ಪ್ರಿಯಾಂಕ್‌ ಖರ್ಗೆ ಪರ ದಲಿತ- ಜನಪರ ಸಂಘಟನೆಗಳ ಪ್ರತಿಭಟನೆ

| Published : Oct 19 2025, 01:00 AM IST

ಸಾರಾಂಶ

ಸಚಿವ ಪ್ರಿಯಾಂಕ್ ಖರ್ಗೆ ಅವರು ರಾಜ್ಯದ ಹಲವು ಭಾಗಗಳಲ್ಲಿ ಸಂಭವಿಸುತ್ತಿರುವ ಸಾಮಾಜಿಕ ವಿರೋಧಿ ಘಟನೆಗಳನ್ನು ಬಗ್ಗೆ ನೇರ ನುಡಿಗಳಿಂದ ಖಂಡಿಸಿದ್ದಾರೆ. ಆರ್‌ಎಸ್‌ಎಸ್‌ ಸಂಘಟನೆ ನಿಷೇಧಕ್ಕೆ ಸಿಎಂಗೆ ಪತ್ರ ಬರೆದಿದ್ದಾರೆ.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಪ್ರಾಣ ಬೆದರಿಕೆ ಹಾಕಿರುವ ಕಿಡಿಗೇಡಿಗಳನ್ನು ಬಂಧಿಸುವಂತೆ ಒತ್ತಾಯಿಸಿ ದಲಿತ ಹಾಗೂ ಜನಪರ ಸಂಘಟನೆಗಳ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.

ಪಟ್ಟಣದ ಸಾರಿಗೆ ಬಸ್ ನಿಲ್ದಾಣದಿಂದ ತಾಲೂಕು ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಆರ್‌ಎಸ್‌ಎಸ್ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರಿಯಾಂಕ್ ಖರ್ಗೆ ಅವರಿಗೆ ನೈತಿಕ ಬಲ ತುಂಬಿದರು.

ನಿವೃತ್ತ ಪ್ರಾಂಶುಪಾಲ ಎಂ.ವಿ.ಕೃಷ್ಣ ಮಾತನಾಡಿ, ಆರ್‌ಎಸ್‌ಎಸ್ ಎನ್ನುವುದು ಒಂದು ಸುಳ್ಳಿನ ಸಂಘಟನೆ. ಮುಸ್ಲಿಂ ವಿರುದ್ಧದ ಹೋರಾಟದ ಹೆಸರಿನಲ್ಲಿ ಶೋಷಿತರನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ. ಸನಾತನ ಧರ್ಮದ ಹೆಸರಿನಲ್ಲಿ ಮನುವಾದಿ ಸಂಸ್ಕೃತಿಯನ್ನು ಮರುಕಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ದೂರಿದರು.

ರಾಷ್ಟ್ರವನ್ನು ಬ್ರಿಟಿಷರು ಸೇರಿದಂತೆ ಹಲವಾರು ರಾಜರು ಆಳ್ವಿಕೆ ನಡೆಸಿದ್ದಾರೆ. ಯಾರೂ ಕೂಡ ಯಾವುದೇ ಧರ್ಮವನ್ನು ನಾಶಪಡಿಸಲು ಸಾಧ್ಯವಾಗಿಲ್ಲ. ಬಿಜೆಪಿಯವರು ಹಿಂದೂ ಧರ್ಮಕ್ಕೆ ಅಪಾಯ ಬಂದಿದೆ ಎನ್ನುವುದಾದರೆ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಏನು ಮಾಡುತ್ತಿದೆ ಎಂದು ಪ್ರಶ್ನಿಸಿದರು.

ಜಿಲ್ಲಾ ಪರಿಷತ್ ಮಾಜಿ ಸದಸ್ಯ ಪೂರಿಗಾಲಿ ಜಯರಾಜು ಮಾತನಾಡಿ, ಸಚಿವ ಪ್ರಿಯಾಂಕ್ ಖರ್ಗೆ ಅವರು ರಾಜ್ಯದ ಹಲವು ಭಾಗಗಳಲ್ಲಿ ಸಂಭವಿಸುತ್ತಿರುವ ಸಾಮಾಜಿಕ ವಿರೋಧಿ ಘಟನೆಗಳನ್ನು ಬಗ್ಗೆ ನೇರ ನುಡಿಗಳಿಂದ ಖಂಡಿಸಿದ್ದಾರೆ. ಆರ್‌ಎಸ್‌ಎಸ್‌ ಸಂಘಟನೆ ನಿಷೇಧಕ್ಕೆ ಸಿಎಂಗೆ ಪತ್ರ ಬರೆದಿದ್ದಾರೆ. ಇದನ್ನು ಸಹಿಸದೆ ಕೊಲೆ ಬೆದರಿಕೆ ಹಾಕಿರುವ ಪಟ್ಟಭದ್ರ ಶಕ್ತಿಗಳನ್ನು ಕೂಡಲೇ ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ನಿವೃತ್ತ ಉಪನ್ಯಾಸಕ ಪ್ರೊ. ರಂಗಸ್ವಾಮಿ, ಸಾಗ್ಯ ಕೆಂಪಯ್ಯ, ಶಿವಕುಮಾರ್, ಶೆಟ್ಟಹಳ್ಳಿ ಲಿಂಗರಾಜು, ಪ್ರಕಾಶ್, ಕಿರಣ್‌ಶಂಕರ್, ಮಹದೇವಯ್ಯ, ವಿಜಯ್‌ಕುಮಾರ್, ಶಿವಕುಮಾರ್, ವೇದವತಿ, ಮುದ್ದರಾಜ್, ಮಹದೇವಪ್ಪ, ಪ್ರಸಾದ್ ಸೇರಿದಂತೆ ಇತರರಿದ್ದರು.