ಸಾರಾಂಶ
ಹಾರೋಹಳ್ಳಿ: ತಹಸೀಲ್ದಾರ್ ಶಿವಕುಮಾರ್ ಅಮಾನತು ಆದೇಶವನ್ನು ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿ ವಿವಿಧ ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಿದರು.
ತಾಲೂಕು ಕಚೇರಿ ಮುಂದೆ ಸೇರಿದ ರೈತಸಂಘ, ಸಮತಾ ಸೈನಿಕ ದಳ, ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳ ಮುಖಂಡರು ಜಿಲ್ಲಾಧಿಕಾರಿ ಯಶವಂತ್ ವಿ.ಗುರುಕರ್ ಹಾಗೂ ರಾಜಸ್ವ ನಿರೀಕ್ಷಕರು ಮತ್ತು ಗ್ರಾಮ ಲೆಕ್ಕಾಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ರೈತಸಂಘ ಜಿಲ್ಲಾಧ್ಯಕ್ಷ ದೇವರಾಜು ಮಾತನಾಡಿ, ಕಳೆದ ಆರು ತಿಂಗಳ ಹಿಂದೆ ಹಾರೋಹಳ್ಳಿ ತಾಲೂಕಿಗೆ ತಹಸೀಲ್ದಾರ್ ಆಗಿ ಬಂದ ಆರ್.ಸಿ.ಶಿವಕುಮಾರ್ ನಿಷ್ಠಾವಂತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದುವರೆಗೂ ಒಂದೇ ಒಂದು ಆರೋಪ ಅವರ ವಿರುದ್ಧ ಕೇಳಿ ಬಂದಿಲ್ಲ. ಇನ್ನಿಲ್ಲದ ಸುಳ್ಳು ಆರೋಪಗಳನ್ನು ಮಾಡಿ ಅವರನ್ನು ಅಮಾನತು ಮಾಡಲಾಗಿದೆ ಎಂದು ದೂರಿದರು.
53ರ ಅಡಿಯಲ್ಲಿ ಅರ್ಜಿ ಸಲ್ಲಿಸಿರುವ ಬಹುತೇಕ ಅರ್ಜಿಗಳು ತಿರಸ್ಕೃತಗೊಂಡಿವೆ. ದಾಖಲೆಗಳು ಇಲ್ಲವೆಂದು ಗ್ರಾಮ ಲೆಕ್ಕಾಧಿಕಾರಿಗಳು ಸುಳ್ಳು ವರದಿಯನ್ನು ನೀಡಿದ್ದಾರೆ. ಅವುಗಳನ್ನು ಗಮನಿಸಿದ ತಹಸೀಲ್ದಾರ್ ಅವರು ರೈತರಿಗೆ ನ್ಯಾಯ ಒದಗಿಸಲು ಹೊರಟಿದ್ದೆ ತಪ್ಪಾಗಿದೆ. ಗ್ರಾಮ ಲೆಕ್ಕಾಧಿಕಾರಿಗಳ ಹಣದ ಮೂಲವನ್ನು ತಪ್ಪಿಸಿದ್ದಕ್ಕಾಗಿ ಗ್ರಾಮ ಲೆಕ್ಕಾಧಿಕಾರಿಗಳು ಸೇರಿಕೊಂಡು ಜಿಲ್ಲಾಡಳಿತವನ್ನು ತಪ್ಪು ದಾರಿ ಗೆಳೆಯುವ ಕೆಲಸ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಜಿಲ್ಲಾಧಿಕಾರಿಗಳ ಕ್ರಮ ಸಹಿಸುವಂತಹದಲ್ಲ. ಹಣ ಪಡೆದವರು, ಲೂಟಿಕೋರರು, ಭ್ರಷ್ಟರೆಲ್ಲರೂ ನೆಮ್ಮದಿಯಾಗಿ ಜೀವನ ನಡೆಸುತ್ತಿದ್ದಾರೆ. ಪ್ರಾಮಾಣಿಕ ವ್ಯಕ್ತಿಗಳಿಗೆ ಯಾಕೀ ಶಿಕ್ಷೆ. ತಹಸೀಲ್ದಾರ್ ರವರು ಕಪ್ಪ ಸಲ್ಲಿಸದ ಕಾರಣ ಅವರ ಮೇಲೆ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲಾಧಿಕಾರಿಗಳಿಗೆ ನಿಷ್ಠೆ ಇದ್ದರೆ ಮೊದಲು ಅವರ ವಿರುದ್ಧ ಕೇಳಿ ಬಂದಿರುವ ಆರೋಪವನ್ನು ಪರಿಶೀಲಿಸುವ ಕೆಲಸ ಮಾಡಬೇಕಿತ್ತು. ಗ್ರಾಮ ಲೆಕ್ಕಾಧಿಕಾರಿಗಳು ಕೋಟಿ ಕುಳಗಳಾಗಿದ್ದಾರೆ. ಮೊದಲು ಅದನ್ನು ಪರಿಶೀಲಿಸಿ ಕ್ರಮ ತೆಗೆದುಕೊಳ್ಳಿ. ಇಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರತಿಯೊಬ್ಬರ ಮೇಲೂ ಹತ್ತಾರು ಆರೋಪಗಳಿವೆ. ಅವರೆಲ್ಲರ ವಿರುದ್ದ ಯಾವಾಗ ಕ್ರಮ ಕೈಗೊಳ್ಳುತ್ತೀರಾ ಹೇಳಿ ಜಿಲ್ಲಾಧಿಕಾರಿಗಳೇ ಎಂದು ಪ್ರಶ್ನಿಸಿದರು.
ದಲಿತ ಸೇನೆಯ ಜಿಲ್ಲಾಧ್ಯಕ್ಷ ಅಶೋಕ್ ಮಾತನಾಡಿ, ತಹಸೀಲ್ದಾರ್ ಶಿವಕುಮಾರ್ ಅವರು ಉತ್ತಮವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹೀಗಿರುವಾಗ ಜಿಲ್ಲಾಡಳಿತದ ಕ್ರಮ ಸಹಿಸಲಾಗದು. ಹಣ ಪಡೆದವರು,ಲೂಟಿಕೋರರು, ಭ್ರಷ್ಟರೆಲ್ಲರೂ ನೆಮ್ಮದಿಯಾಗಿ ಜೀವನ ನಡೆಸುತ್ತಿದ್ದಾರೆ. ಪ್ರಾಮಾಣಿಕ ವ್ಯಕ್ತಿಗಳಿಗೆ ಶಿಕ್ಷೆ ಏಕೆಂದು ಪ್ರಶ್ನಿಸಿದರು.ಸಮತಾ ಸೈನಿಕ ದಳದ ಯುವ ಘಟಕದ ಅಧ್ಯಕ್ಷ ಜಿ. ಗೋವಿಂದಯ್ಯ ಮಾತನಾಡಿ, ಕಂದಾಯ ಇಲಾಖೆ ಅಧೀನ ಕಾರ್ಯದರ್ಶಿಗಳು ಅಮಾನತು ಆದೇಶ ಹಿಂಡೆಯಬೇಕು. ಅಲ್ಲಿಯವರೆಗೂ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸಲಾಗುವುದು. ಗ್ರಾಮ ಲೆಕ್ಕಾಧಿಕಾರಿಗಳ ವಿರುಧ್ಧ ತನಿಖೆ ನಡೆಸಿ ಅವರ ವಿರುಧ್ಧ ಕ್ರಮ ಕೈಗೊಳ್ಳಬೇಕು. ಅಲ್ಲಿಯವರೆಗೂ ತಾಲೂಕು ಕಚೇರಿಗೆ ಯಾರನ್ನೂ ಸೇರಿಸುವುದಿಲ್ಲ ಎಂದು ಎಚ್ಚರಿಸಿದರು.
ತಾಲೂಕು ಕೆಡಿಪಿ ಸದಸ್ಯ ಕೋಟೆ ಕುಮಾರ್ ಮಾತನಾಡಿ, ತಾಲೂಕಿನ ರೈತರಿಗೆ ಆದಷ್ಟು ಬೇಗ ಸಾಗುವಳಿ ನೀಡುವ ಸಲುವಾಗಿ ನಮ್ಮ ಶಾಸಕರು, ಮಾಜಿ ಸಂಸದರು ಆಸಕ್ತಿ ವಹಿಸಿದ್ದರು. ಈ ಹಿನ್ನೆಲೆಯಲ್ಲಿ ರೈತ ಕೆಲಸ ತ್ವರಿತವಾಗಿ ಆಗಬೇಕೆಂಬ ಉದ್ದೇಶದಿಂದ ತಹಸೀಲ್ದಾರ್ ಉತ್ತಮವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದರು.ರಿಪಬ್ಲಿಕನ್ ಸೇನೆ ಜಿಲ್ಲಾಧ್ಯಕ್ಷ ಬೆಣಚುಕಲ್ ದೊಡ್ಡಿ ರುದ್ರೇಶ್, ರಾಮಸಾಗರ ಕೃಷ್ಣ, ರೈತ ಸಂಘದ ಬಿ.ಎಂ.ಪ್ರಕಾಶ್, ಶಂಕರ್, ಗಜೇಂದ್ರ ಸಿಂಗ್, ಚೀಲೂರು ಕುಮಾರ್, ಕಾಂಗ್ರೆಸ್ ಮುಖಂಡ ನ್ಯಾಮತುಲ್ಲಾ, ಹೊಸದುರ್ಗ ಪ್ರಶಾಂತ್,ಕೋಟೆ ಪ್ರಕಾಶ್, ಒಕ್ಕಲಿಗ ಸಂಘದ ಅಭಿಷೇಕ್, ಜಯಕರ್ನಾಟಕ ಕೋಟೆ ರಾಜು, ಮತ್ತಿತರರು ಭಾಗವಹಿಸಿದ್ದರು.
23ಕೆಆರ್ ಎಂಎನ್ 5.ಜೆಪಿಜಿಹಾರೋಹಳ್ಳಿ ತಾಲೂಕು ಕಚೇರಿ ಎದುರು ರಾಜಕೀಯ ಪಕ್ಷಗಳು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಿದರು.