ಕಾರಣವಿಲ್ಲದೆ ಜಿಲ್ಲೆಯ ಹೆಸರು ಬದಲಾವಣೆ ಸಲ್ಲ: ರೈತಸಂಘ

| Published : Jul 13 2024, 01:32 AM IST

ಕಾರಣವಿಲ್ಲದೆ ಜಿಲ್ಲೆಯ ಹೆಸರು ಬದಲಾವಣೆ ಸಲ್ಲ: ರೈತಸಂಘ
Share this Article
  • FB
  • TW
  • Linkdin
  • Email

ಸಾರಾಂಶ

ರಾಮನಗರ ಜಿಲ್ಲೆಯ ಹೆಸರನ್ನು ಬದಲಿಸಿ ಬೆಂಗಳೂರು ದಕ್ಷಿಣ ಜಿಲ್ಲೆಯ ಎಂದು ಮರುನಾಮಕರಣ ಮಾಡುವ ಪ್ರಸ್ತಾಪವನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತಸಂಘದ ತಾಲೂಕು ಘಟಕದಿಂದ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು. ಚನ್ನಪಟ್ಟಣದಲ್ಲಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿ ಮಾತನಾಡಿದರು.

-ರಾಮನಗರ ಜಿಲ್ಲೆ ಮರುನಾಮಕರಣಕ್ಕೆ ಖಂಡನೆ

-ರಾಜ್ಯ ಸರ್ಕಾರದ ವಿರುದ್ಧ ಘೋಷಣೆಕನ್ನಡಪ್ರಭ ವಾರ್ತೆ ಚನ್ನಪಟ್ಟಣ

ರಾಮನಗರ ಜಿಲ್ಲೆಯ ಹೆಸರನ್ನು ಬದಲಿಸಿ ಬೆಂಗಳೂರು ದಕ್ಷಿಣ ಜಿಲ್ಲೆಯ ಎಂದು ಮರುನಾಮಕರಣ ಮಾಡುವ ಪ್ರಸ್ತಾಪವನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತಸಂಘದ ತಾಲೂಕು ಘಟಕದಿಂದ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.

ಶುಕ್ರವಾರ ನಗರದ ತಾಲೂಕು ಕಚೇರಿ ಮುಂದೆ ಜಮಾಯಿಸಿದ ರೈತ ಸಂಘದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ರಾಮನಗರ ಜಿಲ್ಲೆಯ ಹೆಸರು ಬದಲಾವಣೆ ಪ್ರಸ್ತಾಪವನ್ನು ಖಂಡಿಸಿದರು. ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಬೆಂಗಳೂರು ಜಿಲ್ಲೆಯ ಜನಸಂಖ್ಯೆಯ ಬೆಳವಣೆಗೆಗನುಗುಣವಾಗಿ ಸುಗಮ ಆಡಳಿತಕ್ಕಾಗಿ ೧೯೮೬ರಲ್ಲಿ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳನ್ನು ಸೃಷ್ಟಿಸಲಾಯಿತು. ಮತ್ತದೇ ಕಾರಣ ನೀಡಿ ೨೦೦೭ರಲ್ಲಿ ಗ್ರಾಮಾಂತರ ಜಿಲ್ಲೆಯನ್ನು ವಿಭಜಿಸಿ ಚಿಕ್ಕಬಳ್ಳಾಪುರ, ರಾಮನಗರ ಜಿಲ್ಲೆಗಳನ್ನಾಗಿ ವಿಂಗಡಿಸಲಾಯಿತು. ಆದರೆ ಸರ್ಕಾರ ಸಕಾರಣವಿಲ್ಲದೆ ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ನಾಮಕರಣ ಮಾಡಲು ಹೊರಟಿರುವ ಕ್ರಮ ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯ ಈಗಾಗಲೇ ಭೀಕರ ಬರಗಾಲದಿಂದ ತತ್ತರಿಸಿ ಹೋಗಿದ್ದು, ರೈತರು ಬಿತ್ತನೆ ಬೀಜ, ಗೊಬ್ಬರ, ಕ್ರಿಮಿನಾಶಕಗಳಂತಹ ಅವಶ್ಯಕ ಸಾಮಗ್ರಿಗಳ ಸರಬರಾಜಿಲ್ಲದೆ ಕಂಗಾಲಾಗಿದ್ದಾರೆ. ಸರ್ಕಾರ ರೈತರ ಕೊಳವೆಬಾವಿಗಳ ವಿದ್ಯುತ್ ಸಂಪರ್ಕಕ್ಕೆ ಬೇಕಾದ ಎಲ್ಲಾ ಸಾಮಗ್ರಿಗಳನ್ನು ರೈತರೇ ಭರಿಸಬೇಕೆಂಬ ನಿರ್ಣಯ ಮಾಡಿದೆ. ಜತೆಗೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ, ಅವಶ್ಯಕ ವಸ್ತುಗಳ ಬೆಲೆ ಏರಿಕೆ ಮಾಡಿದೆ. ರೈತರಿಗೆ ಮಾರಕ ಮೂರು ಕೃಷಿ ಕಾಯ್ದೆಗಳ ವಾಪಸಾತಿ, ಹದಗೆಡುತ್ತಿರುವ ಕಾನೂನು ಸುವ್ಯವಸ್ಥೆಗಳ ಬಗ್ಗೆ ಒತ್ತು ನೀಡಬೇಕಾದ ಜವಾಬ್ದಾರಿ ಸರ್ಕಾರದ ಮೇಲಿದ್ದು, ಇದನ್ನು ಸೂಕ್ತವಾಗಿ ನಿರ್ವಹಿಸಲಿ ಎಂದು ಸಲಹೆ ನೀಡಿದರು.

ರೈತರು ಬೆಳೆದ ಬೆಳೆಗೆ ಬೆಂಬಲ ಬೆಲೆ ಬೇಕೇ ವಿನಃ ರೈತನ ಭೂಮಿಗೆ ಬೆಲೆ ಬೇಕಿಲ್ಲ. ಇದು ರೈತನನ್ನು ಒಕ್ಕಲೆಬ್ಬಿಸುವ ತಂತ್ರವಾಗಿದೆ. ರಾಜ್ಯದ ಮಂತ್ರಿಮಂಡಲದ ಸದಸ್ಯರ ಮೇಲೆ ಗುರುತರ ಅಪಾದನೆಗಳು ಬರುತ್ತಿವೆ. ಸರ್ಕಾರ ರಾಜ್ಯ ಅಭಿವೃದ್ಧಿ ಚಿಂತನೆಗಿಂತ ಅನಾವಶ್ಯಕ ಕಾರ್ಯಕ್ರಮಗಳನ್ನು ಬೆನ್ನತ್ತಿ ರಾಜ್ಯದಲ್ಲಿ ಗೊಂದಲಮಯ ವಾತಾವರಣ ಸೃಷ್ಟಿಸಿ ನೈಜ ಸಮಸ್ಯೆಗಳನ್ನು ಮರೆಮಾಚುವ ಹುನ್ನಾರ ನಡೆಸಿದೆ ಎಂದು ಆರೋಪಿಸಿದರು.

ರಾಜ್ಯ ವಿಭಾಗೀಯ ಉಪಾಧ್ಯಕ್ಷ ಕೆ.ಮಲ್ಲಯ್ಯ, ಜಿಲ್ಲಾ ಉಪಾಧ್ಯಕ್ಷ ಕೆ.ಎಸ್.ರಾಜು, ತಾಲೂಕು ಅಧ್ಯಕ್ಷ ರಾಮೇಗೌಡ, ಜಿಲ್ಲಾ ಕಾರ್ಯಾಧ್ಯಕ್ಷ ಪುಟ್ಟಸ್ವಾಮಿ, ಕೋದಂಡರಾಮ ಸೇರಿ ಅನೇಕರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.