ಗವಿಸಿದ್ಧೇಶ್ವರ ರಥೋತ್ಸವಕ್ಕೆ ಕ್ಷಣಗಣನೆ

| Published : Jan 15 2025, 12:46 AM IST

ಗವಿಸಿದ್ಧೇಶ್ವರ ರಥೋತ್ಸವಕ್ಕೆ ಕ್ಷಣಗಣನೆ
Share this Article
  • FB
  • TW
  • Linkdin
  • Email

ಸಾರಾಂಶ

ನಗರದ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಜ. ೧೫ರ ಸಂಜೆ ಮಹಾರಥೋತ್ಸವ ಜರುಗಲಿದೆ. ಮಹಾರಥೋತ್ಸವ ಕಣ್ತುಂಬಿಕೊಳ್ಳಲು ಲಕ್ಷ ಲಕ್ಷ ಭಕ್ತಗಣ ಕಾತರದಲ್ಲಿದೆ.

ನಿರೀಕ್ಷೆಗೂ ಮೀರಿ ಜನರ ಆಗಮನ । ರಥೋತ್ಸವಕ್ಕೆ ಪ್ರಸಿದ್ಧ ಹಿಂದುಸ್ತಾನಿ ಗಾಯಕ, ಪಂಡಿತ್‌ ಪದ್ಮಶ್ರೀ ಎಂ. ವೆಂಕಟೇಶ ಕುಮಾರ್ ಚಾಲನೆ । ಸಿಂಗಾರಗೊಂಡ ಕೊಪ್ಪಳ

ಕನ್ನಡಪ್ರಭ ವಾರ್ತೆ ಕೊಪ್ಪಳನಗರದ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಜ. ೧೫ರ ಸಂಜೆ ಮಹಾರಥೋತ್ಸವ ಜರುಗಲಿದೆ. ಮಹಾರಥೋತ್ಸವ ಕಣ್ತುಂಬಿಕೊಳ್ಳಲು ಲಕ್ಷ ಲಕ್ಷ ಭಕ್ತಗಣ ಕಾತರದಲ್ಲಿದೆ. ಈ ವರ್ಷದ ಗವಿಸಿದ್ಧೇಶ್ವರ ಮಹಾರಥೋತ್ಸಕ್ಕೆ ಧಾರವಾಡದ ಪ್ರಸಿದ್ಧ ಹಿಂದುಸ್ತಾನಿ ಗಾಯಕ, ಪಂಡಿತ ಪದ್ಮಶ್ರೀ ಎಂ. ವೆಂಕಟೇಶ ಕುಮಾರ್ ಚಾಲನೆ ನೀಡಲಿದ್ದಾರೆ. ನಂತರ ಕೈಲಾಸ ಮಂಟಪದಲ್ಲಿ ಜರುಗುವ ಉದ್ಘಾಟನೆ ಸಮಾರಂಭದ ಸಾನಿಧ್ಯವನ್ನು ತುಮಕೂರಿನ ಸಿದ್ದಗಂಗಾ ಮಠದ ಸಿದ್ದಲಿಂಗ ಮಹಾಸ್ವಾಮಿಗಳು ಹಾಗೂ ವಿಜಯಪುರದ ಹುಬ್ಬಳ್ಳಿ ಷಣ್ಮುಖಾರೂಢ ಮಠದ ಅಭಿನವ ಸಿದ್ಧಾರೂಢ ಮಹಾಸ್ವಾಮಿಗಳು ವಹಿಸಿಕೊಳ್ಳಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬೆಂಗಳೂರಿನ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಚಲನಚಿತ್ರ ನಿರ್ದೇಶಕ ಡಾ. ನಾಗತಿಹಳ್ಳಿ ಚಂದ್ರಶೇಖರ್ ಆಗಮಿಸುತ್ತಾರೆ. ಕೈಲಾಸ ಮಂಟಪದಲ್ಲಿ ನಡೆಯುವ ಸಂಗೀತ ಕಾರ್ಯಕ್ರಮದಲ್ಲಿ ಧಾರವಾಡದ ಬಸವರಾಜ ವಂದಲಿ ಹಾಗೂ ಹುಬ್ಬಳ್ಳಿಯ ಸುಜಯಿಂದ್ರ ಕುಲಕರ್ಣಿ ಹಾಗೂ ತಂಡದವರಿಂದ ಸಂಗೀತ ಕಾರ್ಯಕ್ರಮ ಜರುಗಲಿದೆ. ಮತ್ತು ಮೈಸೂರಿನ ಸರಿಗಮಪ ಖ್ಯಾತಿಯ ಗಾಯಕ ಶ್ರೀ ಹರ್ಷ ಎಂ.ಆರ್. ಹಾಗೂ ತಂಡದವರಿಂದ ಸಂಗೀತ ಕಾರ್ಯಕ್ರಮ ಜರುಗಲಿದೆ. ಸಡಗರ ಇಮ್ಮಡಿ:ದಕ್ಷಿಣ ಭಾರತದ ಕುಂಭಮೇಳ ಖ್ಯಾತಿಯ ಗವಿಸಿದ್ಧೇಶ್ವರ ಮಹಾರಥೋತ್ಸವದ ಹಿನ್ನೆಲೆ ಇಡೀ ಕೊಪ್ಪಳದಲ್ಲಿ ಸಡಗರ ಮನೆ ಮಾಡಿದೆ. ರಾಜ್ಯ, ಅನ್ಯರಾಜ್ಯಗಳಿಂದಲೂ ಸಹ ಜನ ಆಗಮಿಸುತ್ತಿದ್ದಾರೆ. ಕಳೆದ ಎರಡು ದಿನಗಳಿಂದ ನಾನಾ ಜಿಲ್ಲೆಗಳಿಂದ ಅಪಾರ ಪ್ರಮಾಣದಲ್ಲಿ ಭಕ್ತರು ಪಾದಯಾತ್ರೆ ಸಹ ಬರುತ್ತಿದ್ದಾರೆ. ಲೆಕ್ಕಕ್ಕೆ ಸಿಗದಷ್ಟು ಲಕ್ಷ ಲಕ್ಷ ಭಕ್ತರು ರಥೋತ್ಸವಕ್ಕೆ ಸಾಕ್ಷಿಯಾಗಲಿದ್ದಾರೆ. ರಥೋತ್ಸವಕ್ಕೆ ಕ್ಷಣವನ್ನು ಎದುರು ನೋಡುತ್ತಿದ್ದಾರೆ.ಗವಿಸಿದ್ದಪ್ಪಜ್ಜನ ಜಾತ್ರೆ ಎಂದರೆ ಎಲ್ಲರಿಗೂ ಎಲ್ಲಿಲ್ಲದ ಸಡಗರ. ಕೊಪ್ಪಳ ನಗರದಲ್ಲಿ ಪ್ರತಿ ಮನೆಯೂ ಮಧುವಣಗಿತ್ತಿಯಂತೆ ಜಾತ್ರಾ ಮಹೋತ್ಸವಕ್ಕೆ ಶೃಂಗಾರಗೊಂಡಿವೆ. ನಗರದ ಪ್ರಮುಖ ಬೀದಿಗಳೂ ಭಕ್ತರನ್ನು ಜಾತ್ರಾ ಮಹೋತ್ಸವಕ್ಕೆ ಸ್ವಾಗತಿಸುತ್ತಿವೆ. ಮನೆಯಂಗಳಲ್ಲಿ ರಂಗೋಲಿ ಹಾಕಿ ಮಹಿಳೆಯರು ಚಿತ್ತಾರ ಬಿಡಿಸಿದ್ದಾರೆ. ಮಹಾದಾಸೋಹ: ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ರಥೋತ್ಸವದ ದಿನ ಅಪಾರ ಪ್ರಮಾಣದಲ್ಲಿ ಭಕ್ತರು ಆಗಮಿಸಿ ಪ್ರಸಾದ ಸ್ವೀಕರಿಸಲಿದ್ದಾರೆ. ಏಕ ಕಾಲದಲ್ಲಿ ಸಾವಿರಾರು ಭಕ್ತರು ಪ್ರಸಾದ ಸ್ವೀಕರಿಸುವ ವ್ಯವಸ್ಥೆ ಮಾಡಲಾಗಿದೆ. ಲಕ್ಷ ಲಕ್ಷ ಭಕ್ತರು ರಥೋತ್ಸವ ದಿನ ಪ್ರಸಾದ ಸ್ವೀಕರಿಸಲಿದ್ದಾರೆ. ಭಕ್ತರಿಗಾಗಿ ರೊಟ್ಟಿ, ಮಾದಲಿ, ಜಿಲೇಬಿ, ಅನ್ನ, ಸಾಂಬಾರ್, ಚಟ್ನಿ, ತರಹೇವಾರಿ ತರಕಾರಿ ಪಲ್ಯೆ ಸಿದ್ದಪಡಿಸಲಾಗುತ್ತದೆ.ಗ್ರಾಮ ಗ್ರಾಮಗಳಲ್ಲಿ ಭಕ್ತಿ ಸೇವೆ:ಜಾತ್ರೆಯ ಮಹಾದಾಸೋಹಕ್ಕೆ ನಾನಾ ಗ್ರಾಮಗಳಲ್ಲಿ ರೊಟ್ಟಿ, ಹೋಳಿಗೆ, ಧಾನ್ಯ, ಚಟ್ನಿ, ಉಪ್ಪಿನಕಾಯಿ ಹೀಗೆ ಅಪಾರ ಪ್ರಮಾಣದಲ್ಲಿ ಸೇವೆಯನ್ನು ಗ್ರಾಮ ಗ್ರಾಮಗಳಲ್ಲಿ ಭಕ್ತರು ಸಮರ್ಪಿಸಿದ್ದಾರೆ. ಗವಿಸಿದ್ದಪ್ಪಜ್ಜನ ಜಾತ್ರೆಯ ರಥೋತ್ಸವ ದಿನ ಸಹ ಅಪಾರ ಪ್ರಮಾಣದಲ್ಲಿ ಜನರು ಆಗಮಿಸಿ ಭಕ್ತಿಯಿಂದ ಸಿದ್ದಪಡಿಸಿದ ಸೇವೆಯನ್ನು ಗವಿಮಠದ ದಾಸೋಹಕ್ಕೆ ನೀಡಲಿದ್ದಾರೆ.