ಕನಕಪುರ: ತಾಲೂಕಿನ ಸುಂಡಘಟ್ಟ ಗ್ರಾಮದಲ್ಲಿ ಸ್ಮಶಾನಕ್ಕೆ ಸೂಕ್ತ ಜಾಗವಿಲ್ಲದೆ ಗ್ರಾಮಸ್ಥರು ಪರದಾಡುವ ಪರಿಸ್ಥಿತಿ ಎದುರಾಗಿದೆ ಎಂದು ಗ್ರಾಮದ ಮುಖಂಡ ಮುನಿರಾಜು ಆರೋಪಿಸಿದರು.

ಕನಕಪುರ: ತಾಲೂಕಿನ ಸುಂಡಘಟ್ಟ ಗ್ರಾಮದಲ್ಲಿ ಸ್ಮಶಾನಕ್ಕೆ ಸೂಕ್ತ ಜಾಗವಿಲ್ಲದೆ ಗ್ರಾಮಸ್ಥರು ಪರದಾಡುವ ಪರಿಸ್ಥಿತಿ ಎದುರಾಗಿದೆ ಎಂದು ಗ್ರಾಮದ ಮುಖಂಡ ಮುನಿರಾಜು ಆರೋಪಿಸಿದರು.

ಚಾಕನಹಳ್ಳಿ ಗ್ರಾಮ ಪಂಚಾಯ್ತಿಯ ಗ್ರಾಮ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರಿ ಗೋಮಾಳದ ಸರ್ವೆ ನಂಬರ್ 25ರಲ್ಲಿ 20ಗುಂಟೆ ಜಮೀನು ಸ್ಮಶಾನಕ್ಕೆ ಮಂಜೂರಾಗಿದ್ದು,ಅದನ್ನು ಹದ್ದುಬಸ್ತು ಮಾಡಿಕೊಡುವಂತೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಸ್ಮಶಾನದ ಸುತ್ತಮುತ್ತಲ ಜಮೀನಿನ ಭೂ ಮಾಲೀಕರು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ದೂರಿದರು.

ಗ್ರಾಮ ಪಂಚಾಯಿತಿ ಅಧಿಕಾರಿಗಳು ಭೂ ಮಾಪಕರಿಂದ ಅಳತೆ ಮಾಡಿಸಿ, ಹದ್ದುಬಸ್ತು ಮಾಡಿ ಒತ್ತುವರಿದಾರರಿಂದ ಸ್ಮಶಾನದ ಭೂಮಿಯನ್ನು ತೆರವುಗೊಳಿಸಿ ಗ್ರಾಮಸ್ಥರಿಗೆ ಅನುಕೂಲ ಮಾಡಿಕೊಡಬೇಕು. ಸ್ಮಶಾನಕ್ಕೆ ಹೊಂದಿಕೊಂಡಂತೆ,ಗ್ರಾಮ ನಕಾಶೆಯಲ್ಲಿ ಸರ್ಕಾರಿ ಓಣಿಯಿದ್ದು ಗ್ರಾಮದ ಮುಖ್ಯ ರಸ್ತೆಗೆ ಹಾಗೂ ಸರ್ಕಾರಿ ಗೋಮಾಳ ಜಮೀನಿನಲ್ಲಿ ಸಾಗುವಳಿ ಮಾಡುತ್ತಿರುವ ರೈತರಿಗೆ ಅನುಕೂಲವಾಗುತ್ತದೆ ಎಂದು ತಿಳಿಸಿದರು.

ಗ್ರಾಮದಲ್ಲಿ ಯಾರಾದರೂ ಸತ್ತರೆ ಹೂಳಲು ಜಾಗವಿಲ್ಲದೆ ಸಮಸ್ಯೆಯಾಗುತ್ತಿದೆ,ಸ್ಮಶಾನಗಳಿಗೆ ಕಾಯಕಲ್ಪ ಕಲ್ಪಿಸುವ ಸರಕಾರದ ಯೋಜನೆ ಹಳಿ ತಪ್ಪಿದ್ದು, ಪ್ರತಿ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ಮಶಾನ ಭೂಮಿಯನ್ನು ಆಯ್ಕೆ ಮಾಡಿ, ಅಭಿವೃದ್ಧಿಪಡಿಸುವ ಸರಕಾರದ ಯೋಜನೆ ಪಂಚಾಯಿತಿಯಲ್ಲಿ ಅಧಿಕಾರಿಗಳ ನಿಷ್ಕಾಳಜಿಯಿಂದ ಗರ ಬಡಿದಿದೆ, ಕೂಡಲೇ ಒತ್ತುವರಿದಾರರನ್ನು ತೆರವುಗೊಳಿಸುವಂತೆ ಗ್ರಾಮಸಭೆಯಲ್ಲಿ ಅಧಿಕಾರಿಗಳನ್ನು ಒತ್ತಾಯಿಸಿದರು.

ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಪುಟ್ಟರಂಗಯ್ಯ ಮಾತನಾಡಿ, ಸರ್ಕಾರದಿಂದ ಸ್ಮಶಾನಕ್ಕೆ ಜಮೀನು ಮಂಜೂರಾಗಿದ್ದರೆ ಅದನ್ನು ಪರಿಶೀಲನೆ ಮಾಡಿ ತಹಸೀಲ್ದಾರರ ಗಮನಕ್ಕೆ ತಂದು, ಅಧಿಕಾರಿಗಳ ಆದೇಶದ ಮೇರೆಗೆ ಒತ್ತುವರಿದಾರರನ್ನು ತೆರವುಗೊಳಿಸಲಾಗುವುದು. ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರಿ ಗೋಮಾಳದ ಜಾಗವನ್ನು ಬಿಟ್ಟರೆ, ಗ್ರಾಮಠಾಣಾ ಗುಂಡುತೋಪುಗಳು ಯಾವುದೇ ರೀತಿಯ ಜಾಗಗಳು ಇಲ್ಲ ಎಂದು ಹೇಳಿದರು.

ಗ್ರಾಮದ ಅಗತ್ಯತೆಗಳ ಆಧಾರದ ಮೇಲೆ ಅಭಿವೃದ್ಧಿ ಯೋಜನೆಗಳನ್ನು ರೂಪಿಸಲು ಮತ್ತು ಶಿಕ್ಷಣ, ಆರೋಗ್ಯ, ಕಾನೂನು ಸುವ್ಯವಸ್ಥೆ ಮುಂತಾದ ವಿಷಯಗಳ ಬಗ್ಗೆ ಚರ್ಚಿಸಲು ಮತ್ತು ಪರಿಹಾರ ಕಂಡುಕೊಳ್ಳಲು ಗ್ರಾಮಸಭೆಗಳು ಸಹಕಾರಿಯಾಗಿದೆ ಎಂದು ಹೇಳಿದರು.

ಆರೋಗ್ಯ ಇಲಾಖೆಯ ಅಧಿಕಾರಿ ರಾಜು ಮಾತನಾಡಿ, ಡಿ.21ರಂದು ಪಲ್ಸ್ ಪೋಲಿಯೋ ಲಸಿಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಗ್ರಾಮ ಪಂಚಾಯ್ತಿ ಸದಸ್ಯರು, ಸಾರ್ವಜನಿಕರು ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿಸಲು ಜನರಲ್ಲಿ ಜಾಗೃತಿ ಮಾಡಿಸಿ ಸಹಕಾರ ನೀಡಬೇಕು, ಮೂರು ದಿನಗಳ ಕಾಲ ಕಾರ್ಯಕ್ರಮ ನಡೆಯಲಿದ್ದು,ಸೋಮವಾರ ಮಂಗಳವಾರ ಮನೆಮನೆಗೆ ಹೋಗಿ ಲಸಿಕೆಯನ್ನು ಹಾಕಲಾಗುವುದು ತಾಯಂದಿರು ತಪ್ಪದೇ ಲಸಿಕೆಯನ್ನು ಹಾಕಿಸುವಂತೆ ಸಭೆಯಲ್ಲಿ ಮನವಿ ಮಾಡಿದರು.

ನೋಡಲ್ ಅಧಿಕಾರಿ, ಶಿಕ್ಷಣ ಇಲಾಖೆಯ ಬಿ ಆರ್ ಸಿ ರಾಜು ಮಾತನಾಡಿ, ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಗ್ರಾಮದ ಗ್ರಾಮಸ್ಥರು, ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸಭೆಗಳಿಗೆ ಹಾಜರಾಗಿ, ಸರ್ಕಾರದಿಂದ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ಪಡೆದು ವಿವಿಧ ಯೋಜನೆಗಳ ಉಪಯೋಗ ಪಡೆಯುವಂತೆ ಸಾರ್ವಜನಿಕರಿಗೆ ಸಲಹೆ ನೀಡಿದರು.

ಗ್ರಾಪಂ ಅಧ್ಯಕ್ಷೆ ದುಂಡಮ್ಮ, ಉಪಾಧ್ಯಕ್ಷ ಗಂಗರಾಜು, ಕಾರ್ಯದರ್ಶಿ ರಾಮಚಂದ್ರಯ್ಯ, ಲೆಕ್ಕಪರಿಶೋಧ ಕ ರೇಣುಕಾ ಮತ್ತಿತರರು ಉಪಸ್ಥಿತರಿದ್ದರು.

17ಕೆಆರ್ ಎಂಎನ್ 7.ಜೆಪಿಜಿ

ಕನಕಪುರ ತಾಲೂಕಿನ ಚಾಕನಹಳ್ಳಿ ಗ್ರಾಮ ಪಂಚಾಯ್ತಿಯ ಗ್ರಾಮ ಸಭೆ ನಡೆಯಿತು.