ದ.ಕ. ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ: 4 ದಿನ ವಿಶೇಷ ನೋಂದಣಿ ಅಭಿಯಾನ

| Published : Oct 31 2024, 12:56 AM IST / Updated: Oct 31 2024, 12:57 AM IST

ಸಾರಾಂಶ

ಜನವರಿ1, ಏಪ್ರಿಲ್1, ಜುಲೈ1, ಅಕ್ಟೋಬರ್1, ಈ ನಾಲ್ಕು ದಿನಗಳಂದು 18 ವರ್ಷ ತುಂಬಿರುವ ಮತದಾರರು ಸೇರ್ಪಡೆಗೆ ಅರ್ಜಿ ಸಲ್ಲಿಸಬಹುದು. ಜಿಲ್ಲೆಯ ಎಲ್ಲ ಮತಗಟ್ಟೆಗಳಲ್ಲಿ ನ.9, 10, 23, 24ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5ರವರೆಗೆ ವಿಶೇಷ ನೋಂದಣಿ ಕಾರ್ಯಕ್ರಮ ನಡೆಯಲಿದ್ದು, ಎಲ್ಲ ಅರ್ಹ ಮತದಾರರು ಪಟ್ಟಿಗೆ ಹೆಸರು ಸೇರಿಸಲು ಅರ್ಜಿ ಸಲ್ಲಿಸಬಹುದು.

ಕನ್ನಡಪ್ರಭ ವಾರ್ತೆ ಮಂಗಳೂರು

ಭಾರತೀಯ ಚುನಾವಣಾ ಆಯೋಗವು ಮತದಾರರ ಪಟ್ಟಿಗಳ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ 2025ರ ವೇಳಾಪಟ್ಟಿ ಹೊರಡಿಸಿದ್ದು, ಅ.29ರಂದು ಕರಡು ಮತದಾರರ ಪಟ್ಟಿ ಪ್ರಕಟಿಸಲಾಗಿದೆ. ಅ.29ರಿಂದ ನ.28ರವರೆಗೆ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸ್ವೀಕರಿಸಲಾಗುತ್ತದೆ. ನ.9, 10 ಹಾಗೂ 23, 24ರಂದು ವಿಶೇಷ ನೋಂದಣಿ ಅಭಿಯಾನ ಆಯಾ ಮತಗಟ್ಟೆಗಳಲ್ಲಿ ನಡೆಯಲಿದೆ.

ಡಿ.24ರಂದು ಹಕ್ಕು ಮತ್ತು ಆಕ್ಷೇಪಣೆಗಳ ವಿಲೇವಾರಿ ನಡೆಯಲಿದ್ದು, ಜ.6ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುವುದು.

ಕರಡು ಮತದಾರರ ಪಟ್ಟಿಯಲ್ಲಿ ಜಿಲ್ಲೆಯ ವಿಧಾನಸಭಾ ಕ್ಷೇತ್ರವಾರು ಮತದಾರರ ವಿವರ: ಬೆಳ್ತಂಗಡಿ 2,32,269, ಮೂಡುಬಿದಿರೆ- 2,10,211, ಮಂಗಳೂರು ನಗರ ಉತ್ತರ- 2,56,112, ಮಂಗಳೂರು ನಗರ ದಕ್ಷಿಣ- 2,53,407, ಮಂಗಳೂರು- 2,09,955, ಬಂಟ್ವಾಳ- 2,29,236, ಪುತ್ತೂರು- 2,16,821, ಸುಳ್ಯ- 2,09,261.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕರಡು ಮತದಾರರ ಪಟ್ಟಿಯಲ್ಲಿ 51,815 ಮತದಾರರ ಸೇರ್ಪಡೆ ಮಾಡಲಾಗಿದ್ದು, 22,948 ತೆಗೆದು ಹಾಕಲಾಗಿದೆ. 28,827 ಹೆಸರು ತಿದ್ದುಪಡಿ ಮಾಡಲಾಗಿದೆ. 18ರಿಂದ 19ರ ಹರೆಯದ 19,905 ಯುವ ಮತದಾರರು ಸೇರ್ಪಡೆಯಾಗಿದ್ದಾರೆ. 85 ವರ್ಷ ಮೇಲ್ಪಟ್ಟ 23,894 ಮತದಾರರಿದ್ದರೆ, 14,268 ವಿಕಲಚೇತನ ಮತದಾರರಿದ್ದಾರೆ. 258 ಆನಿವಾಸಿ ಭಾರತೀಯ ಮತ್ತು 514 ಸೇವಾ ಮತದಾರರಿದ್ದಾರೆ.

ಜನವರಿ1, ಏಪ್ರಿಲ್1, ಜುಲೈ1, ಅಕ್ಟೋಬರ್1, ಈ ನಾಲ್ಕು ದಿನಗಳಂದು 18 ವರ್ಷ ತುಂಬಿರುವ ಮತದಾರರು ಸೇರ್ಪಡೆಗೆ ಅರ್ಜಿ ಸಲ್ಲಿಸಬಹುದು. ಜಿಲ್ಲೆಯ ಎಲ್ಲ ಮತಗಟ್ಟೆಗಳಲ್ಲಿ ನ.9, 10, 23, 24ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5ರವರೆಗೆ ವಿಶೇಷ ನೋಂದಣಿ ಕಾರ್ಯಕ್ರಮ ನಡೆಯಲಿದ್ದು, ಎಲ್ಲ ಅರ್ಹ ಮತದಾರರು ಪಟ್ಟಿಗೆ ಹೆಸರು ಸೇರಿಸಲು ಅರ್ಜಿ ಸಲ್ಲಿಸಬಹುದು.

ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಮೊಬೈಲ್ ಆಪ್ ïvoter helpline app(VHA) ಮೂಲಕ ಅಥವಾ ವೆಬ್‍ಸೈಟ್ https://voters.eci.gov.in ಮೂಲಕ ಅರ್ಜಿ ಸಲ್ಲಿಸಬಹುದು. ವಯಸ್ಸು ಮತ್ತು ವಾಸಸ್ಥಳದ ದಾಖಲೆಗಳು ಮತ್ತು ಒಂದು ಪಾಸ್‍ಪೋರ್ಟ್ ಅಳತೆಯ ಭಾವಚಿತ್ರವನ್ನು ಲಗತ್ತಿಸಬೇಕು.

ಅರ್ಜಿ ನಮೂನೆಗಳು:

ನಮೂನೆ 6: 18 ವರ್ಷ ಪೂರೈಸಿದ ಹೊಸ ಮತದಾರರು ಮತದಾರರ ಪಟ್ಟಿಗೆ ತಮ್ಮ ಹೆಸರು ಸೇರ್ಪಡೆ ಮಾಡಲು.

ನಮೂನೆ 6ಂ: ಅನಿವಾಸಿ ಭಾರತೀಯರು ಮತದಾರರ ಪಟ್ಟಿಗೆ ತಮ್ಮ ಹೆಸರು ಸೇರ್ಪಡೆ ಮಾಡಲು.

ನಮೂನೆ 7: ಮತದಾರರ ಪಟ್ಟಿಯಿಂದ ಹೆಸರು ತೆಗೆದು ಹಾಕಲು.

ನಮೂನೆ 8: ವಿಳಾಸ ಸ್ಥಳಾಂತರ, ಮತದಾರರ ಪಟ್ಟಿಯಲ್ಲಿ ಹೆಸರು, ತಂದೆಯ ಹೆಸರು, ವಿಳಾಸ, ವಯಸ್ಸು, ಲಿಂಗ ಮುಂತಾದವುಗಳನ್ನು ತಿದ್ದುಪಡಿ ಮಾಡಲು, ಎಪಿಕ್ ಕಾರ್ಡ್ ಬದಲಾಯಿಸಲು ಇತ್ಯಾದಿ.

ನಮೂನೆ 6: ಮತದಾರರ ಗುರುತಿನ ಚೀಟಿಗೆ ಆಧಾರ್ ಸಂಖ್ಯೆಯನ್ನು ಜೋಡಣೆ ಮಾಡಲು.

ಸಾರ್ವಜನಿಕರು ತಮ್ಮ ವ್ಯಾಪ್ತಿಯ ಮತಗಟ್ಟೆ ಅಧಿಕಾರಿಗಳಲ್ಲಿ ಅಥವಾ ಮತದಾರರ ನೋಂದಣಾಧಿಕಾರಿ ಕಚೇರಿ (ಎ.ಸಿ ಕಚೇರಿ, ತಹಸೀಲ್ದಾರ್‌ ಕಚೇರಿ) ಭೇಟಿ ನೀಡಿ ಮತದಾರರ ಹೆಸರು ನೋಂದಾಯಿಸುವ ಬಗ್ಗೆ ಅಥವಾ ಲೋಪದೋಷಗಳ ಬಗ್ಗೆ ಪರಿಶೀಲಿಸಬಹುದು.

ವೆಬ್ ಪೋರ್ಟಲ್ www.ecokarnataka.kar.nic.in,https://voters.eci.gov.in ಮತ್ತು www.dk.nic.in ನಲ್ಲಿ ವಿವರಗಳನ್ನು ಪರಿಶೀಲಿಸಬಹುದು. ಮತದಾರರ ಸಹಾಯವಾಣಿ 1950 ಸಂಖ್ಯೆಗೆ ಕರೆ ಮಾಡಿ ಮಾಹಿತಿ ಪಡೆಯಬಹುದು.

ಮತದಾರರ ಪಟ್ಟಿ ಪರಿಷ್ಕರಣೆ ಪರಿಣಾಮಕಾರಿಯಾಗಲು ಎಲ್ಲ ರಾಜಕೀಯ ಪಕ್ಷಗಳು ಪ್ರತಿ ಬೂತ್ ಮಟ್ಟದಲ್ಲಿ ಬಿಎಲ್‍ಎಗಳನ್ನು ನೇಮಕಾತಿ ಮಾಡಬೇಕೆಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.