ಕನ್ನಡಪ್ರಭ ವಾರ್ತೆ ವಿಜಯಪುರ

ಅಕ್ಷರ ದಾಸೋಹ ಯೋಜನೆಯಡಿ ಶಾಲೆಗಳಲ್ಲಿ ಮಧ್ಯಾಹ್ನ ಬಿಸಿ ಊಟಕ್ಕೆ ಮಕ್ಕಳಿಗೆ ಎಣ್ಣೆ, ತೊಗರಿ ಬೇಳೆ ವಿತರಿಸಬೇಕು. ಮೊಟ್ಟೆಗಳ ಖರೀದಿ ಮೊತ್ತ ಹೆಚ್ಚಳವಾಗಿದ್ದು, ದರ ಮರು ನಿಗದಿಪಡಿಸಬೇಕೆಂದು ಆಗ್ರಹಿಸಿ ಜಿಲ್ಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ಜಿಲ್ಲಾ ಪಂಚಾಯತಿ ಸಿಇಓ ರಿಷಿ ಆನಂದ ಅವರಿಗೆ ಮನವಿ ಸಲ್ಲಿಸಿದರು.

ಜಿಲ್ಲಾ ಶಿಕ್ಷಕರ ಸಂಘದ ಅಧ್ಯಕ್ಷ ಅರ್ಜುನ ಲಮಾಣಿ ಮಾತನಾಡಿ, ಶೈಕ್ಷಣಿಕ ವರ್ಷ ಆರಂಭವಾಗಿ ಜೂನ್‌ ತಿಂಗಳು ಮುಗಿಯುತ್ತಾ ಬಂದರೂ ಶಾಲೆಗಳಿಗೆ ಬೇಳೆ ಹಾಗೂ ಎಣ್ಣೆ ಪೂರೈಕೆಯಾಗಿಲ್ಲ. ಮುಖ್ಯಶಿಕ್ಷಕರು ಸ್ವಂತ ಹಣದಲ್ಲಿ ಬೇಳೆ ಹಾಗೂ ಎಣ್ಣೆಯನ್ನು ಅಂಗಡಿಗಳಲ್ಲಿ ಖರೀದಿಸುತ್ತಿದ್ದಾರೆ. ಕೇಜಿ ಎಣ್ಣೆಗೆ ₹180 ₹ ಕೇಜಿ ಬೇಳೆಗೆ ₹120ರಂತೆ ದರಲ್ಲಿ ಖರೀದಿಸಲಾಗುತ್ತಿದೆ. ಪ್ರಸ್ತುತ ಒಂದು ಮೊಟ್ಟೆಯ ಬೆಲೆ ₹8 ಇದ್ದು, ಸರ್ಕಾರ ಪ್ರತಿ ಮೊಟ್ಟೆಗೆ ₹6 ಮಾತ್ರ ಕೊಡುತ್ತದೆ. ಇದರಿಂದ ಪ್ರತಿ ಮೊಟ್ಟೆಗೆ ಸುಮಾರು ₹2 ಹೆಚ್ಚುವರಿ ವೆಚ್ಚವಾಗುತ್ತಿದ್ದು, ಈ ಹೆಚ್ಚುವರಿ ಮೊತ್ತವನ್ನು ಶಾಲಾ ಮುಖ್ಯಶಿಕ್ಷಕರೇ ಭರಿಸುವ ಅನಿವಾರ್ಯತೆ ಎದುರಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಮಧ್ಯಾಹ್ನ ಬಿಸಿ ಊಟ ಯೋಜನೆಯ ಸಮರ್ಪಕ ನಿರ್ವಹಣೆ ಕಷ್ಟವಾಗುತ್ತಿದೆ. ಪ್ರಸ್ತುತ ಮಾರುಕಟ್ಟೆ ದರಕ್ಕೆ ಅನುಗುಣವಾಗಿ ಅನುದಾನ ತಕ್ಷಣ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಶಿಕ್ಷಕ ಸಂಘದ ಪ್ರಧಾನ ಕಾರ್ಯದರ್ಶಿ ಹಣಮಂತ ಕೊಣದಿ, ನಗರ ವಲಯ ಶಿಕ್ಷಕರ ಸಂಘದ ಅಧ್ಯಕ್ಷ ಜುಬೇರ ಕೆರೂರ ಇದ್ದರು.