ಶ್ರೀಮಠದಿಂದ ಹೊರಟ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ವೇದಿಕೆ ತಲುಪಿತು.

ಯಲಬುರ್ಗಾ: ಪಟ್ಟಣದ ಶ್ರೀಧರ ಮುರಡಿ ಹಿರೇಮಠದ ಪೀಠಾಧಿಪತಿ ಶ್ರೀಬಸವಲಿಂಗೇಶ್ವರ ಸ್ವಾಮೀಜಿಗಳ ೨೪ನೇ ವರ್ಷದ ಪಟ್ಟಾಧಿಕಾರ ಮಹೋತ್ಸವ ಹಾಗೂ ಶ್ರೀಮಠದ ಜಾತ್ರೆ ನಿಮಿತ್ತ ಸೋಮವಾರ ವಾರಣಾಸಿ ಡಾ. ಮಲ್ಲಿಕಾರ್ಜುನ ವಿಶ್ವರಾಧ್ಯ ಶ್ರೀಗಳ ಅಡ್ಡಪಲ್ಲಕ್ಕಿ ಮೆರವಣಿಗೆ ಸಡಗರ, ಸಂಭ್ರಮದಿಂದ ನಡೆಯಿತು.

ಶ್ರೀಮಠದಿಂದ ಹೊರಟ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ವೇದಿಕೆ ತಲುಪಿತು. ದಾರಿಯುದ್ದಕ್ಕೂ ಭಕ್ತರು ಶ್ರೀಗಳನ್ನು ಸ್ವಾಗತಿಸಿದರು. ಮೆರವಣಿಗೆಯಲ್ಲಿ ನಂದಿಕೋಲು, ವೀರಗಾಸೆ ಕುಣಿತ, ಮಹಿಳೆಯರಿಂದ ಕುಂಭ ಕಳಸದೊಂದಿಗೆ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು. ಸಾಮೂಹಿಕ ವಿವಾಹಗಳು, ಧರ್ಮಸಭೆಯಲ್ಲಿ ಗಣ್ಯರು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ವಾರಣಾಸಿ ಡಾ. ಮಲ್ಲಿಕಾರ್ಜುನ ವಿಶ್ವರಾಧ್ಯ ಸ್ವಾಮೀಜಿ ಮಾತನಾಡಿ, ಭಕ್ತರು ವೈಭವದಿಂದ ಮೆರವಣಿಗೆ ನಡೆಸಿ ಎಲ್ಲರನ್ನು ಭಕ್ತಿ ಮಾರ್ಗಕ್ಕೆ ಕೊಂಡೊಯ್ದಿದಿದ್ದಾರೆ. ಶ್ರೀಮಠದ ಬಸವಲಿಂಗೇಶ್ವರ ಶ್ರೀಗಳ ಸಾಮಾಜಿಕ ಚಿಂತನೆ ಹಾಗೂ ಧಾರ್ಮಿಕ ಕಾರ್ಯ ನೋಡಿದರೇ ನಾಡಿನ ದೊಡ್ಡ ಮಠಗಳು ಮಾಡುತ್ತಿರುವಷ್ಟು ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಪ್ರತಿಯೊಬ್ಬರೂ ಜೀವನದಲ್ಲಿ ಧಾರ್ಮಿಕ ಮನೋಭಾವ ಬೆಳೆಸಿಕೊಳ್ಳಬೇಕು. ಒಳ್ಳೆಯ ಸಂಸ್ಕಾರ, ನಡತೆ ಮೈಗೂಡಿಸಿಕೊಂಡಾಗ ಜೀವನ ಸಾರ್ಥಕತೆಗೊಳ್ಳುತ್ತದೆ. ಭಕ್ತರ ಏಳಿಗೆ ಉದ್ಧಾರಕ್ಕಾಗಿ ಮಠಗಳು ಶ್ರಮಿಸುತ್ತಿವೆ. ೧೦ ದಿನಗಳ ಕಾಲ ಶ್ರೀಗಳ ಧಾರ್ಮಿಕ ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಸಿ ಭಕ್ತರು ಮಾದರಿಯಾಗಿದ್ದಾರೆ, ನೂತನವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನವಜೋಡಿಗಳು ಸಾಮರಸ್ಯದಿಂದ ಬದುಕು ನಡೆಸಬೇಕು. ಶ್ರೀಗಳು ಗೋಶಾಲೆ ತೆರೆದು ಜಾನುವಾರುಗಳ ಸೇವೆಗೆ ಕಂಕಣಬದ್ದರಾಗಿದ್ದಾರೆ.ಇಂತಹ ಮಠಕ್ಕೆ ಭಕ್ತರು ಸಹಾಯ,ಸಹಕಾರ ನೀಡಿ ಮಠದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದರು.

ಶ್ರೀಧರ ಮುರಡಿ ಹಿರೇಮಠದ ಶ್ರೀ ಬಸವಲಿಂಗೇಶ್ವರ ಸ್ವಾಮೀಜಿ ಮಾತನಾಡಿ, ಜಾತ್ಯಾತೀತವಾಗಿ ಭಕ್ತರು ಮಠದ ಏಳಿಗೆ ಬಯಸುತ್ತಿದ್ದಾರೆ. ಧರ್ಮದ ಕಾರ್ಯಗಳಿಗೆ ತನು-ಮನ-ಧನ ಅರ್ಪಿಸಿ ಭಕ್ತಿ ಮೆರೆಯುತ್ತಿದ್ದಾರೆ. ಶ್ರೀಮಠವು ಭಕ್ತರ ಕಲ್ಯಾಣಕ್ಕಾಗಿ ಸದಾ ನಿಂತಿದೆ ಎಂದರು.

ಈ ವೇಳೆ ವಿವಿಧ ಮಠಾಧೀಶರಾದ ಜಿಗೇರಿಯ ಗುರುಸಿದ್ದೇಶ್ವರ ಸ್ವಾಮೀಜಿ, ನವಲಗುಂದದ ಬಸವಲಿಂಗ ಸ್ವಾಮೀಜಿ, ರಾಜೂರು-ಆಡ್ನೂರನ ಪಂಚಾಕ್ಷರ ಸ್ವಾಮೀಜಿ, ಇಟಗಿ ಗುರುಶಾಂತವೀರ ಸ್ವಾಮೀಜಿ, ಬೇನಾಳ ಸದಾಶಿವ ಮಹಾಂತ ಸ್ವಾಮೀಜಿ, ಕುಕನೂರಿನ ಡಾ.ಮಹಾದೇವ ಸ್ವಾಮೀಜಿ, ರಬಕವಿ ಸಿದ್ದೇಶ್ವರ ಸ್ವಾಮೀಜಿ, ಕೊತಬಾಳ ಗಂಗಾಧರ ಸ್ವಾಮೀಜಿ ಸೇರಿದಂತೆ ವಿವಿಧ ಗಣ್ಯರು, ಭಕ್ತರು ಇದ್ದರು.