಿಬಿರವನ್ನು ಸರಿಯಾಗಿ ಆಯೋಜಿಸಿಲ್ಲ. ಕಟ್ಟಡ ಕಾರ್ಮಿಕರ ಹಾಗೂ ಅವರ ಮಕ್ಕಳ ಮದುವೆ ಪ್ರೋತ್ಸಾಹಧನ ನೀಡುವಲ್ಲಿ ತಾರತಮ್ಯ ನೀತಿ ಅನುಸರಿಸುತ್ತಿರುವುದು ಸರಿಯಾದ ಕ್ರಮವಲ್ಲ. ಶೀಘ್ರದಲ್ಲಿ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಈ ಕುರಿತು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.ಈ ವೇಳೆ ತಾಲೂಕಿನ ಸುಮಾರು 362 ಜನ ಕಟ್ಟಡ ಹಾಗೂ ಇತರೆ ಕಾರ್ಮಿಕರಿಗೆ ಸುರಕ್ಷತಾ ಕಿಟ್ ವಿತರಿಸಲಾಯಿತು. ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮಂಜುಳಾ ಹಕಾರಿ, ತಾಪಂ ಸಹಾಯಕ ಅಧಿಕಾರಿ ಕೃಷ್ಣಪ್ಪ ಧರ್ಮರ, ತಾಲೂಕಿನ ಕಾರ್ಮಿಕರ ಕಲ್ಯಾಣ ಇಲಾಖೆಯ ಅಧಿಕಾರಿ ಅಭಿನಂದನ್ ಇದ್ದರು. ಕಟ್ಟಡ ಕಾರ್ಮಿಕರ ಸಂಘದ ಮೌನೇಶ ಬಾಲೆಹೊಸೂರ, ಚಾವಡಿ ಸೇರಿದಂತೆ ಅನೇಕರು ಇದ್ದರು.