ಅಂಬೇಡ್ಕರ್‌ ಭವನ ಮುಂದೆ ಮತ್ತೆ ಕೋಳಿ ಅಂಗಡಿ ಆರಂಭಕ್ಕೆ ಬೇಲೂರಲ್ಲಿ ದಲಿತರ ಆಕ್ರೋಶ

| Published : Apr 28 2024, 01:20 AM IST

ಅಂಬೇಡ್ಕರ್‌ ಭವನ ಮುಂದೆ ಮತ್ತೆ ಕೋಳಿ ಅಂಗಡಿ ಆರಂಭಕ್ಕೆ ಬೇಲೂರಲ್ಲಿ ದಲಿತರ ಆಕ್ರೋಶ
Share this Article
  • FB
  • TW
  • Linkdin
  • Email

ಸಾರಾಂಶ

ಬೇಲೂರು ಪಟ್ಟಣದ ಅಂಬೇಡ್ಕರ್ ಭವನ ಬಳಿಯ ಕೋಳಿ ಅಂಗಡಿ ಪುನಃ ತೆರೆಯಬಾರದು ಎಂದು ದಲಿತ ಮುಖಂಡರು ಪುರಸಭಾ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಮಳಿಗೆಗಳ ಬೀಗ ಮುದ್ರೆ ತೆರವು ವೇಳೆ ಅಧಿಕಾರಿಗಳೊಂದಿಗೆ ಮಾತಿನ ಚಕಮಕಿ

ಕನ್ನಡಪ್ರಭ ವಾರ್ತೆ ಬೇಲೂರು

ಪಟ್ಟಣದ ಅಂಬೇಡ್ಕರ್ ಭವನ ಬಳಿಯ ಕೋಳಿ ಅಂಗಡಿ ಪುನಃ ತೆರೆಯಬಾರದು ಎಂದು ದಲಿತ ಮುಖಂಡರು ಪುರಸಭಾ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಪಟ್ಟಣದ ಬಸ್ ನಿಲ್ದಾಣದ ಮುಂಭಾಗದಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ಭವನದ ಬಳಿ ಅಸ್ವಚ್ಛತೆಗೆ ಕಾರಣವಾಗಿದ್ದ ಕೋಳಿ ಅಂಗಡಿಗಳನ್ನು ಕಳೆದ ಎರಡು ದಶಕಗಳ ಹೋರಾಟಕ್ಕೆ ಸ್ಪಂದಿಸಿದ ಇಲ್ಲಿನ ಶಾಸಕ ಎಚ್.ಕೆ.ಸುರೇಶ್, ಪುರಸಭೆಯ ಅಧ್ಯಕ್ಷರು ಹಾಗೂ ಮುಖ್ಯಾಧಿಕಾರಿಗಳ ಕಾರ್ಯಕ್ಷಮತೆಯಿಂದ ತೆರವು ಮಾಡಲಾಗಿತ್ತು. ಆದರೆ ಕೋಳಿ ಅಂಗಡಿ ಮಾಲೀಕರು ನ್ಯಾಯಾಲಯದ ಮೆಟ್ಟಿಲು ಏರಿ ತಮಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವ ತನಕ ಸ್ಥಳಾವಕಾಶಕ್ಕೆ ಅರ್ಜಿ ಸಲ್ಲಿಸಿದ್ದರು. ಅಂತೆಯೇ ಪುರಸಭಾ ಅಧಿಕಾರಿಗಳು ಹಾಗೂ ಸಿಬ್ಬಂದಿ ಬುಧವಾರ ಸಂಜೆ ಕೋಳಿ ಅಂಗಡಿಗಳಿಗೆ ಹಾಕಿದ ಬೀಗ ಮುದ್ರೆಯನ್ನು ತೆಗೆಯಲು ಬಂದ ಸಂದರ್ಭದಲ್ಲಿ ದಲಿತ ಮುಖಂಡರು ಮತ್ತು ಪುರಸಭಾ ಅಧಿಕಾರಿಗಳ‌ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು.

ಈ ಸಂದರ್ಭದಲ್ಲಿ ದಲಿತ ಮುಖಂಡರಾದ ಪವರ್ತಯ್ಯ, ಮಂಜುನಾಥ, ಮಹೇಶ್, ಶಂಭುನಹಳ್ಳಿ‌ಬಾಬು, ಮಹೇಶ್. ಮರಿಯಪ್ಪ, ತೀರ್ಥಕುಮಾರ್, ಕರವೇ ಚಂದ್ರಶೇಖರ, ಎಂ.ಜಿ.ವೆಂಕಟೇಶ್ ಇನ್ನೂ ಮುಂತಾದ ಮುಖಂಡರು ಅಧಿಕಾರಿಗಳನ್ನು ತಡೆದು ನ್ಯಾಯಾಲಯದಲ್ಲಿ ನೀಡಿದ ಆದೇಶ ಪ್ರತಿಯನ್ನು ನೀಡುವಂತೆ ಒತ್ತಾಯಿಸಿದರು.

ಅಲ್ಲದೆ ಪುರಸಭಾ ಅಧಿಕಾರಿಗಳು ಸಂಜೆ ವೇಳೆಯಲ್ಲಿ ಬಂದು ಕೋಳಿ ಅಂಗಡಿಗಳ ಬೀಗ ಮುದ್ರೆ ತೆಗೆಯಲು ಮುಂದಾಗಿರುವ ಹಿಂದೆ ಅನುಮಾನ ಕಾಡುತ್ತಿದೆ. ಕೋಳಿ ಅಂಗಡಿಯವರ ಜೊತೆಗೆ ಪುರಸಭೆ ಒಳ ಒಪ್ಪಂದ ಮಾಡಿಕೊಂಡ ಕಾರಣದಿಂದ ಅವರ ಪರ ವಾಕಲತ್ತು ವಹಿಸಿದ್ದಾರೆ. ನಾಳೆ ಏನಾದರೂ ಮತ್ತೆ ಕೋಳಿ ಅಂಗಡಿಗೆ ಪುರಸಭೆ ಅವಕಾಶ ನೀಡಿದರೆ ಖಂಡಿತ ಉಗ್ರ ಹೋರಾಟ ನಡೆಸಬೇಕಾಗುತ್ತದೆ. ದಲಿತರು ಸುಮ್ಮನಿದ್ದಾರೆ ಎಂದು ಬೇಡದ ಕೆಲಸ ಮಾಡಲು ಬಿಡುವುದಿಲ್ಲ ಎಂದು ಕಿಡಿಕಾರಿದರು.

ಅಂಬೇಡ್ಕರ್ ಒಂದು ಜಾತಿ ಧರ್ಮಕ್ಕೆ ಸೀಮಿತವಾಗಿಲ್ಲ. ಇಂತಹ ವ್ಯಕ್ತಿಯ ಹೆಸರಿನಲ್ಲಿ ಅಂಬೇಡ್ಕರ್ ಭವನದ ಬಳಿ ಅಸ್ವಚ್ಛತೆಗೆ ಕಾರಣವಾಗಿದೆ ಎಂದು ಕಳೆದ ೨೦ ವರ್ಷದಿಂದ ಹೋರಾಟ ಮಾಡಿದ ಫಲದಿಂದ ಸದ್ಯ ಶಾಸಕರು ಮತ್ತು ಪುರಸಭಾ ವತಿಯಿಂದ ನ್ಯಾಯ ನೀಡಿದ್ದಾರೆ. ಇದೇ ಮಳಿಗೆಗೆ ಮಾಂಸ ಮಾರಾಟ ಹೊರತು ಪಡಿಸಿ ಅಗತ್ಯ ವಸ್ತುಗಳ ಮಾರಾಟಕ್ಕೆ ಅವಕಾಶ ನೀಡಲಿ. ತಮ್ಮ ಅಭ್ಯಂತವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಪುರಸಭಾ ಅಧಿಕಾರಿಗಳು ವಾಪಸು ತೆರಳಿದರು. ಈ ವೇಳೆ ಇತರ ದಲಿತ ಮುಖಂಡರು ಹಾಜರಿದ್ದರು.

ಬೇಲೂರು ಪಟ್ಟಣದ ಅಂಬೇಡ್ಕರ್ ಭವನ ಬಳಿಯ ಕೋಳಿ ಅಂಗಡಿ ಪುನಃ ತೆರೆಯಬಾರದು ಎಂದು ದಲಿತ ಮುಖಂಡರು ಪುರಸಭಾ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.