ಪಾರಂಪರಿಕ ವೈದ್ಯ ಪದ್ಧತಿ ರಕ್ಷಣೆಗೆ ಆಗ್ರಹ

| Published : Aug 19 2024, 12:47 AM IST

ಸಾರಾಂಶ

೨೦೦೫ರಲ್ಲಿ ಪಾರಂಪರಿಕ ನಾಟಿ ವೈದ್ಯರ ಬಗ್ಗೆ ಗ್ರಾಮವಾರು ನಡೆಸುತ್ತಿದ್ದ ಸರ್ವೆ, ದೃಢೀಕರಣ ಈಗ ಸ್ಥಗಿತಗೊಂಡಿದೆ. ಗ್ರಾಪಂ ಮೂಲಕ ವಿವರ ಸಂಗ್ರಹಿಸಿ ವಿವರಣಾತ್ಮಕ ಹೊತ್ತಿಗೆ ತರಬೇಕು ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಮನವಿ ಸಲ್ಲಿಸಲಾಯಿತು.

ಶಿರಸಿ: ಆಯುರ್ವೇದ ವನಸ್ಪತಿ, ಪಾರಂಪರಿಕ ವೈದ್ಯ ವಿಧಾನ ಪ್ರಕೃತಿದತ್ತವಾದುದು. ಈ ಜ್ಞಾನ ಕ್ರೋಢೀಕರಿಸಿ ಮುಂದಿನ ಜನಾಂಗಕ್ಕೆ ರಕ್ಷಿಸಿ ವಿಕಸಿತಗೊಳಿಸಲು ಕ್ರಮ ಕೈಗೊಳ್ಳುವಂತೆ ಉತ್ತರಕನ್ನಡ ಜನಪದ ಹಾಗೂ ಪಾರಂಪರಿಕ ವೈದ್ಯ ಸಂಘದ ಪದಾಧಿಕಾರಿಗಳು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.ಜನಪದ ಹಾಗೂ ಪಾರಂಪರಿಕ ವೈದ್ಯ ಪದ್ಧತಿ ಭಾರತೀಯರ ಆರೋಗ್ಯ ವ್ಯವಸ್ಥೆಯಲ್ಲಿ ತಳಮಟ್ಟದಿಂದ ಹಾಸುಹೊಕ್ಕಾಗಿದೆ. ಪಾರಂಪರಿಕ ವೈದ್ಯ, ಗ್ರಾಮ ವೈದ್ಯ, ಹಳ್ಳಿ ವೈದ್ಯ, ನಾಟಿ ವೈದ್ಯ, ಜನಪದ ಮೂಲಿಕಾ ವೈದ್ಯ ಹೀಗೆ ಅನೇಕ ಪ್ರಾದೇಶಿಕ ಹೆಸರುಗಳಿಂದ ಕರೆಸಿಕೊಳ್ಳುತ್ತಿದ್ದ ಚಿಕಿತ್ಸಕರು. ತಮ್ಮ ದೇಶೀಯ ಪದ್ಧತಿಯಲ್ಲಿ ಆಯಾ ಪ್ರದೇಶದಲ್ಲಿ ಲಭ್ಯವಿದ್ದ ಮೂಲಿಕೆ, ವನಸ್ಪತಿ, ಪ್ರಾಣಿ, ಪಕ್ಷಿ, ಪಶು, ಜಲ, ಲೋಹ, ಲವಣ, ವಿವಿಧ ಮಣ್ಣು, ಹುಲ್ಲು, ಸಸ್ಯ, ಬೇರು, ತೊಗಟೆ, ಫಲ, ಎಲೆ ಉಪಯೋಗಿಸಿ ಅನೇಕ ರೋಗಗಳಿಗೆ ಔಷಧ ಮಾಡಿ ಕಷ್ಟ ಸಾಧ್ಯವೆನ್ನುವ ನೋವು ರೋಗ ಗುಣಪಡಿಸುವ ೩೦೦೦ಕ್ಕೂ ಹೆಚ್ಚು ಚಿಕಿತ್ಸಕರು ಜಿಲ್ಲೆಯ ಮೂಲೆಮೂಲೆಯಲ್ಲಿ ಇದ್ದಾರೆ ಎಂದರು. ಎಲೆಮರೆಯಂತೆ ಜನಪದ ವೈದ್ಯರು ಆರೋಗ್ಯ ಸೇವೆ ನೀಡುತ್ತಿದ್ದಾರೆ. ಸರಳ, ಅಪಾಯವಲ್ಲದ ಈ ದೇಶೀಯ ಆರೋಗ್ಯ ಪರಂಪರೆಗೆ ಮುಂದಿನ ಪೀಳಿಗೆಗೆ ಹಂಚಿ ಇಡಲು, ಕಲಿಸಿಕೊಡಲು, ದಾಖಲಿಸಲು ಇತ್ತೀಚಿನ ವರ್ಷಗಳಲ್ಲಿ ಹಲವಾರು ತೊಡಕು ತೊಂದರೆ ಉಂಟಾಗಿದೆ ಎಂದು ಮನವಿಯಲ್ಲಿ ಗಮನ ಸೆಳೆಯಲಾಗಿದೆ.ಉತ್ತರಕನ್ನಡ ಜನಪದ ಹಾಗೂ ಪಾರಂಪರಿಕ ವೈದ್ಯ ಸಂಘದ ಪ್ರಧಾನ ಸಂಯೋಜಕ ವಿಶ್ವನಾಥ ಹೆಗಡೆ ಕಡಬಾಳ, ಅಧ್ಯಕ್ಷ ಎಸ್.ಎಂ. ಹೆಗಡೆ, ಕಾರ್ಯದರ್ಶಿ ಸುರೇಶ ಉಪಾಧ್ಯಾಯ, ಪಾರಂಪರಿಕ ವೈದ್ಯರಾದ ಮಧುಕೇಶ್ವರ ಹೆಗಡೆ, ನಾರಾಯಣ ಹೆಗಡೆ ಮತ್ತಿತರರು ಇದ್ದರು.

ಜನಪದ ವೈದ್ಯರ ಸರ್ವೆ ನಡೆಸಿ೨೦೦೫ರಲ್ಲಿ ಪಾರಂಪರಿಕ ನಾಟಿ ವೈದ್ಯರ ಬಗ್ಗೆ ಗ್ರಾಮವಾರು ನಡೆಸುತ್ತಿದ್ದ ಸರ್ವೆ, ದೃಢೀಕರಣ ಈಗ ಸ್ಥಗಿತಗೊಂಡಿದೆ. ಗ್ರಾಪಂ ಮೂಲಕ ವಿವರ ಸಂಗ್ರಹಿಸಿ ವಿವರಣಾತ್ಮಕ ಹೊತ್ತಿಗೆ ತರಬೇಕು. ಅದನ್ನು ದೃಢೀಕರಿಸಬೇಕು. ಕಾಲಕಾಲಕ್ಕೆ ನವೀಕರಿಸಬೇಕು. ನಾಟಿ ವೈದ್ಯರಿಗೆ ದೃಢೀಕರಣ ಪತ್ರ ನೀಡಬೇಕು. ಈ ಪಾರಂಪರಿಕ ವೈದ್ಯರಿಗೆ ವಿವಿಧ ಸರ್ಕಾರಿ ಇಲಾಖೆಗಳಿಂದ ಆಗುವ ತೊಂದರೆ ತಪ್ಪಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.