ಇದಕ್ಕೆ ಸಂಸದ ಮಂಜುನಾಥ್ ರವರು ಕಾಮಗಾರಿ ಪೂರ್ಣಗೊಳಿಸದ ಗುತ್ತಿಗೆದಾರರಿಗೆ ದಂಡ ವಿಧಿಸಬೇಕು. ಜೆಜೆಎಂ ಕಾಮಗಾರಿಗಳ ಕುರಿತು ಚರ್ಚಿಸಲು 10 ದಿನದೊಳಗೆ ಪಿಡಿಒ ಹಾಗೂ ಗುತ್ತಿಗೆದಾರರ ಸಭೆ ಕರೆಯುವಂತೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಅಭಿಯಂತರ ನಿರ್ದೇಶಿಸಿದರು.

ಕನ್ನಡಪ್ರಭ ವಾರ್ತೆ ರಾಮನಗರ

ಮಣ್ಣು, ಜಲ, ವಾಯು ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಜಮೀನುಗಳಲ್ಲಿ ಬೆಳೆಗಳಿಗೆ ನ್ಯಾನೋ ಯೂರಿಯಾ ಬಳಸಲು ಜಿಲ್ಲೆಯ ರೈತರಲ್ಲಿ ಪ್ರಾತ್ಯಕ್ಷಿಕೆ ಮೂಲಕ ಅರಿವು ಮೂಡಿಸುವಂತೆ ಸಂಸದ ಡಾ. ಸಿ.ಎನ್. ಮಂಜುನಾಥ್ ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಕೇಂದ್ರ ಪುರಸ್ಕೃತ ಯೋಜನೆಗಳ 2025- 26ನೇ ಸಾಲಿನ ಮೂರನೇ ತ್ರೈಮಾಸಿಕ ಜಿಲ್ಲಾ ಮಟ್ಟದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಸಭೆಯಲ್ಲಿ ಮಾತನಾಡಿದ ಅವರು, ದ್ರವ ಮಾದರಿಯ 500 ಎಂ.ಎಲ್. ನ್ಯಾನೋ ಯೂರಿಯಾವು 45 ಕೆಜಿ ಘನ ಯೂರಿಯಾಗೆ ಸಮನಾಗಿದ್ದು, ರೈತರು ತಮ್ಮ ಬೆಳೆಗಳಿಗೆ ನ್ಯಾನೋ ಯೂರಿಯಾವನ್ನೇ ಸಿಂಪಡಿಸುವಂತೆ ಅರಿವು ಮೂಡಿಸಬೇಕು ಎಂದರು.

ಕೇಂದ್ರ ಸರ್ಕಾರ ಯೂರಿಯಾಗೆ ₹1.1 ಲಕ್ಷ ಕೋಟಿ ಸಬ್ಸಿಡಿ ನೀಡಿದರೆ, ಒಟ್ಟಾರೆ ರಸಗೊಬ್ಬರಗಳಿಗೆ ₹1.7 ಲಕ್ಷ ಕೋಟಿ ಸಬ್ಸಿಡಿ ನೀಡುತ್ತಿದೆ. ದ್ರವ ಮಾದರಿಯ ಯೂರಿಯಾ ಬಳಕೆಯಿಂದ ಹೊರೆ ತಪ್ಪಲಿದೆ. ಅಲ್ಲದೆ, ದ್ರವ ಮಾದರಿಯ ಯೂರಿಯಾ ದಾಸ್ತಾನಿಗೆ ಗೋದಾಮು ಹಾಗೂ ಸರಬರಾಜು ಮಾಡಲು ವಾಹನದ ಅವಶ್ಯಕತೆ ಇರುವುದಿಲ್ಲ ಎಂದು ಮಂಜುನಾಥ್ ಹೇಳಿದರು.

ದಿಶಾ ಸದಸ್ಯೆ ಶೋಭಾರವರು ಕೃಷಿ ಹೊಂಡಗಳ ನಿರ್ಮಾಣದಲ್ಲಿ ಅವ್ಯವಹಾರ ನಡೆದಿದ್ದು, ಈ ಬಗ್ಗೆ ತನಿಖೆ ನಡೆಸುವಂತೆ ಹೇಳಿದಾಗ ಸಂಸದರು, ಮುಂದಿನ ಸಭೆಗೆ ಜಿಲ್ಲೆಯಲ್ಲಿ ಎಷ್ಟು ಕೃಷಿ ಹೊಂಡಗಳನ್ನು ನಿರ್ಮಿಸಲಾಗಿದೆ. ಎಷ್ಟು ಮುಚ್ಚಲಾಗಿವೆ, ಅವುಗಳ ಸ್ಥಿತಿಗತಿ ಬಗ್ಗೆ ಮಾಹಿತಿ ನೀಡುವಂತೆ ಕೃಷಿ ಅಧಿಕಾರಿಗಳಿಗೆ ಸೂಚಿಸಿದರು.

ಸಂಸದ ಮಂಜುನಾಥ್ ರವರು ಜಿಲ್ಲಾಸ್ಪತ್ರೆ ,ತಾಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು, ನರ್ಸ್ ಗಳು ಮತ್ತು ಸಿಬ್ಬಂದಿ ಕೊರತೆ ಇದೆಯೇ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಜಿಲ್ಲಾ ಆರೋಗ್ಯಾಧಿಕಾರಿ ನಿರಂಜನ್ , ಒಂದು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಾತ್ರ ವೈದ್ಯರ ಕೊರತೆ ಇದೆ. ಉಳಿದಂತೆ 15 ಸ್ಟಾಫ್ ನರ್ಸ್ ಗಳ ಹುದ್ದೆಗಳು ಖಾಲಿಯಿದ್ದು, ಯಾರೂ ಅರ್ಜಿ ಸಲ್ಲಿಸಿಲ್ಲ. ರೇಡಿಯಾಲಜಿಸ್ಟ್ ಗಳ ಕೊರತೆ ಇದೆ ಎಂದು ಹೇಳಿದರು.

ಕನಕಪುರ, ಮಾಗಡಿ, ಆನೇಕಲ್ , ಕುಣಿಗಲ್ ಸೇರಿದಂತೆ ಐದು ತಾಲೂಕು ಆಸ್ಪತ್ರೆಗಳಿಗೆ ಎಕೋ ಯಂತ್ರಗಳನ್ನು ಕೊಡಿಸಲಾಗುತ್ತಿದೆ. ಅಲ್ಲಿಗೆ ರೇಡಿಯಾಲಜಿಸ್ಟ್ ಗಳ ಅವಶ್ಯಕತೆ ಇರುತ್ತದೆ. ಹಾಗಾಗಿ ರಾಜರಾಜೇಶ್ವರಿ, ಚಾಮುಂಡೇಶ್ವರಿ ಹಾಗೂ ದಯಾನಂದಸಾಗರ್ ವೈದ್ಯಕೀಯ ಕಾಲೇಜುಗಳಲ್ಲಿ ಪಿಜಿ ಮಾಡುತ್ತಿರುವ ವಿದ್ಯಾರ್ಥಿಗಳನ್ನು ನಿಯೋಜನೆ ಮಾಡಿಕೊಳ್ಳಲು ಕ್ರಮ ವಹಿಸುವಂತೆ ಮಂಜುನಾಥ್ ರವರು ಜಿಲ್ಲಾ ಆರೋಗ್ಯಾಧಿಕಾರಿಗೆ ಸಲಹೆ ನೀಡಿದರು.

ದಿಶಾ ಸದಸ್ಯ ನರಸಿಂಹಮೂರ್ತಿ ಮಾತನಾಡಿ, ಹೆರಿಗೆ ಸೇವೆಗಳನ್ನು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಸ್ಥಗಿತಗೊಳಿಸಿ, ಗರ್ಭಿಣಿಯರನ್ನು ತಾಲೂಕು ಆಸ್ಪತ್ರೆಗಳಿಗೆ ಕಳುಹಿಸಲಾಗುತ್ತಿದೆ ಎಂದು ಗಮನ ಸೆಳೆದರು. ಇದಕ್ಕೆ ಮಂಜುನಾಥ್ ರವರು ಈ ಸಂಗತಿ ನನ್ನ ಗಮನಕ್ಕೂ ಬಂದಿದೆ. ತಾಲೂಕು ಆಸ್ಪತ್ರೆಗಳಲ್ಲಿ ಹೆರಿಗೆ ಸೇವೆಗಳನ್ನು ಸೀಮಿತಗೊಳಿಸಿದರೆ ಹೆಚ್ಚಿನ ಅನಾಹುತಗಳು ಸಂಭವಿಸುತ್ತವೆ. ಶೀಘ್ರದಲ್ಲಿ ಆರೋಗ್ಯ ಸಚಿವರು ಹಾಗೂ ಆರೋಗ್ಯ ಇಲಾಖೆ ಕಾರ್ಯದರ್ಶಿಗಳೊಂದಿಗೆ ಚರ್ಚೆ ನಡೆಸುತ್ತೇನೆ ಎಂದು ಹೇಳಿದರು.

ಗುತ್ತಿಗೆದಾರರಿಗೆ ದಂಡ ವಿಧಿಸುವ ಎಚ್ಚರಿಕೆ:

ಜಲ್ ಜೀವನ್ ಮಿಷನ್ (ಜೆಜೆಎಂ) ಯೋಜನೆಯಡಿ ಜಿಲ್ಲೆಯ 1528 ಕಾಮಗಾರಿಗಳ ಪೈಕಿ 895 ಕಾಮಗಾರಿಗಳು ಪೂರ್ಣಗೊಂಡಿವೆ. 556 ಪ್ರಕ್ರಿಯೆಯಲ್ಲಿದೆ ಎಂದು ಎಂಜಿನಿಯರ್ ವಿವರ ನೀಡಿದರು. ಆಗ ದಿಶಾ ಸದಸ್ಯ ಶಿವಣ್ಣರವರು ಬಾಕಿ ಉಳಿದ ಕಾಮಗಾರಿಗಳನ್ನು ಆದಷ್ಟು ಶೀಘ್ರವಾಗಿ ಪೂರ್ಣಗೊಳಿಸಬೇಕು. ಇಲ್ಲಿ ಕಾಮಗಾರಿಗಳನ್ನು ತ್ವರಿತ ಗತಿಯಲ್ಲಿ ಪೂರ್ಣಗೊಳ್ಳಲು ಸಂಬಂಧಪಟ್ಟ ಗುತ್ತಿಗೆದಾರರಿಗೆ ಸೂಚಿಸಬೇಕು ಎಂದು ಮನವಿ ಮಾಡಿದರು.

ಇದಕ್ಕೆ ಸಂಸದ ಮಂಜುನಾಥ್ ರವರು ಕಾಮಗಾರಿ ಪೂರ್ಣಗೊಳಿಸದ ಗುತ್ತಿಗೆದಾರರಿಗೆ ದಂಡ ವಿಧಿಸಬೇಕು. ಜೆಜೆಎಂ ಕಾಮಗಾರಿಗಳ ಕುರಿತು ಚರ್ಚಿಸಲು 10 ದಿನದೊಳಗೆ ಪಿಡಿಒ ಹಾಗೂ ಗುತ್ತಿಗೆದಾರರ ಸಭೆ ಕರೆಯುವಂತೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಅಭಿಯಂತರ ನಿರ್ದೇಶಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಯಶವಂತ್ ವಿ.ಗುರುಕರ್ , ಜಿಪಂ ಸಿಇಒ ಅನ್ಮೋಲ್ ಜೈನ್, ಉಪ ವಿಭಾಗಾಧಿಕಾರಿ ಬಿನೋಯ್, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಧನರಾಜ್ , ಮುಖ್ಯ ಯೋಜನಾಧಿಕಾರಿ ಚಿಕ್ಕಸುಬ್ಬಯ್ಯ, ಅಪರ ಪೊಲೀಸ್ ವರಿಷ್ಠಾಧಿಕಾರಿ ರಾಮಚಂದ್ರಯ್ಯ ಉಪಸ್ಥಿತರಿದ್ದರು.