ಸಾರಾಂಶ
ತುರುವೇಕೆರೆ: ರಾಜ್ಯದ ಗೃಹ ಸಚಿವರಾಗಿರುವ ಡಾ.ಜಿ.ಪರಮೇಶ್ವರ್ ರವರ ತವರು ಜಿಲ್ಲೆಯಲ್ಲಿಯೇ ದಲಿತರಿಗೆ ರಕ್ಷಣೆ ಇಲ್ಲದಾಗಿದೆ ಎಂದು ಜಿಲ್ಲಾ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ದಂಡಿನಶಿವರ ಕುಮಾರ್ ಆರೋಪಿಸಿದ್ದಾರೆ.
ತುರುವೇಕೆರೆ: ರಾಜ್ಯದ ಗೃಹ ಸಚಿವರಾಗಿರುವ ಡಾ.ಜಿ.ಪರಮೇಶ್ವರ್ ರವರ ತವರು ಜಿಲ್ಲೆಯಲ್ಲಿಯೇ ದಲಿತರಿಗೆ ರಕ್ಷಣೆ ಇಲ್ಲದಾಗಿದೆ ಎಂದು ಜಿಲ್ಲಾ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ದಂಡಿನಶಿವರ ಕುಮಾರ್ ಆರೋಪಿಸಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾ ಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಜಿಲ್ಲೆಯಲ್ಲಿ ದಲಿತರ ಮೇಲೆ ದೌರ್ಜನ್ಯಗಳು, ಗಲಾಟೆಗಳು ದಿನೇ ದಿನೇ ಹೆಚ್ಚಾಗುತ್ತಿವೆ. ಮಧುಗಿರಿ ತಾಲೂಕಿನ ದಲಿತ ಸಮುದಾಯದಕ್ಕೆ ಸೇರಿದ ಆನಂದರನ್ನು ಹಾಡುಹಗಲೇ ಕೊಲೆ ಮಾಡಲಾಗಿದೆ. ಇದರಿಂದಾಗಿ ದಲಿತರಿಗೆ ಸೂಕ್ತ ರಕ್ಷಣೆ ಇಲ್ಲ ಎಂಬುದು ಸಾಬೀತಾಗಿದೆ. ಕುಡಿಯುವ ನೀರು ಬರುತ್ತಿಲ್ಲ ಎಂದು ನೀರು ವಿತರಕ ಹಾಗೂ ಗ್ರಾಮ ಪಂಚಾಯತಿ ಸದಸ್ಯರನ್ನು ದಲಿತ ಆನಂದ ಕೇಳಿದ್ದೇ ತಪ್ಪಾಯಿತೇ? ವಾಹನದಿಂದ ಗುದ್ದಿಸಿ ಕೊಲೆ ಮಾಡುವ ಹಂತಕ್ಕೆ ತಲುಪಿದ್ದಾರೆ ಎಂದರೆ ಅವರಿಗೆ ಕಾನೂನಿನ ಭಯ ಎಷ್ಟಿದೆ ಎಂಬುದು ಅರಿವಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು. ಮೃತ ಕುಟುಂಬದ ಸದಸ್ಯರಿಗೆ ಜೀವನೋಪಾಯಕ್ಕೆ ಪರಿಹಾರ ಹಣವನ್ನು ಸರ್ಕಾರ ಮಂಜೂರು ಮಾಡಬೇಕು ಹಾಗೂ ಸರ್ಕಾರ ದಲಿತರಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ದಂಡಿನಶಿವರ ಕುಮಾರ್ ಒತ್ತಾಯಿಸಿದರು.ಸುದ್ದಿಗೋಷ್ಠಿಯಲ್ಲಿ ದಲಿತ ಮುಖಂಡರಾದ ಮುನಿಯೂರು ರಂಗಸ್ವಾಮಿ, ಬೋರಯ್ಯ, ಗೋವಿಂದರಾಜು, ಸಂತೋಷ, ರಂಗರಾಜು, ವಿನಯ್ ಕುಮಾರ್ ಸೇರಿ ಇತರರು ಇದ್ದರು.