ಬಳ್ಳಾರಿ: ಬೀದರ್ ಜಿಲ್ಲೆಯ ಬಸವಕಲ್ಯಾಣದ ಅನುಭವ ಮಂಟಪದ ತ್ರಿಪುರಾಂತಕ ಕೆರೆ ಹತ್ತಿರ ಇರುವ ಹಡಪದ ಅಪ್ಪಣ್ಣನವರ ಅರಿವಿನ ಗವಿಯಲ್ಲಿ ಮೂರ್ತಿ ಪ್ರತಿಷ್ಠಾಪನೆ ಮಾಡಬೇಕು ಎಂದು ಒತ್ತಾಯಿಸಿ ಬಳ್ಳಾರಿ ಜಿಲ್ಲಾ ಶ್ರೀ ಶಿವಶರಣ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದಿಂದ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಜರುಗಿತು.
ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿರುವ ಅನುಭವ ಮಂಟಪದ ತ್ರಿಪುರಾಂತಕ ಕೆರೆ ಹತ್ತಿರ 12ನೇ ಶತಮಾನದ ಅನೇಕ ಬಸವಾದಿ ಶರಣರ ಅರಿವಿನ ಗವಿಗಳು ಇರುವುದಾಗಿ ಇತಿಹಾಸ ಸಾರುತ್ತದೆ. ಅದೇ ರೀತಿ ವಿಶ್ವಗುರು, ಸಾಂಸ್ಕೃತಿಕ ನಾಯಕ ಬಸವಣ್ಣನವರ ಆಪ್ತ ಕಾರ್ಯದರ್ಶಿಯಾಗಿದ್ದ ಶಿವಶರಣ ಹಡಪದ ಅಪ್ಪಣ್ಣನವರ ಅಂದಿನ ಗವಿಯೂ ಅಲ್ಲಿ ಅಸ್ತಿತ್ವದಲ್ಲಿದೆ. ಆದರೆ, ಅರಿವಿನ ಗವಿಯನ್ನು ಬಸವೇಶ್ವರ ದೇವಸ್ಥಾನದ ಪಂಚಕಮಿಟಿಯವರು ಅಕ್ರಮವಾಗಿ ಹಸ್ತಕ್ಷೇಪ ಮಾಡಿರುವುದು ಖಂಡನೀಯ. ಇದರಿಂದ ಶಿವಶರಣ ಹಡಪದ ಅಪ್ಪಣ್ಣನವರಿಗೆ ಮತ್ತು ಹಡಪದ ಸಮುದಾಯದ ಭಕ್ತಿಭಾವನೆಗಳಿಗೆ ತೀವ್ರ ಘಾಸಿಯಾಗಿದೆಯಲ್ಲದೆ, ಇತಿಹಾಸದ ಮೌಲ್ಯ ಕುಗ್ಗಿಸುವ ಕೃತ್ಯ ನಡೆಸಿದಂತಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.ಅನೇಕ ಮಠಾಧೀಶರು ಹಾಗೂ ನಾಯಕರು ಸಹ ಹಡಪದ ಅಪ್ಪಣ್ಣನವರ ಪರವಾಗಿ ಹೋರಾಟ ನಡೆಸಿದರೂ ಇನ್ನೂ ನ್ಯಾಯ ದೊರಕಿಲ್ಲ. ಈ ಕೃತ್ಯದಲ್ಲಿ ಭಾಗಿಯಾಗಿರುವ ಪಂಚಕಮಿಟಿ ಮತ್ತು ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕು. ಅದನ್ನು ಯಥಾ ಸ್ಥಿತಿಗೆ ತರಬೇಕು. ಹಾಗೆಯೇ ಹಡಪದ ಅಪ್ಪಣ್ಣ ನವರ ಅರಿವಿನ ಗವಿಯಲ್ಲಿ ಅವರ ಮೂರ್ತಿಯನ್ನು ಪುನಃ ಪ್ರತಿಷ್ಠಾಪನೆ ಮಾಡಿ, ಆ ಸ್ಥಳವನ್ನು ಬಸವ ಕಲ್ಯಾಣ ಅಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿಸಿ ಸಮರ್ಪಕವಾಗಿ ಅಭಿವೃದ್ಧಿಪಡಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಇಲ್ಲಿನ ನಗರೂರು ನಾರಾಯಣರಾವ್ ಉದ್ಯಾನವನದಿಂದ ಆರಂಭಗೊಂಡ ಮೆರವಣಿಗೆಯು ಗಡಗಿ ಚೆನ್ನಪ್ಪ ವೃತ್ತದ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಗೆ ತಲುಪಿತು. ಇದೇ ವೇಳೆ ಮಾತನಾಡಿದ ಸಂಘಟನೆಯ ಪ್ರಮುಖ ಮುಖಂಡರು ಮೂರ್ತಿ ಪ್ರತಿಷ್ಠಾಪನೆಗೆ ಕೂಡಲೇ ಸೂಕ್ತ ನಿರ್ಧಾರಕ್ಕೆ ಬರಬೇಕು ಎಂದು ಆಗ್ರಹಿಸಿದರು.ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಎಚ್. ಶಶಿಕುಮಾರ್, ಜಿಲ್ಲಾಧ್ಯಕ್ಷ ಎಚ್. ರುದ್ರಪ್ಪ, ಜಿಲ್ಲಾ ಸಂಚಾಲಕ ಎಚ್. ಅಮರೇಶ್, ಬಳ್ಳಾರಿ ತಾಲೂಕು ಅಧ್ಯಕ್ಷ ಕೆ.ಕೆ. ಹಾಳ್, ಎಚ್. ಶಿವರಾಜ್, ಕೆ.ಕೆ.ಹಾಳ್ ಎಚ್. ಸದಾಶಿವ, ತಾಲೂಕು ಗೌರವ ಅಧ್ಯಕ್ಷ ತಿಪ್ಪೇರುದ್ರ ಹಂದಿಹಾಳ್, ಉಪಾಧ್ಯಕ್ಷ ಚೊಳರಾಜ, ಸಂತೋಷಕುಮಾರ, ಪ್ರಧಾನ ಕಾರ್ಯದರ್ಶಿ ವೀರಭದ್ರ ಸಿಂಧುವಾಳ, ಸಂಘಟನಾ ಕಾರ್ಯದರ್ಶಿ ಮರಿಸ್ವಾಮಿ ಸೋಮಸಮುದ್ರ, ಜಿಲ್ಲಾ ಖಜಾಂಚಿ ಮಂಜುನಾಥ, ನಾಗರಾಜ ಎಚ್., ಜಿಲ್ಲಾ ಸಂಘಟನಾ ಕಾರ್ಯದರ್ಶಿ ದೊಡ್ಡಬಸಪ್ಪ ವಣೇನೂರು, ಯರಗುಡಿ ಮಂಜುನಾಥ ಸೇರಿದಂತೆ ಸಮಾಜದ ಮುಖಂಡರು ಹಾಗೂ ಮಹಿಳೆಯರು ಭಾಗವಹಿಸಿದ್ದರು. ಮೂರ್ತಿ ಪ್ರತಿಷ್ಠಾಪನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳಿಗೆ ಬರೆದ ಮನವಿಪತ್ರವನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿದರು.