ಸಾರಾಂಶ
ಉಡುಪಿ ಜಿಲ್ಲೆಯಲ್ಲಿರುವ ನೇಕಾರರ ಪ್ರಾಥಮಿಕ ಸಹಕಾರ ಸಂಘಗಳಲ್ಲಿ ದುಡಿಯುತ್ತಿರುವ ನೇಕಾರರಿಗೆ ಕೇಂದ್ರ ಸರ್ಕಾರದಿಂದ ಲಭ್ಯ ಇರುವ ಎಲ್ಲ ಯೋಜನೆಗಳ ಸಂಪೂರ್ಣ ನೆರವನ್ನು ನೀಡಬೇಕು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅಧಿಕಾರಿಗಳಿಗೆ ಸೂಚಿಸಿದರು.
ಕನ್ನಡಪ್ರಭ ವಾರ್ತೆ ಉಡುಪಿ
ಉಡುಪಿ ಜಿಲ್ಲೆಯಲ್ಲಿರುವ ನೇಕಾರರ ಪ್ರಾಥಮಿಕ ಸಹಕಾರ ಸಂಘಗಳಲ್ಲಿ ದುಡಿಯುತ್ತಿರುವ ನೇಕಾರರಿಗೆ ಕೇಂದ್ರ ಸರ್ಕಾರದಿಂದ ಲಭ್ಯ ಇರುವ ಎಲ್ಲ ಯೋಜನೆಗಳ ಸಂಪೂರ್ಣ ನೆರವನ್ನು ನೀಡಬೇಕು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅಧಿಕಾರಿಗಳಿಗೆ ಸೂಚಿಸಿದರು.ಅವರು ಸೋಮವಾರ ಸಂಸದರ ಕಚೇರಿಯಲ್ಲಿ ಜರುಗಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.ಕೇಂದ್ರ ಸರ್ಕಾರದಿಂದ ನೇಕಾರರಿಗೆ ಸಾರಿಗೆ ಸಬ್ಸಿಡಿ (ಎನ್.ಎಚ್.ಡಿ.ಸಿ), ನೂಲು ಖರೀದಿಯ ಮೇಲೆ ಶೇ.15ರಷ್ಟು ವಿನಾಯಿತಿ, ನೇಕಾರರ ವರ್ಕ್ ಶೆಡ್ ನಿರ್ಮಾಣಕ್ಕೆ ತಲಾ 1.20 ಲಕ್ಷ ರು. ಸಬ್ಸಿಡಿ, ಸೋಲಾರ್ ಲೈಟ್ ನೆರವು, ಕೈಮಗ್ಗ ಕಾರ್ಮಿಕರಿಗೆ ರಾಷ್ಟ್ರೀಕೃತ ಬ್ಯಾಂಕ್‌ಗಳ ಮೂಲಕ ಮುದ್ರಾ ಸಾಲ ನೆರವು, ಕೈಮಗ್ಗ ಸಲಕರಣೆಗಳ ಖರೀದಿಗೆ ಆರ್ಥಿಕ ನೆರವು ಹಾಗೂ ಸಮರ್ಥ್ ಯೋಜನೆಯ ಮೂಲಕ ಹೊಸ ಉತ್ಸಾಹಿ ಅಭ್ಯರ್ಥಿಗಳಿಗೆ ನುರಿತ ಕೈಮಗ್ಗ ತರಬೇತುದಾರರಿಂದ ತರಬೇತಿ ಇತ್ಯಾದಿ ಯೋಜನೆಗಳ ಬಗ್ಗೆ ಅಧಿಕಾರಿಗಳ ಜೊತೆ ಚರ್ಚಿಸಿ ಮಾಹಿತಿ ಪಡೆದುಕೊಂಡ ಸಂಸದರು, ಆರ್ಥಿಕವಾಗಿ ಹಿಂದುಳಿದ ನೇಕಾರರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಸಿುಗುವ ಸವಲತ್ತುಗಳನ್ನು ಇಲಾಖೆಯು ಜವಾಬ್ದಾರಿಯಿಂದ ಫಲಾನುಭವಿಗಳಿಗೆ ತಲುಪಿಸಬೇಕು ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.
ಜಿಲ್ಲೆಯಲ್ಲಿ ಕೈಮಗ್ಗ ಉತ್ಪಾದನೆ ಮಾಡುವ ತರಬೇತಿ ಕೇಂದ್ರಕ್ಕೆ ಸೆಪ್ಟೆಂಬರ್ ಅಂತ್ಯದೊಳಗೆ ಭೇಟಿ ನೀಡಿ ಪರಿಶೀಲಿಸುವುದಾಗಿ ಹಾಗೂ ಕೇಂದ್ರ ಸರ್ಕಾರದ ನೆರವಿನಿಂದ ನೇಕಾರರಿಗೆ ಅನುಕೂಲವಾಗುವಂತೆ ಅಗತ್ಯ ಪ್ರಸ್ತಾವನೆಯನ್ನು ಸಲ್ಲಿಸುವಂತೆ ಸಂಸದ ಕೋಟ ಅಧಿಕಾರಿಗಳಿಗೆ ಸೂಚನೆ ನೀಡಿದರು.ಉಡುಪಿ ಜಿಲ್ಲೆಯ ಕೈಮಗ್ಗ ಹಾಗೂ ಜವಳಿ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ್, ಜಿಲ್ಲಾ ಕೌಲಾಭಿವೃದ್ಧಿ ಇಲಾಖೆಯ ಅಧಿಕಾರಿ ಅರುಣ್ ಕುಮಾರ್ ಹಾಗೂ ಸಿಬ್ಬಂದಿ ವರ್ಗ ಹಾಜರಿದ್ದರು.