ಕನ್ನಡಪ್ರಭ ವಾರ್ತೆ ಶಿವಮೊಗ್ಗ
ನೀಟ್ ಪರೀಕ್ಷೆಯಲ್ಲಿನ ಅಕ್ರಮಕ್ಕೆ ನೈತಿಕ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡುವಂತೆ ಒತ್ತಾಯಿಸಿ ಎನ್‌ಎಸ್‌ಯುಐ ಜಿಲ್ಲಾ ಘಟಕದ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು, ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಬುಧವಾರ ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.ನೀಟ್ ರದ್ದುಗೊಳಿಸಿ, ಸಿಇಟಿ ಜಾರಿಗೆ ತನ್ನಿ ಎನ್ನುವ ಘೋಷಣೆಯೊಂದಿಗೆ ನಗರದ ಸೈನ್ಸ್ ಮೈದಾನ ಹಾಗೂ ಬಸ್ ನಿಲ್ದಾಣದಿಂದ ಗೋಪಿ ವೃತ್ತದವರೆಗೂ ಎರಡು ಪ್ರತ್ಯೇಕ ಮೆರವಣಿಗೆಯ ಮೂಲಕ ಬಂದ ವಿದ್ಯಾರ್ಥಿಗಳು, ವಿದ್ಯಾರ್ಥಿಗಳ ಭವಿಷ್ಯದ ಜತೆಗೆ ಚೆಲ್ಲಾಟವಾಡುವುದನ್ನು ನಿಲ್ಲಿಸಿ ಎಂದು ಸರ್ಕಾರಗಳ ವಿರುದ್ಧ ಗುಡುಗಿದರು.
ಪ್ರತಿಭಟನಾ ಮೆರವಣಿಗೆ ನಂತರ ಗೋಪಿ ವೃತ್ತದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಬಹಿರಂಗ ಸಭೆ ನಡೆಯಿತು. ಈ ಸಂದರ್ಭ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎನ್.ರಮೇಶ್ ಮಾತನಾಡಿ, ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಈ 12 ವರ್ಷದಲ್ಲಿ 78 ಬಾರಿ ನೀಟ್ ಪ್ರಶ್ನೆ ಪತ್ರಿಕೆ ಲೀಕ್ ಆಗಿವೆ. ಸುಸೂತ್ರವಾಗಿ ಪರೀಕ್ಷೆ ನಡೆಸಲಾಗದ ಇಂತಹ ಸರ್ಕಾರ ಹೇಗೆ ದೇಶದ ಜನತೆಗೆ ಒಳ್ಳೆಯ ಆಡಳಿತ ಕೊಡಲು ಸಾಧ್ಯವೇ ಎಂದು ಪ್ರಶ್ನಿಸಿದರು.ವಿಧಾನ ಪರಿಷತ್ ಸದಸ್ಯೆ ಬಲ್ಕೀಶ್ ಬಾನು ಮಾತನಾಡಿ, ಕೇಂದ್ರ ಸರ್ಕಾರ ವು ದೇಶದ ಬಡ ಮತ್ತು ಮಧ್ಯಮ ವರ್ಗದ ಮಕ್ಕಳ ಜತೆಗೆ ಚೆಲ್ಲಾಟವಾಡುತ್ತಿದೆ. ಕೇಂದ್ರದ ವೈಫಲ್ಯಕ್ಕೆ ಈಗ 13 ಮಕ್ಕಳು ಬಲಿಯಾಗಿದ್ದಾರೆ. ಪ್ರಧಾನಿ ಮತ್ತು ಕೇಂದ್ರ ಶಿಕ್ಷಣ ಸಚಿವರು ಮಕ್ಕಳನ್ನು ಕುಟುಂಬದವರಿಗೆ ಸಾಂತ್ವಾನ ಹೇಳುವ ಕೆಲಸ ಮಾಡಿಲ್ಲ.ಅಷ್ಟು ದುರಂಹಕಾರ ಕೇಂದ್ರದ ಬಿಜೆಪಿ ಸರ್ಕಾರಕ್ಕೆ ಬಂದಿದೆ ಎಂದು ವಾಗ್ದಾಳಿ ನಡೆಸಿದರು.
ಮಹಾ ನಗರ ಪಾಲಿಕೆ ಮಾಜಿ ಸದಸ್ಯ ಎಚ್.ಸಿ.ಯೋಗೇಶ್ ಮಾತನಾಡಿ, ಗಣಪತಿ, ಸರಸ್ವತಿ, ಲಕ್ಷ್ಮೀ, ಮಾರಮ್ಮ ಅಂತೇಳಿ ಇದ್ದ ಬದ್ದ ದೇವರಿಗೆ ಮೊರೆ ಹೋಗಿ ಪರೀಕ್ಷೆ ಬರೆಯುವ ನಮ್ಮ ಮಕ್ಕಳಿಗೆ ಒಂದಕ್ಕಿಂತ ಎರಡು ಬಾರಿ ಪರೀಕ್ಷೆ ನಡೆಸುವ ದುಸ್ಥಿತಿಯನ್ನು ಕೇಂದ್ರದ ಬಿಜೆಪಿ ಸರ್ಕಾರ ತಂದೊಡ್ಡಿದೆ. ಒಳ್ಳೆಯ ರೀತಿಯಲ್ಲಿ ಪರೀಕ್ಷೆ ನಡೆಸುವ ಯೋಗ್ಯತೆಯೂ ಈ ಸರ್ಕಾರಕ್ಕೆ ಇಲ್ಲ ಎಂದು ಕಿಡಿಕಾರಿದರು.
ಮಾಜಿ ಸಂಸದ ಆಯನೂರು ಮಂಜುನಾಥ್ ಮಾತನಾಡಿ, ಪರೀಕ್ಷಾ ಕಾ ಪೇ ಚರ್ಚೆ ನಡೆಸುವ ಈ ದೇಶದ ಪ್ರಧಾನಿಗಳಿಗೆ, ಒಳ್ಳೆಯ ರೀತಿಯಲ್ಲಿ ಪರೀಕ್ಷೆ ಹೇಗೆ ನಡೆಸಬೇಕೆನ್ನುವುದೆ ಗೊತ್ತಿಲ್ಲ ಎಂದು ಲೇವಡಿ ಮಾಡಿದರು.
ಸೂಡಾ ಅಧ್ಯಕ್ಷ ಎಚ್.ಎಸ್. ಸುಂದರೇಶ್ ಮಾತನಾಡಿ, ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ನೀಟ್ ಮಾತ್ರವಲ್ಲ, ಎಲ್ಲಾ ರೀತಿಯ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಲೀಕ್ ಆಗಿವೆ. ಧರ್ಮೇಂದ್ರ ಪ್ರಧಾನ್ ಅತ್ಯಂತ ಭ್ರಷ್ಟ ಮಂತ್ರಿ ಎನ್ನುವ ಕುಖ್ಯಾತಿ ಹೊಂದಿದ್ದಾರೆ. ಇವರನ್ನು ಸಚಿವ ಸ್ಥಾನದಿಂದ ವಜಾ ಗೊಳಿಸದ ಪ್ರಧಾನಿಗಳು, ಈ ದೇಶದ ಯುವ ಜನರಿಗೆ ಮೋಸ ಮಾಡುತ್ತಿದ್ದಾರೆಂದು ವಾಗ್ದಾಳಿ ನಡೆಸಿದರು.ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಆರ್. ಪ್ರಸನ್ನ ಕುಮಾರ್, ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷ ವಿಜಯ್, ಮಾಜಿ ಅಧ್ಯಕ್ಷ ಇಸ್ಮಾಯಿಲ್ ಖಾನ್, ರಾಜ್ಯ ಜವಳಿ ಕೈಮಗ್ಗ ನಿಗಮದ ಅಧ್ಯಕ್ಷ ಚೇತನ್ ಗೌಡ, ಮುಖಂಡರಾದ ಶ್ರೀನಿವಾಸ್ ಕರಿಯಣ್ಣ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ವೇತಾ ಬಂಡಿ, ರಾಜ್ಯ ಭೋವಿ ಅಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ಎಸ್. ರವಿಕುಮಾರ್, ಕಲಗೋಡು ರತ್ನಾಕರ್ ಮಾತನಾಡಿದರು.
ಈ ವೇಳೆ ಮುಖಂಡರಾದ ಜಿಲ್ಲಾ ಕಾಂಗ್ರೆಸ್ ವಕ್ತಾರರಾದ ಜಿ.ಡಿ.ಮಂಜುನಾಥ್ , ರಮೇಶ್ ಶಂಕರಘಟ್ಟ, ಉಪಾಧ್ಯಕ್ಷ ಎಸ್.ಟಿ. ಚಂದ್ರಶೇಖರ್ ಮತ್ತಿತರರು ಇದ್ದರು.