ಸಾರಾಂಶ
ಕನ್ನಡ ಪ್ರಭ ವಾರ್ತೆ ಮುಧೋಳ
ರಾಜ್ಯದ ಮತದಾರರಿಗೆ ಸುಳ್ಳು ಭರವಸೆ ನೀಡಿ, ಮೋಸ ಮಾಡಿ ಮತಪಡೆದು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎಂಟು ತಿಂಗಳಾಗಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಬರಗಾಲ ಆರಂಭವಾಗಿದೆ, ಬರಕ್ಕೆ ರೈತರು ತತ್ತರಿಸಿ ಹೋಗಿದ್ದಾರೆ. ಸೂಕ್ತ ಪರಿಹಾರ ನೀಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಮಾಜಿ ಡಿಸಿಎಂ ಗೋವಿಂದ ಕಾರಜೋಳ ದೂರಿದರು.ಬುಧವಾರ ಸ್ಥಳೀಯ ಗೃಹ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇವು ಬ್ಯಾಂಕ್, ಗೋಶಾಲೆ ಈವರೆಗೂ ತೆರೆದಿಲ್ಲ. ಅನ್ನಕ್ಕಾಗಿ ಉತ್ತರ ಕರ್ನಾಟಕದ ಜನ ಗುಳೆ ಹೋಗುವುದು ತಪ್ಪಿಲ್ಲ. ಹೊಸ ಕಾಮಗಾರಿಗಳಂತೂ ಆರಂಭವಾಗಿಲ್ಲ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅನ್ನಕ್ಕಾಗಿ ಗುಳೆ ಹೋಗುವುದು ಸರ್ಕಾರದ ವೈಫಲ್ಯಕ್ಕೆ ಸಾಕ್ಷಿ. ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಸಾಲಮನ್ನಾ ಮಾಡಿ, ಪರಿಹಾರ ನೀಡಲಿ ಇಲ್ಲವೆ ಮುಖ್ಯಮಂತ್ರಿಗಳು ರಾಜ್ಯದ ಜನತೆಯಲ್ಲಿ ಕ್ಷಮೆ ಕೇಳಲಿ ಎಂದು ಸವಾಲು ಹಾಕಿದರು.ಬಿಜೆಪಿ ಸರ್ಕಾರದ ಅವಧಿಯಲ್ಲಿನ ಕಾಮಗಾರಿಗಳನ್ನು ಮತ್ತೊಮ್ಮೆ ಉದ್ಘಾಟಿಸುವುದು, ಅಡಿಗಲ್ಲು ಮಾಡುವುದು ನಾಚಿಗೇಡಿನ ಸಂಗತಿ. ಕೂಡಲೇ ಬರ ಪರಿಹಾರ ನೀಡಬೇಕು. ಜನ ಜಾನುವಾರುಗಳಿಗೆ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು, ಅವಶ್ಯಕತೆ ಇದ್ದಲ್ಲಿ ಮೇವು ಬ್ಯಾಂಕ್ ಮತ್ತು ಗೋಶಾಲೆ ತೆರೆಯಬೇಕು, ಅಭಿವೃದ್ಧಿ ಕಾಮಗಾರಿ ಆರಂಭಿಸಿ, ಜನತೆಗೆ ಉದ್ಯೋಗ ನೀಡಬೇಕು, ಜನರು ಗುಳೆ ಹೋಗದಂತೆ ನೋಡಿಕೊಳ್ಳಬೇಕು, ಸಮರ್ಪಕ ವಿದ್ಯುತ್ ಪೂರೈಕೆ ಮಾಡಬೇಕು. ಅಂದಾಗ ನುಡಿದಂತೆ ನಡೆದ ಸರ್ಕಾರವಾಗುತ್ತದೆ. ಇಲ್ಲದಿದ್ದರೆ ವಚನ ಭ್ರಷ್ಟ ಸರ್ಕಾರವಾದುತ್ತದೆ ಎಂದು ಗೋವಿಂದ ಕಾರಜೋಳ ಟೀಕಿಸಿದರು.
ಸಮಚಿತ್ತ ಕಳೆದಕೊಂಡ ವೀರಪ್ಪ ಮೊಯ್ಲಿ:ಅಯೋಧ್ಯೆಯಲ್ಲಿ ಶ್ರೀ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಜನಮನದಲ್ಲಿ ಸೌಹಾರ್ದತೆ ಮತ್ತು ಸಮಭಾವ ಮೂಡಿಸಿದ ಜನನಾಯಕ ಪ್ರಧಾನಿ ನರೇಂದ್ರ ಮೋದಿ ಅವರಂಥ ಮಹಾನ್ ನಾಯಕನನ್ನು ರಾಜಕಾರಣಕ್ಕಾಗಿ ಕುಚೋದ್ಯ ಮಾಡುವುದು ಸರಿಯಲ್ಲ. ಕರ್ನಾಟಕದ ಹಿರಿಯ ರಾಜಕಾರಣಿಯಾದ ಮಾಜಿ ಸಿ.ಎಂ. ವೀರಪ್ಪ ಮೊಯ್ಲಿ ಶ್ರೇಷ್ಠ ಸಾಹಿತಿಯೂ ಹೌದು. ಇಂತಹ ವ್ಯಕ್ತಿ ರಾಜಕೀಯವಾಗಿ ಮೇಲೆ ಬರಲು ಕೀಳುಮಟ್ಟದ ಹೇಳಿಕೆ ನೀಡುವುದು ನಾಡಿನ ದುರಂತ ಎಂದರು.
ತಮ್ಮ ನಾಯಕರ ಓಲೈಸಲು ಮೋದಿಯವರ ವೈಯಕ್ತಿಕ ನಡೆ ನುಡಿಯಲ್ಲಿ ಹುಳುಕು ಹುಡುಕುವ ಮಟ್ಟಕ್ಕೆ ಇಳಿಯಬಾರದಿತ್ತು. ಮೊಸರಲ್ಲಿ ಕಲ್ಲು ಹುಡುಕುವ ಕೆಲಸವನ್ನು ಮೊಯ್ಲಿಯಂತಹ ವಯೋವೃದ್ಧ ರಾಜಕಾರಣಿಯಲ್ಲಿ ಕಂಡು ನಮಗೆ ದಿಗ್ಭ್ರಮೆಯಾಗಿದೆ ಎಂದು ಕಾರಜೋಳ ಹೇಳಿದರು. ಈ ವೇಳೆ ಬಿಜೆಪಿ ಮುಖಂಡರಾದ ಕೆ.ಆರ್. ಮಾಚಪ್ಪನವರ, ಹನುಮಂತ ತುಳಸಿಗೇರಿ, ಸೋನಾಪ್ಪಿ ಕುಲಕರ್ಣಿ, ವೆಂಕಣ್ಣ ಕಾತರಕಿ ಇತರರು ಉಪಸ್ಥಿತರಿದ್ದರು.