ಶೃಂಗೇರಿಪಟ್ಟಣದ ತಾಲೂಕು ಕಚೇರಿ ಎದುರು ಸೋಮವಾರ ತಾಲೂಕಿನ ರೈತ ಸಂಘ, ಪೀಕಾರ್ಡ್ ಬ್ಯಾಂಕ್, ಜಿಲ್ಲಾ ಸಹಕಾರಿ ಬ್ಯಾಂಕ್ ಸೇರಿದಂತೆ ಅಧ್ಯಕ್ಷ 6 ಸಹಕಾರ ಸಂಘಗಳು, ರೈತರಿಂದ ಫಸಲ್ ಭಿಮ ಯೋಜನೆ ಬೆಳೆ ತಾರತಮ್ಯ ಖಂಡಿಸಿ ಬೃಹತ್ ಪ್ರತಿಭಟನೆ ನಡೆಯಿತು.
- ಶೃಂಗೇರಿಯಲ್ಲಿ ಬೆಳೆವಿಮೆ ತಾರತಮ್ಯ ಖಂಡಿಸಿ ಬೃಹತ್ ಪ್ರತಿಭಟನೆ । ವಿಮೆ ಕಂಪೆನಿ, ಕೃಷಿ, ತೋಟಗಾರಿಕೆ, ಅಧಿಕಾರಿಗಳಿಗೆ ತರಾಟೆ
ಕನ್ನಡಪ್ರಭ ವಾರ್ತೆ, ಶೃಂಗೇರಿಪಟ್ಟಣದ ತಾಲೂಕು ಕಚೇರಿ ಎದುರು ಸೋಮವಾರ ತಾಲೂಕಿನ ರೈತ ಸಂಘ, ಪೀಕಾರ್ಡ್ ಬ್ಯಾಂಕ್, ಜಿಲ್ಲಾ ಸಹಕಾರಿ ಬ್ಯಾಂಕ್ ಸೇರಿದಂತೆ ಅಧ್ಯಕ್ಷ 6 ಸಹಕಾರ ಸಂಘಗಳು, ರೈತರಿಂದ ಫಸಲ್ ಭಿಮ ಯೋಜನೆ ಬೆಳೆ ತಾರತಮ್ಯ ಖಂಡಿಸಿ ಬೃಹತ್ ಪ್ರತಿಭಟನೆ ನಡೆಯಿತು.
ಪ್ರತಿಭಟನಾ ನಿರತರು. ಡಿ.24 ರ ಬುಧವಾರ ಮಧ್ಯಾಹ್ನ 3 ಗಂಟೆಗೆ ಶೃಂಗೇರಿ ತಾಲೂಕು ಕಚೇರಿ ಆವರಣ ದಲ್ಲಿ ಕೃಷಿ, ತೋಟಗಾರಿಕೆ ಸೇರಿದಂತೆ ಹವಾಮಾನ, ಎಲ್ಲಾ ಇಲಾಖೆ ಅಧಿಕಾರಿಗಳು ವಿಮಾ ಕಂಪೆನಿ ಯವರನ್ನು ಕರೆಸಿ ರೈತರಿಗೆ ಉಂಟಾಗಿರುವ ಅನ್ಯಾಯ ಸರಿಪಡಿಸಬೇಕು. ಇಲ್ಲದಿದ್ದರೆ ಸೋಮವಾರ ಜಿಲ್ಲಾಧಿ ಕಾರಿಗಳ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಲಾಯಿತು.ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಪೀಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಚ್.ಕೆ.ದಿನೇಶ್ ಹೆಗ್ಡೆ ರೈತರಿಂದ ವಿಮಾ ಕಂಪನಿಗಳು ಹಣ ಸಂಗ್ರಹಿಸಿ ರೈತರ ಸಂಕಷ್ಟ ಕಾಲದಲ್ಲಿ ನೀಡದೆ ವಂಚನೆ ಮಾಡಿವೆ. ಹಣ ಸಂಗ್ರಹಿಸುವಾಗ ಒಂದು ತರ, ನಂತರದ ವ್ಯವಹಾರವೇ ಬೇರೆ. ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆ ಯಾಗಿದೆ. ವಿಮಾ ಕಂಪೆನಿಯೊಂದಿಗೆ ಅಧಿಕಾರಿಗಳು ಶಾಮಿಲಾಗಿ ಸುಳ್ಳು ವರದಿ ನೀಡಿದ್ದಾರೆ. ಮಳೆ ಏರುಮುಖವಾಗಿದ್ದರೂ ವಿಮೆ ಇಳಿಮುಖವಾಗಿದೆ. ಮಳೆ ಕಡಿಮೆಯಿದ್ದ ಪ್ರದೇಶ ಗುರುತಿಸಿ ಹೆಚ್ಚು ಮಳೆ ಯಾಗಿರುವ ಪ್ರದೇಶ ಕೈಬಿಟ್ಟಿದ್ದಾರೆ. ಮಳೆ ಮಾಪನ ಇಲಾಖೆಯೂ ಶಾಮಿಲಾಗಿದೆ.
ಈ ಭಾಗದಲ್ಲಿ ಮೇ ಯಿಂದ ಅಕ್ಟೋಬರ್ ವರೆಗೂ ನಿರಂತರ ಮಳೆಯಾಗಿದೆ. ಆದರೂ ಕೂಡ ಅತಿವೃಷ್ಠಿ ಪ್ರದೇಶವೆಂದು ಘೋಷಿಸಿಲ್ಲ.ವಿಮೆ ಕಂಪನಿಯವರು ರೈತರ ಕೋಟಿಗಟ್ಟಲೆ ಹಣ ಲೂಟಿ ಮಾಡಿ ವಂಚಿಸಿದೆ. ಜಿಲ್ಲಾದಿಕಾರಿ, ಶಾಸಕರು, ಸಂಸದರು ಕೂಡಲೇ ಇದನ್ನು ಗಂಭೀರವಾಗಿ ಪರಿಗಣಿಸಿ ರೈತರಿಗೆ ಉಂಟಾಗಿರುವ ಅನ್ಯಾಯ ಸರಿಪಡಿಸಬೇಕು ಎಂದು ಆಗ್ರಹಿಸಿದರು.ರೈತ ಸಂಘದ ಮುಖಂಡ ಕಾನೊಳಿ ಚಂದ್ರಶೇಖರ್ ಮಾತನಾಡಿ ಅಧಿಕಾರಿಗಳು ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಅತಿವೃಷ್ಠಿ, ನೆರೆ, ಪ್ರವಾಹ, ಅಡಕೆಗೆ ಹಳದಿ ಎಲೆ ರೋಗ, ಎಲೆ ಚುಕ್ಕಿ ರೋಗ,ಕೊಳೆ ರೋಗ, ಕಾಫಿ, ಕಾಳು ಮೆಣಸಿಗೆ ಕೊಳೆ ರೋಗ, ರೈತರು ಸಂಕಷ್ಟದಲ್ಲಿದ್ದಾರೆ. ಆದರೂ ಅಧಿಕಾರಿಗಳು ರೈತರ ಅಹವಾಲು, ಸಮಸ್ಯೆಗಳಿಗೆ ಸ್ಪಂದಿಸದೇ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಅಧಿಕಾರಿಗಳು ಎಚ್ಚೆತ್ತು ಕೊಳ್ಳದಿದ್ದರೆ ರೈತರು ದಂಗೆಯೇಳಲಿದ್ದಾರೆ.
ರೈತರಿಗೆ ಸರಿಯಾದ ಮಾಹಿತಿ ನೀಡುತ್ತಿಲ್ಲ. ಕೇಳಿದರೆ ಸುಳ್ಳು ಸಬೂಬು ಹೇಳುತ್ತಾರೆ. ಕೃಷಿ ಇಲಾಖೆಯಲ್ಲಿ ಅಧಿಕಾರಿಗಳೇ ಇಲ್ಲ. ಅದನ್ನು ಮುಚ್ಚುವುದೇ ಒಳ್ಳೆಯದು. ಮಳೆ ಮಾಪನಗಳು ಸರಿಯಿಲ್ಲ. ತಾಲೂಕು ಕಚೇರಿ. ಸಹಕಾರ ಸಂಘಗಳು, ಗ್ರಾಪಂ, ತಾಲೂಕು ಕಚೇರಿ ಬಳಿ ಮಳೆಮಾಪನ ಕೇಂದ್ರಗ ಳನ್ನು ಆರಂಬಿಸಬೇಕು ಎಂದರು.ಬೆಟಗೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ.ಎಂ.ರಮೇಶ್ ಭಟ್ ಕೊಡ್ತಲು ಮಾತನಾಡಿ ತಾಲೂಕಿನಲ್ಲಿ ಅತಿಯಾದ ಮಳೆಯಿಂದ ಬೆಳೆಗಳೆಲ್ಲ ನಾಶವಾಗಿವೆ. ಕಾಡು ಪ್ರಾಣಿಗಳ ಹಾವಳಿಯಿಂದ ರೈತರು ತತ್ತರಿಸಿದ್ದಾರೆ. ಅಧಿಕಾರಿಗಳು ರೈತರ ಬದುಕಿನೊಂದಿಗೆ ಚೆಲ್ಲಾಟವಾಡದೇ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದರು.
ಬೆಳಿಗ್ಗೆಯಿಂದ ಪ್ರತಿಭಚನೆ ನಡೆಯುತ್ತಿದ್ದರೂ ಯಾವೊಬ್ಬ ಅಧಿಕಾರಿಗಳು ಪ್ರತಿಭಟನಾ ಸ್ಥಳದಲ್ಲಿ ಇಲ್ಲ. ರೈತರು ಬಿಸಿಲಲ್ಲಿ ಕಳಿತ ಪ್ರತಿಭಟನೆ ನಡೆಸುತ್ತಿದ್ದರೆ, ಅವರ ಅಹವಾಲು ಸಮಸ್ಯೆ ಕೇಳವವರು ಯಾರು, ಕೂಡಲೇ ಅಧಿಕಾರಿಗಳು ಸ್ಥಳಕ್ಕೆ ಬರಬೇಕು ಎಂದು ತರಾಟೆಗೆ ತೆಗೆದುಕೊಂಡರು.ರೈತರ ಬಗ್ಗೆ ಕಾಳಜಿ ಬೇಕು. ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆ ಅಧಿಕಾರಿಗಳು ಸರಿಯಾದ ವರದಿ ನೀಡಿಲ್ಲ. ಹವಮಾನ ಇಲಾಖೆಯವರೂ ಕೂಡ ವರದಿ ಸರಿಯಾಗಿ ನೀಡಿಲ್ಲ. ಈ ಅನ್ಯಾಯ ಸರಿಪಡಿಸುವವರೆಗೂ ಬೆಳೆ ವಿಮೆ ತಾರತಮ್ಯ ಹೋರಾಟ ನಿಲ್ಲುವುದಿಲ್ಲ ಎಂದರು.
ಜಿಲ್ಲಾ ಸಹಕಾರಿ ಬ್ಯಾಂಕ್ ನಿರ್ದೇಶಕ ಡಿ.ಸಿ.ಶಂಕರಪ್ಪ ಮಾತನಾಡಿ ಎಲ್ಲಾ ಇಲಾಖೆ ಅಧಿಕಾರಿಗಳ ಬಗ್ಗೆ ಅನುಮಾನ ವ್ಯಕ್ತವಾಗುತ್ತಿದೆ. ವಿಮಾ ಕಂಪನಿಯೊಂದಿಗೆ ಶಾಮಿಲಾಗಿ ರೈತರಿಗೆ ಕೋಟ್ಯಂತರ ವಂಚನೆ ಮಾಡಿದ್ದಾರೆ. ಅತೀ ಹೆಚ್ಚು ಮಳೆಯಾಗಿದ್ದರೂ ಕಡಿಮೆ ಮಳೆ ಬಿದ್ದ ಪ್ರದೇಶ ಗುರುತಿಸಿ ವರದಿ ಮಾಡಿ ತಪ್ಪು ಮಾಹಿತಿ ನೀಡಿದ್ದಾರೆ.ವಿಧಾನ ಸಭೆ ಅಧಿವೇಶನದಲ್ಲಿ ಶಾಸಕರು ಶೃಂಗೇರಿ ಕ್ಷೇತ್ರದಲ್ಲಿ ಅತಿ ಹೆಚ್ಚು ಮಳೆಯಾಗಿಲ್ಲ. ಬೆಳೆ ಹಾನಿ ಇಲ್ಲ ಎಂದು ಸದನದಲ್ಲಿ ಉತ್ತರ ಕೊಟ್ಟಿದ್ದಾರೆ. ಹಾಗಾದರೆ ಈ ವರದಿ ನೀಡಿದವರು ಯಾರು. ಅತಿವೃಷ್ಠಿ, ಬೆಳೆ ಹಾನಿ ಉಂಟಾಗಿದ್ದು, ಕೇಂದ್ರ, ರಾಜ್ಯ ಅಧ್ಯಯನ ತಂಡ ತಾಲೂಕಿಗೆ ಭೇಟಿ ನೀಡಿದ್ದರೂ ಸುಳ್ಳುವರದಿ ನೀಡಿ ದಿಕ್ಕು ತಪ್ಪಿಸಿದ್ದಾರೆ. ಇಂತಹವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಉಪವಿಭಾಗಧಿಕಾರಿ ಮನವಿ ಸ್ವೀಕರಿಸಿ ಮಾತನಾಡಿ ಶೃಂಗೇರಿ ತಾಲೂಕಿನಲ್ಲಿ ಸಮಸ್ಯೆಯಾಗಿದೆ. ರೈತರಿಗೆ ಅನ್ಯಾಯವಾಗಿದೆ. ಅವರು ಪಾವತಿಸಿದ ವಿಮೆ ಹಣ ನೀಡುವುದು ಸಂಬಧಪಟ್ಟ ಇಲಾಖೆ ಜವಾಬ್ದಾರಿ. ಇದಕ್ಕೆ ವಿಮಾ ಕಂಪೆನಿ ಉತ್ತರಿಸಬೇಕು. ಕೃಷಿ, ತೋಟಗಾರಿಕೆ, ಹವಾಮಾನ ಇಲಾಖೆ ಅಧಿಕಾರಿಗಳು, ಸಹಕಾರ ಸಂಘಗಳ ಪ್ರತಿನಿಧಿಗಳ ಸಭೆ ಸೇರಿ ವಿಮಾ ಕಂಪನಿ ಅಧಿಕಾರಿಗಳನ್ನು ಕರೆಸಬೇಕು. ಚರ್ಚಿಸಿ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಜಿಲ್ಲಾಧಿಕಾರಿ ಗಳೊಂದಿಗೆ ಮಾತನಾಡುವ ಭರವಸೆ ನೀಡಿದರು.ತಹಸೀಲ್ದಾರ್ ಅನುಪ್ ಸಂಜೋಗ್, ಮಾತನಾಡಿದರು.ಎಂ.ಹೆಚ್,ನಟರಾಜ್,ವೆಂಕಟೇಶ್,ಬಿ.ಜಿ.ಪ್ರಸನ್ನ ಮತ್ತಿತರರು ಉಪಸ್ಥಿತರಿದ್ದರು.22 ಶ್ರೀ ಚಿತ್ರ 1-ಶೃಂಗೇರಿ ಪಟ್ಟಣದ ತಾಲೂಕು ಕಚೇರಿ ಎದುರು ಬೆಳೆ ವಿಮೆ ತಾರತಮ್ಯ ಖಂಡಿಸಿ ಬೃಹತ್ ಪ್ರತಿಭಟನೆ ನಡೆಯಿತು.
22 ಶ್ರೀ ಚಿತ್ರ 1-ಜಿಲ್ಲಾ ಉಪವಿಭಾಗಧಿಕಾರಿ ಸುದರ್ಶನ್ ರವರಿಗೆ ಮನವಿ ಸಲ್ಲಿಸಲಾಯಿತು.