ಭೂ ಸುಧಾರಣೆಯ ರೂವಾರಿ ದೇವರಾಜ ಅರಸು

| Published : Aug 21 2025, 01:00 AM IST

ಸಾರಾಂಶ

ಅರಸು ಅವರು ಭೂಸುಧಾರಣೆ ಕಾಯ್ದೆಯನ್ನು ರಾಜ್ಯದಲ್ಲಿ ಜಾರಿಗೆ ತಂದು ಉಳುವವನೇ ಭೂ ಒಡೆಯ ಎಂಬ ಹಕ್ಕನ್ನು ನೀಡುವ ಮೂಲಕ ಸಾವಿರಾರು ರೈತರು ಭೂ ಮಾಲಿಕರಾಗುವಂತೆ ಮಾಡಿ ರೈತರ ಬದುಕು ಹಸನಾಗಲು ಕಾರಣೀಭೂತರಾಗಿದ್ದಾರೆ. ಮಲಹೋರುವ ಅನಿಷ್ಠ ಪದ್ಧತಿಯನ್ನು ನಿರ್ಮೂಲನೆ ಮಾಡಿದರು

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ದಿ. ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ‘ರೈತರಿಗೆ ಬದುಕು ಕಟ್ಟಿಕೊಟ್ಟ ದೇವರು’ ಎಂದರೆ ತಪ್ಪಾಗಲಾರದು ಎಂದು ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಡಿ. ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಇವರ ಸಂಯುಕ್ತಾಶ್ರಯದಲ್ಲಿ ನಗರದ ಅಂಬೇಡ್ಕ‌ರ್ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಡಿ. ದೇವರಾಜ ಅರಸು ರವರ 110ನೇ ಜನ್ಮ ದಿನಾಚರಣೆಯ ಕಾರ್ಯಕ್ರಮದಲ್ಲಿ ಅರಸು ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.

ಅನಿಷ್ಠ ಪದ್ಧತಿಗಳ ನಿರ್ಮೂಲನೆ

ಅರಸು ಅವರು ಭೂಸುಧಾರಣೆ ಕಾಯ್ದೆಯನ್ನು ರಾಜ್ಯದಲ್ಲಿ ಜಾರಿಗೆ ತಂದು ಉಳುವವನೇ ಭೂ ಒಡೆಯ ಎಂಬ ಹಕ್ಕನ್ನು ನೀಡುವ ಮೂಲಕ ಸಾವಿರಾರು ರೈತರು ಭೂ ಮಾಲಿಕರಾಗುವಂತೆ ಮಾಡಿ ರೈತರ ಬದುಕು ಹಸನಾಗಲು ಕಾರಣೀಭೂತರಾಗಿದ್ದಾರೆ. ಮಲಹೋರುವ ಅನಿಷ್ಠ ಪದ್ಧತಿಯನ್ನು ನಿರ್ಮೂಲನೆ ಮಾಡಿದರು. ಅಂದಿನ ಮೈಸೂರು ರಾಜ್ಯ ಎಂಬ ಹೆಸರನ್ನು ಕರ್ನಾಟಕ ಎಂದು ನಾಮಕರಣ ಮಾಡಿದರು. ಒಟ್ಟಾರೆ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದ ದೀಮಂತ ರಾಜಕಾರಣಿ ಅರಸು ಎಂದು ಬಣ್ಣಿಸಿದರು. ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸಿ ಕೊಟ್ಟರು. ಈ ಎಲ್ಲಾ ಸೌಲಭ್ಯಗಳನ್ನು ವಿದ್ಯಾರ್ಥಿಗಳು ಬಳಕೆ ಮಾಡಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ಜ್ಞಾನಾಧಾರಿತ ಸಮಾಜದ ನಿರ್ಮಾಣವಾಗುವ ದಿನಗಳು ದೂರವಿಲ್ಲ. ಅದರಿಂದ ಜ್ಞಾನವನ್ನು ಶಿಕ್ಷಣದ ಮೂಲಕ ಪಡೆಯಬೇಕು. ಶಿಕ್ಷಣದ ಜೊತೆ ಜೊತೆಗೆ ಕೌಶಲ್ಯವನ್ನು ಕಲಿಯಲು ಮುಂದಾಗಬೇಕು ಎಂದು ವಿದ್ಯಾರ್ಥಿಗಳಿಗೆ ಮಾತು ಹೇಳಿದರು.ಬಡವರ ಬಾಳಿನ ಬೆಳಕು

ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಯಲುವಳ್ಳಿ ಎನ್. ರಮೇಶ್ ಮಾತನಾಡಿ, ಭೂಸುಧಾರಣೆಯಂತಹ ದಿಟ್ಟ ಆಡಳಿತ ಕ್ರಮ ಕೈಗೊಂಡು ರೈತರ ಬಾಳಲ್ಲಿ ಇಂದಿಗೂ ಸಹ ದೇವರಾಜ ಅರಸು ರವರು ಜೀವಂತ ನಾಯಕರಾಗಿದ್ದಾರೆ. ಎಲ್ಲರಿಗೂ ಸಮಾನತೆ ತಲುಪಲು ಶಿಕ್ಷಣ ಮತ್ತು ರಾಜಕೀಯ ಅಧಿಕಾರ ನೀಡಿದಾಗ ಮಾತ್ರ ಸಾಧ್ಯ ಎಂಬುದನ್ನು ಅರಿತ ಅರಸು ರವರು ಆ ನಿಟ್ಟಿನಲ್ಲಿ ಹಲವಾರು ಕ್ರಮಗಳನ್ನು ಅನುಷ್ಠಾನ ಮಾಡಿದರು. ಪ್ರಸ್ತುತದ ಆಡಳಿತದ ಕ್ರಮಗಳಲ್ಲಿ ಅರಸುರವರ ಕೊಡುಗೆಗಳೇ ಹೆಚ್ಚು ಎಂದು ತಿಳಿಸಿದರು. ನಿರುದ್ಯೋಗಿ ವಿದ್ಯಾವಂತ ಯುವಕರಿಗೆ ನೆರವಾಗುವ ನಿರುದ್ಯೋಗಿ ಭತ್ಯೆ (ಸ್ಟೈಫಂಡರಿ) ಯೋಜನೆಯನ್ನು ಅರಸು ಅವರು ಜಾರಿಗೆ ತಂದರು, ಇಂದಿನ ಯುವನಿಧಿ ಯೋಜನೆಯು ಅದರ ಮುಂದುವರೆದ ಭಾಗವಾಗಿದ್ದು, ಉದ್ಯೋಗಾಕಾಂಕ್ಷಿ ಪದವೀಧರರಿಗೆ 3000 ರೂ, ಡಿಪ್ಲೊಮೋ ಅಭ್ಯರ್ಥಿಗಳಿಗೆ 1500 ರೂ ನೀಡಲಾಗುತ್ತಿದೆ. ಅರಸುರವರ ದಾರಿಯನ್ನು ಇಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಅನುಸರಿಸುತ್ತಿದ್ದಾರೆ ಎಂದು ತಿಳಿಸಿದರು.ಸಂಪನ್ಮೂಲ ವ್ಯಕ್ತಿಯಾಗಿ ಶಿಡ್ಲಘಟ್ಟದ ಅಕ್ಷರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಬಿ.ವಿ.ಪ್ರಕಾಶ್ ಮಾತನಾಡಿ, ಡಿ. ದೇವರಾಜ ಅರಸ್ ಅವರು 1952ರಲ್ಲಿ ಮೊದಲ ಚುನಾವಣೆಯಲ್ಲಿ ಶಾಸಕರಾಗಿ ಆಯ್ಕೆಯಾಗಿ ಕರ್ನಾಟಕದ ಇತಿಹಾಸದಲ್ಲಿ ಪ್ರಮುಖ ರಾಜಕಾರಣಿಯಾದರು. ಅವರು ಸಾಮಾಜಿಕ ನ್ಯಾಯದ ಹರಿಕಾರ ಎಂದೇ ಖ್ಯಾತರಾಗಿದ್ದಾರೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಸತಿ ಶಾಲೆ ಮತ್ತು ವಸತಿ ಕಾಲೇಜುಗಳಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಚಿಕ್ಕಬಳ್ಳಾಪುರ ನಗರದ ಜೈ ಭೀಮ್ ಹಾಸ್ಟೆಲ್ ನಿಂದ ಪ್ರಾರಂಭ ವಾದ ದೇವರಾಜ ಅರಸುರವರ ಅದ್ದೂರಿ ಪಲ್ಲಕ್ಕಿ ಮೆರವಣಿಗೆಯು ಬೃಹತ್ ಭಾವಚಿತ್ರ ಪ್ರದರ್ಶನ ಹಾಗೂ ಕಲಾತಂಡಗಳೊಂದಿಗೆ ನಗರದ ಮುಖ್ಯಬೀದಿಗಳಲ್ಲಿ ಸಾಗಿ ಅಂಬೇಡ್ಕರ್ ಭವನ ತಲುಪಿತು.

ಈ ಸಂದರ್ಭದಲ್ಲಿ ಜಿಪಂ ಉಪಕಾರ್ಯದರ್ಶಿ ಅತಿಕ್ ಪಾಷಾ, ತಹಸೀಲ್ದಾರ್ ರಶ್ಮಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಕೆ.ವಿ.ಮುನಿರತ್ನಮ್ಮ, ಪಶುಪಾಲನ ಇಲಾಖೆಯ ಉಪ ನಿರ್ದೇಶಕ ರಂಗಪ್ಪ ಮತ್ತಿತರರು ಇದ್ದರು.