ಸಾರಾಂಶ
ಶಿರಸಿ: ಪ್ರಜಾಪ್ರಭುತ್ವದ ದೇಗುಲವಾದ ಬೆಳಗಾವಿಯ ಸುವರ್ಣಸೌಧದಲ್ಲಿ ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಕೀಳುಮಟ್ಟದ ಭಾಷಾ ಪ್ರಯೋಗ ಮಾಡಿ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ ಅವರನ್ನು ನಿಂದಿಸಿರುವುದು ಅಕ್ಷಮ್ಯ ಅಪರಾಧ. ಇದರಿಂದ ರಾಜ್ಯ ಹಾಗೂ ದೇಶದ ಮಹಿಳೆಯರು ತಲೆ ತಗ್ಗಿಸುವಂತಾಗಿದ್ದು, ಕಾನೂನಿನ ಮೂಲಕ ಕಠಿಣ ಶಿಕ್ಷೆಯಾಗಬೇಕು ಎಂದು ಶಿರಸಿ-ಸಿದ್ದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಆಗ್ರಹಿಸಿದರು.
ಶನಿವಾರ ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬಿಜೆಪಿಯವರು ಮಾತೆತ್ತಿದರೆ ತತ್ವ-ಸಿದ್ಧಾಂತ ಎಂದು ಹೇಳುತ್ತಾರೆ. ಶಾಸಕರಾಗಿ, ಸಚಿವರಾಗಿ ಕೆಲಸ ಮಾಡಿದ ಸಿ.ಟಿ. ರವಿ ಅವರ ವರ್ತನೆಗೆ ಬೇಸತ್ತು ಕ್ಷೇತ್ರದ ಜನತೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲಿಸಿ ಮನೆಗೆ ಕಳುಹಿಸಿದ್ದರು. ನಂತರ ಬಿಜೆಪಿಯವರು ವಿಧಾನಪರಿಷತ್ ಸದಸ್ಯರನ್ನಾಗಿ ಆಯ್ಕೆ ಮಾಡಿ, ಜನರ ಸೇವೆಗೆ ಅವಕಾಶ ಕಲ್ಪಿಸಿದ್ದರು. ಆದರೆ, ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳುವುದನ್ನು ಬಿಟ್ಟು ರಾಜ್ಯದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ ಅವರಿಗೆ ಅಧಿವೇಶನದಲ್ಲಿ ಅವಾಚ್ಯ ಶಬ್ದದಿಂದ ನಿಂದಿಸಿ, ಮಹಿಳೆಯರ ಮೇಲೆ ಅಗೌರವ ಬರುವ ರೀತಿಯಲ್ಲಿ ಮಾತನಾಡಿದ್ದಾರೆ. ಅವರ ಮಾತನ್ನು ವೈಯಕ್ತಿವಾಗಿ ಹಾಗೂ ಕಾಂಗ್ರೆಸ್ ಪಕ್ಷದ ಪರವಾಗಿ ಖಂಡಿಸುತ್ತೇನೆ ಎಂದು ಹೇಳಿದರು.
ಇಸಳೂರಿನ ವಕ್ಫ್ ಮಂಡಳಿಗೆ ಸೇರಿದ ಜಮೀನು ಕಾನೂನಿನ ಪ್ರಕಾರವಾಗಿದ್ದು, ರೈತರ ಜಮೀನು ಅತಿಕ್ರಮಣವಾಗಿಲ್ಲ. ದಾಖಲೆ ಪತ್ರದ ಸಮೇತ ಅವರಿಗೆ ನೀಡಲಾಗಿದೆ. ಆದರೆ, ಅಧಿವೇಶನದಲ್ಲಿ ಜವಾಬ್ದಾರಿ ಸ್ಥಾನದಲ್ಲಿರುವ ವಿರೋಧ ಪಕ್ಷದ ನಾಯಕ ಆರ್.ಅಶೋಕ ಅವರು ಇಸಳೂರಿನಲ್ಲಿ ೫೦ ಎಕರೆ ಜಮೀನು ವಕ್ಫ್ ಹೆಸರಿಗೆ ನೋಂದಣಿಯಾಗಿದೆ ಎಂದು ಸುಳ್ಳು ಹೇಳಿದಾಗ ತಕ್ಷಣ ಖಂಡಿಸಿ, ಅಧಿಕಾರಿಗಳಿಂದ ಸರಿಯಾದ ಮಾಹಿತಿ ಒದಗಿಸಿದ್ದೇನೆ. ಅಲ್ಲದೇ ಸರಿಯಾದ ಮಾಹಿತಿ ಪಡೆದು ಮಾತನಾಡಿ ಎಂದು ತಿಳಿಸಿದ್ದೇನೆ. ಅವರಿಗೆ ಇಲ್ಲಿನ ಬಿಜೆಪಿ ಮುಖಂಡರು ಗೊಂದಲ ಸೃಷ್ಟಿ ಮಾಡಲು ಸುಳ್ಳು ಮಾಹಿತಿ ನೀಡಿದ್ದು, ಅದನ್ನು ಸಹ ಖಂಡಿಸುತ್ತೇನೆ ಎಂದರು.
ಅಗೌರವ
ಬಿಜೆಪಿಯವರಿಗೆ ಅಭಿವೃದ್ಧಿ ಬೇಕಾಗಿಲ್ಲ. ಕೇವಲ ಸುಳ್ಳು ಮಾತ್ರ ಗೊತ್ತು. ಮಹಿಳೆಯರ ಮೇಲೆ ಅಗೌರವದ ಮಾತನ್ನಾಡಿದ ಸಿ.ಟಿ. ರವಿ ಅವರಿಗೆ ತಕ್ಕ ಶಿಕ್ಷೆಯಾಗಬೇಕು.
ಭೀಮಣ್ಣ ನಾಯ್ಕ, ಶಾಸಕ