ವೇತನ ಪಾವತಿ ವಿಳಂಬ: ಅರಣ್ಯ ಇಲಾಖೆ ದಿನಗೂಲಿಗಳಿಂದ ಅಹೋರಾತ್ರಿ ಧರಣಿ

| Published : Jan 03 2024, 01:45 AM IST

ವೇತನ ಪಾವತಿ ವಿಳಂಬ: ಅರಣ್ಯ ಇಲಾಖೆ ದಿನಗೂಲಿಗಳಿಂದ ಅಹೋರಾತ್ರಿ ಧರಣಿ
Share this Article
  • FB
  • TW
  • Linkdin
  • Email

ಸಾರಾಂಶ

ಆಲಮಟ್ಟಿ: ಆಲಮಟ್ಟಿಯ ವಿವಿಧ ಉದ್ಯಾನಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅರಣ್ಯ ಇಲಾಖೆ ಕಾರ್ಮಿಕರಿಗೆ ಆರು ತಿಂಗಳಿಂದ ವೇತನ ಪಾವತಿ ಮಾಡದಿರುವುದನ್ನು ಖಂಡಿಸಿ ಅರಣ್ಯ ಇಲಾಖೆ ದಿನಗೂಲಿಗಳು ಮಂಗಳವಾರ ಪ್ರತಿಭಟನೆ ನಡೆಸಿದರು. ರಾಕ್ ಉದ್ಯಾನದಿಂದ ಮುಖ್ಯ ಎಂಜಿನಿಯರ್ ಕಚೇರಿಯವರೆಗೆ 100ಕ್ಕೂ ಹೆಚ್ಚು ಕಾರ್ಮಿಕರು ಮೆರವಣಿಗೆ ನಡೆಸಿ ವೇತನ ವಿಳಂಬ ಧೋರಣೆ ಖಂಡಿಸಿದರು.

ಕನ್ನಡಪ್ರಭ ವಾರ್ತೆ ಆಲಮಟ್ಟಿ

ಆಲಮಟ್ಟಿಯ ವಿವಿಧ ಉದ್ಯಾನಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅರಣ್ಯ ಕಾರ್ಮಿಕರಿಗೆ ಆರು ತಿಂಗಳಿಂದ ವೇತನ ಪಾವತಿ ಮಾಡದಿರುವುದನ್ನು ಖಂಡಿಸಿ ಅರಣ್ಯ ಇಲಾಖೆ ದಿನಗೂಲಿಗಳು ಮಂಗಳವಾರ ಪ್ರತಿಭಟನೆ ನಡೆಸಿದರು.

ರಾಕ್ ಉದ್ಯಾನದಿಂದ ಮುಖ್ಯ ಎಂಜಿನಿಯರ್ ಕಚೇರಿಯವರೆಗೆ 100ಕ್ಕೂ ಹೆಚ್ಚು ಕಾರ್ಮಿಕರು ಮೆರವಣಿಗೆ ನಡೆಸಿ ವೇತನ ವಿಳಂಬ ಧೋರಣೆ ಖಂಡಿಸಿದರು.

ಮುಖ್ಯ ಎಂಜಿನಿಯರ್ ಕಚೇರಿ ಎದುರು ಸಂಜೆಯವರೆಗೂ ಪ್ರತಿಭಟನೆ ನಡೆಸಿದ ನೂರಾರು ಕಾರ್ಮಿಕರು ಆರು ತಿಂಗಳಿಂದ ವೇತನ ನೀಡಿಲ್ಲ, ಇದರಿಂದ ನಮ್ಮ ನಿತ್ಯ ಜೀವನ ಸಾಗಿಸುವುದು ದುಸ್ತರವಾಗಿದೆ ಎಂದು ನೊಂದು ನುಡಿದರು.

ಪ್ರತಿಭಟನೆ ಮಾಡಿದಾಗಷ್ಟೇ ನಮಗೆ ವೇತನವಾಗುತ್ತದೆ, ಇಲ್ಲದಿದ್ದರೆ ನಮ್ಮ ಗೋಳು ಕೇಳುವವರೂ ಯಾರೂ ಇಲ್ಲ. 20 ವರ್ಷಗಳಿಂದ ಕನಿಷ್ಠ ಕೂಲಿಗಾಗಿ ದುಡಿಯುತ್ತಿದ್ದೇವೆ, ಉದ್ಯಾನವನ ನಿರ್ಮಾಣ, ನಿರ್ವಹಣೆಯಲ್ಲಿ ನಮ್ಮ ಪಾತ್ರ ಅಧಿಕ, ಇಂತಹ ಪರಿಸ್ಥಿತಿಯಲ್ಲಿ ಆರು ತಿಂಗಳಿಂದ ವೇತನ ಆಗಿಲ್ಲ. ನಮ್ಮ ಜೀವನ ನಿರ್ವಹಣೆ ಹೇಗೆ? ಎಂದು ಪ್ರಶ್ನಿಸಿದರು.

ಬಾರದ ಮುಖ್ಯ ಎಂಜಿನಿಯರ್:

ಮುಖ್ಯ ಎಂಜಿನಿಯರ್ ಕಚೇರಿಯ ಎದುರು ಸಂಜೆಯವರೆಗೂ ಕುಳಿತರೂ ಆಲಮಟ್ಟಿಯಲ್ಲಿದ್ದರೂ ಮುಖ್ಯ ಎಂಜಿನಿಯರ್ ಸೇರಿದಂತೆ ಯಾವೊಬ್ಬ ಕೆಬಿಜೆಎನ್ ಎಲ್ ಅಧಿಕಾರಿಗಳು ಇವರ ಸಮಸ್ಯೆ ಆಲಿಸಲಿಲ್ಲ.

ಅಧಿಕಾರಿಗಳ ನಿರ್ಲಕ್ಷ್ಯ, ಭರವಸೆ ದೊರೆಯದ್ದರಿಂದ ರೊಚ್ಚಿಗೆದ್ದ ಕಾರ್ಮಿಕರು ಸಂಜೆಯಿಂದ ಅಲ್ಲಿಯೇ ಟೆಂಟ್ ಹಾಕಿ ಅಹೋರಾತ್ರಿ ಧರಣಿ ಸತ್ಯಾಗ್ರಹ ಆರಂಭಿಸಿದರು.

ಧರಣಿಯಲ್ಲಿ ಅರಣ್ಯ ದಿನಗೂಲಿ ಕಾರ್ಮಿಕರು ಮಲ್ಲಿಕಾರ್ಜುನ ಎಚ್.ಟಿ, ಲಕ್ಷ್ಮಣ ಬ್ಯಾಲ್ಯಾಳ, ಯಮನಪ್ಪ ತುಬಾಕಿ, ದ್ಯಾಮಣ್ಣ ಬಿರಾದಾರ, ಮಹೇಶ ತೆಲಗಿ, ಸತೀಶ ಮುಕರ್ತಿಹಾಳ, ರಮೇಶ ಅಸ್ಕಿ, ನಿಜವ್ವ ಗಾಂಜಿ, ಯಲ್ಲವ್ವ ಗುರುವರ ಮಕಬೂಲ್ ಬಾಗವಾನ, ರಫೀಕ್ ಅಥಣಿ, ಮಹೇಶ ತೆಲಗಿ, ಸುನಿತಾ ಚವ್ಹಾಣ ಇತರರು ಇದ್ದರು.

ಉದ್ಯಾನ ಬಂದ್: ದಿನಗೂಲಿ ಕಾರ್ಮಿಕರ ಪ್ರತಿಭಟನೆಯ ಕಾರಣ, ಆಲಮಟ್ಟಿಯ ರಾಕ್ ಉದ್ಯಾನ, ಕೃಷ್ಣಾ ಉದ್ಯಾನ, ಲವಕುಶ ಉದ್ಯಾನ ಸಂಪೂರ್ಣ ಬಂದ್ ಮಾಡಲಾಗಿತ್ತು. ಉದ್ಯಾನ ನಿರ್ವಹಣೆಯಿಲ್ಲದದೇ ರಸ್ತೆಯುದ್ದಕ್ಕೂ ಉದುರಿದ ಎಲೆಗಳ ಕಸದ ರಾಶಿಯೇ ಬಿದ್ದಿತ್ತು. ಅದನ್ನು ತೆಗೆಯುವವರೂ ಯಾರೂ ಇರಲಿಲ್ಲ.