ಸಾರಾಂಶ
ಕನ್ನಡಪ್ರಭ ವಾರ್ತೆ ಗುಳೇದಗುಡ್ಡ
ಕರ್ನಾಟಕ ರಾಜ್ಯೋತ್ಸವ ಸಮಾರಂಭವನ್ನು ಪ್ರತಿವರ್ಷದಂತೆ ಈ ವರ್ಷವೂ ನ.1ರಂದು ತಾಲೂಕಿನ ಗುಳೇದಗುಡ್ಡ ಪಟ್ಟಣದಲ್ಲಿ ಆಚರಿಸಲಾಗುವುದು ಎಂದು ತಹಸೀಲ್ದಾರ್ ಮಂಗಳಾ ಎಂ. ಹೇಳಿದರು.ಶುಕ್ರವಾರ ಪಟ್ಟಣದ ತಾಲೂಕು ಆಡಳಿತ ತಹಸೀಲ್ದಾರ್ ಕಚೇರಿ ಸಭಾಭವನದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ನ.1ರಂದು ದೀಪಾವಳಿ ಅಮವಾಸ್ಯೆ ಇದೆ. ಹೀಗಾಗಿ ಹಬ್ಬದ ವಾತಾವರಣದಲ್ಲಿಯೂ ರಾಜ್ಯೋತ್ಸವ ಸಮಾರಂಭ ಆಚರಿಸಲಾಗುತ್ತಿದೆ. ಬೆಳಗ್ಗೆ 8-30ರಿಂದ ತಾಲೂಕು ಆಡಳಿತ ಕಚೇರಿಯಲ್ಲಿ ನಾಡದೇವಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಗುವುದು. ನಂತರ ನಾಡದೇವಿ ಭಾವಚಿತ್ರದ ಮೆರವಣಿಗೆಯು ತಹಸೀಲ್ದಾರ್ ಕಚೇರಿಯಿಂದ ಬೆಳಗ್ಗೆ 9 ಗಂಟೆಗೆ ಹೊರಡುವುದು. ಮೆರವಣಿಗೆಯನ್ನು ಶಾಸಕ ಭೀಮಸೇನ ಚಿಮ್ಮನಕಟ್ಟಿ ಉದ್ಘಾಟಿಸುವರು. ಗಚ್ಚಿನಕಟ್ಟಿ, ಚೌಬಜಾರ್, ಪುರಸಭೆ, ನಾಡಕಚೇರಿ ಮಾರ್ಗವಾಗಿ ಬಂದು ಸರಸ್ವತಿ ವಿದ್ಯಾಮಂದಿರದ ಸಭಾ ಮಂಟಪಕ್ಕೆ ಬಂದು ಮೆರವಣಿಗೆ ಮುಕ್ತಾಯವಾಗುತ್ತದೆ.
ಮೆರವಣಿಗೆಯಲ್ಲಿ ವಿವಿಧ ಕಲಾ ತಂಡಗಳು ಭಾಗವಹಿಸಲಿದ್ದು, ಕನ್ನಡ ಸಾಹಿತ್ಯ ಪರಿಷತ್, ಕನ್ನಡ ಪರ ಸಂಘಟನೆಗಳ ಪದಧಿಕಾರಿಗಳು, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು, ವಿವಿಧ ಇಲಾಖೆಗಳ ಮುಖ್ಯಸ್ಥರು, ಸಿಬ್ಬಂದಿ ಪಾಲ್ಗೊಂಡು ಮೆರವಣಗೆ ಯಶಸ್ವಿಗೊಳಿಸಲು ತಹಸೀಲ್ದಾರರು ಸೂಚಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ನಾಡಗೀತೆ, ಕನ್ನಡ ನಾಡು ನುಡಿಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ತಾಲೂಕಿನ ಸಾಧಕರಿಗೆ ಸನ್ಮಾನ, ಉಪನ್ಯಾಸ ಜರುಗುವುದು ಎಂದರು.ಪೂರ್ವಭಾವಿ ಸಭೆಯಲ್ಲಿ ವಿಶೇಷ ತಹಸೀಲ್ದಾರ್ ಮಹೇಶ ಗಸ್ತಿ, ಉಪತಹಸೀಲ್ದಾರ್ ಜಿ.ವಿ.ರಜಪೂತ್, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಕೋಶಾಧ್ಯಕ್ಷ ಡಾ.ಸಿ.ಎಂ.ಜೋಶಿ, ತಾಲೂಕು ಅಧ್ಯಕ್ಷ ಡಾ. ಎಚ್.ಎಸ್.ಘಂಟಿ, ಕರವೇ ಪದಾಧಿಕಾರಿ ಶ್ರೀಕಾಂತ ಹುನಗುಂದ, ಪಿಡಬ್ಲ್ಯೂಡಿ ಇಲಾಖೆ ಅಭಿಯಂತರ ಎ.ಕೆ.ಮಕಾಂದಾರ, ತಾಪಂ ಇಲಾಖೆ ಎಸ್.ಎಸ್.ಅಂಗಡಿ, ಎಸ್.ಐ.ಹಿರೇಮಠ, ಎಸ್.ಬಿ.ಅತ್ತಾರ, ಡಿ.ಎಸ್.ನೀಲೂಗಲ್, ವಿಠ್ಠಲ ಬದಿ, ಕೆ.ಬಿ.ಬಾಫ್ರಿ ಸೇರಿದಂತೆ ಇನ್ನೂ ಅನೇಕರು ಇದ್ದರು.