ಕನ್ನಡಪ್ರಭ ವಾರ್ತೆ ಮೇಲುಕೋಟೆ

ಚೆಲುವನಾರಾಯಣಸ್ವಾಮಿಯವರ ವೈರಮುಡಿ ಕಿರೀಟಧಾರಣ ಮಹೋತ್ಸವ ಸೇರಿದಂತೆ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನಡೆಸಲು ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ ಎಂದು ಅಪರ ಜಿಲ್ಲಾಧಿಕಾರಿ ಶಿವಾನಂದಮೂರ್ತಿ ತಿಳಿಸಿದರು.

ಮೇಲುಕೋಟೆಯಲ್ಲಿ ವೈರಮುಡಿ ಜಾತ್ರಾ ಮಹೋತ್ಸವದ ಪೂರ್ವಸಿದ್ಧತೆ ಪರಿಶೀಲಿಸಿ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಮಾರ್ಗದರ್ಶನ, ಡೀಸಿ ಡಾ.ಕುಮಾರ, ಶಾಸಕ ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡುತ್ತಿದೆ. ವೈರಮುಡಿ ಉತ್ಸವ ಮಾ.28ರ ಶನಿವಾರ ನಡೆಯಲಿದ್ದು, ಲಕ್ಷಾಂತರ ಭಕ್ತರು ಭಾಗವಹಿಸುವ ನಿರೀಕ್ಷೆ ಇದೆ ಎಂದರು.

ವೈರಮುಡಿ ಬ್ರಹ್ಮೋತ್ಸವದ ಎಲ್ಲಾ ಉತ್ಸವಗಳನ್ನು ವೈಭವವಾಗಿ ನಡೆಸಲು ಸಿದ್ಧತೆ ಮಾಡಲಾಗುತ್ತಿದೆ. ಮೇಲುಕೋಟೆಗೆ ಭಕ್ತರು ಬರಲು ರಾಜ್ಯ ರಸ್ತೆಸಾರಿಗೆ ನಿಗಮದಿಂದ 150 ಕ್ಕೂ ಹೆಚ್ಚು ವಿಶೇಷ ಬಸ್‌ಗಳನ್ನು ನಿಯೋಜಿಸಲಾಗಿದೆ. ಭದ್ರತೆಗಾಗಿ 1500 ಪೊಲೀಸರನ್ನು ನಿಯೋಜಿಸಲಾಗುತ್ತಿದೆ ಎಂದರು.

ನಿರಂತರ ಸ್ವಚ್ಛತೆ, ಕುಡಿಯುವ ನೀರಿನ ಪೂರೈಕೆ, ತಡೆರಹಿತ ವಿದ್ಯುತ್ ಸೌಕರ್ಯ ಸುಸಜ್ಜಿತ ವೈದ್ಯಕೀಯ ಸೇವೆ ವ್ಯವಸ್ಥೆ ಮಾಡಲಾಗಿದೆ. ವಯಸ್ಸಾದ ಭಕ್ತರು ಬಂದು ದರ್ಶನ ಮಾಡಲು ವಿಶೇಷ ವ್ಯವಸ್ಥೆ ಮಾಡಲಾಗಿದೆ. ವೈರಮುಡಿ ಉತ್ಸವದಂದು ಬೀದಿಗಳಲ್ಲಿರುವ ತೆರೆದ ಚರಂಡಿಯಲ್ಲಿ ಭಕ್ತರು ಬೀಳದಂತೆ ಚರಂಡಿ ಮೇಲ್ಬಾಗ ಮುಚ್ಚಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಭಕ್ತರ ವಾಹನಗಳಿಗೆ ವ್ಯವಸ್ಥಿತ ಪಾರ್ಕಿಂಗ್ ಸೌಲಭ್ಯ ಕಲ್ಪಿಸಲಾಗುತ್ತಿದೆ. ದೀಪಾಲಂಕಾರ ಮಾಡುವ ಕಾರ್ಯಗಳು ಭರದಿಂದ ಸಾಗಿವೆ ಎಂದರು.


ಇದೇ ವೇಳೆ ದೇಗುಲದ ಇಒ ಶೀಲಾ ಅವರನ್ನು ತರಾಟೆ ತೆಗೆದುಕೊಂಡು ಜಿಲ್ಲಾಡಳಿತದ ಅನುಮತಿ ಇಲ್ಲದೆ ಮುಜುಗರ ತರುವ ಕಾರ್ಯಮಾಡಬಾರದು ಎಂದು ಪರೋಕ್ಷವಾಗಿ ಆಹ್ವಾನ ಪತ್ರಿಕೆ ಗೊಂದಲದ ಬಗ್ಗೆ ಎಚ್ಚರಿಕೆ ನೀಡಿದರು. ದೇವಾಲಯದ ಮುಂಭಾಗ ಇರುವ ಉಪಯೋಗಕ್ಕೆ ಬಾರದ ಸೇವಾ ಕೌಂಟರ್, ಹಳೆಯ ಬ್ಯಾರಕೇಡ್ ಬೋರ್ಡ್ ಗಳನ್ನು ತಕ್ಷಣ ತೆಗೆಸಿ ಕೇಂದ್ರಸ್ಥಾನದಲ್ಲಿ ವಾಸ್ತವ್ಯ ಮಾಡಿ ಉತ್ಸವದ ವ್ಯವಸ್ಥೆ ಬಗ್ಗೆ ಕಾಳಜಿವಹಿಸಿ ಎಂದು ಸೂಚಿಸಿದರು.

ಈ ವೇಳೆ ಪಾಂಡವಪುರ ತಹಸೀಲ್ದಾರ್ ಬಸವರಾಜ ರೆಡ್ಡಪ್ಪ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪರಮೇಶ್ ಗೌಡ ಸೇರಿದಂತೆ ವಿವಿಧ ಅಧಿಕಾರಿಗಳು ಭಾಗವಹಿಸಿದ್ದರು.ಇಂದು ಕಿಕ್ಕೇರಮ್ಮನ ರಥೋತ್ಸವ

ಕಿಕ್ಕೇರಿ: ಕಿಕ್ಕೇರಿ-ಲಕ್ಷ್ಮೀಪುರ ಅವಳಿ ಗ್ರಾಮದ ಕಿಕ್ಕೇರಮ್ಮನವರ ಜಾತ್ರಾ ಮಹೋತ್ಸವದ ರಥೋತ್ಸವ ಮಾ.25ರ ಸಂಜೆ ಸಹಸ್ರಾರು ಭಕ್ತರ ಸಂಗಮದಲ್ಲಿ ನೆರವೇರಲಿದೆ. ರಥೋತ್ಸವದ ಹಿನ್ನೆಲೆಯಲ್ಲಿ ಗ್ರಾಮಗಳಲ್ಲಿ ತಳಿರು ತೋರಣ, ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಸುಮಾರು 2 ಕಿ.ಮೀ.ದೂರದಷ್ಟು ದೇವಿಯರಥ ಎಳೆಯುವುದು ವಿಶೇಷವಾಗಿದೆ. ತದನಂತರ ದೇಗುಲದ ಮೂಲಸ್ಥಾನಕ್ಕೆ ಅಮ್ಮನವರು ಸೇರಲಿದ್ದು, ರಾತ್ರಿ ನಡೆಯುವ ವಿವಿಧ ಪೂಜಾ ಕೈಂಕರ್ಯಕ್ಕೆ ಸಹಸ್ರಾರು ಭಕ್ತರು ದಂಡಿಯಾಗಿ ಸೇರಲಿದ್ದಾರೆ. ಜಾತ್ರೆಯ ರಾತ್ರಿ ಲಕ್ಷ್ಮೀಪುರ ಗ್ರಾಮಸ್ಥರಿಂದ ನಡೆಯಲಿರುವ ಕುರುಕ್ಷೇತ್ರ ನಾಟಕ, ಮರುದಿನ ಹೂವಿನ ಪಲ್ಲಕ್ಕಿಉತ್ಸವ, ತದನಂತರ ಓಕುಳಿ ಹಬ್ಬ, ವಸಂತನ ಕುಣಿತ, ತೆಪ್ಪೋತ್ಸವ ವಿಶೇಷವಾಗಿದೆ.