ನ.20ರಂದು ಸಂಡೂರಿನಲ್ಲಿ ಗಣಿ ಕಾರ್ಮಿಕರ ಜಿಲ್ಲಾ ಸಮ್ಮೇಳನ

| Published : Nov 16 2025, 02:45 AM IST

ನ.20ರಂದು ಸಂಡೂರಿನಲ್ಲಿ ಗಣಿ ಕಾರ್ಮಿಕರ ಜಿಲ್ಲಾ ಸಮ್ಮೇಳನ
Share this Article
  • FB
  • TW
  • Linkdin
  • Email

ಸಾರಾಂಶ

ಗಣಿ ಕಾರ್ಮಿಕರನ್ನು ಕಾಯಂಗೊಳಿಸಬೇಕು. ಅಲ್ಲಿಯವರೆಗೂ ಸೇವಾಭದ್ರತೆ ನೀಡಬೇಕು.

ಬಳ್ಳಾರಿ: ಎಐಯುಟಿಯುಸಿಗೆ ಸಂಯೋಜನೆಗೊಂಡ ಸಂಯುಕ್ತ ಗಣಿ ಕಾರ್ಮಿಕರ ಸಂಘದಿಂದ ಸಂಡೂರಿನ ಅಂಬೇಡ್ಕರ್ ಭವನದಲ್ಲಿ ನ.20ರಂದು ಗಣಿ ಕಾರ್ಮಿಕರ ಜಿಲ್ಲಾ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಯುಕ್ತ ಗಣಿ ಕಾರ್ಮಿಕರ ಸಂಘದ ಉಪಾಧ್ಯಕ್ಷ ಎ.ದೇವದಾಸ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗಣಿ ಕಾರ್ಮಿಕರನ್ನು ಕಾಯಂಗೊಳಿಸಬೇಕು. ಅಲ್ಲಿಯವರೆಗೂ ಸೇವಾಭದ್ರತೆ ನೀಡಬೇಕು. ಗುತ್ತಿಗೆದಾರರು ಬದಲಾದರೂ ಈಗ ಇರುವ ಗುತ್ತಿಗೆ ಕಾರ್ಮಿಕರನ್ನೇ ಕೆಲಸದಲ್ಲಿ ಮುಂದುವರೆಸಬೇಕು. ಕಾಯಂ ನೇಮಕಾತಿಯಲ್ಲಿ ಸ್ಥಳೀಯರಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸೂಕ್ತ ಕಾನೂನು ರೂಪಿಸಬೇಕು. ಕನಿಷ್ಠ ವೇತನ, ರಜೆ, ಬೋನಸ್, ಪಿಎಫ್ ಮುಂತಾದ ಕಾನೂನುಬದ್ಧ ಸೌಲಭ್ಯಗಳನ್ನು ಖಾತ್ರಿಪಡಿಸಬೇಕು. ಗಣಿಬಾಧಿತ ಈ ಪ್ರದೇಶದಲ್ಲಿ ಕೇಂದ್ರ ಸರ್ಕಾರದ ಸುಸಜ್ಜಿತ ವೆಲ್‌ಫೇರ್ ಆಸ್ಪತ್ರೆ ಆರಂಭಿಸಬೇಕು. ಕೆ.ಎಂ.ಇ.ಆರ್.ಸಿ ಫಂಡ್‌ನ್ನು ಸಮರ್ಪಕವಾಗಿ ಬಳಸಿ, ಕೆಲಸ ಕಳೆದುಕೊಂಡ ಗಣಿ ಕಾರ್ಮಿಕರ ಜೀವನೋಪಾಯಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು. ಗಣಿಕಾರ್ಮಿಕರಿಗೆ ಉತ್ತಮ ಆರೋಗ್ಯ ವ್ಯವಸ್ಥೆ ನೀಡಬೇಕು ಹಾಗೂ ಅವರ ಮಕ್ಕಳ ಶಿಕ್ಷಣಕ್ಕೆ ಸೂಕ್ತ ಸೌಲಭ್ಯ ನೀಡಬೇಕು ಮುಂತಾದ ಬೇಡಿಕೆಗಳಿಗಾಗಿ ಒತ್ತಾಯಿಸಿ ಸಮ್ಮೇಳನವನ್ನು ಸಂಘಟಿಸಲಾಗಿದೆ.

ಈ ಸಮ್ಮೇಳನಕ್ಕೆ ಸಂಡೂರು, ಬಳ್ಳಾರಿ ಹಾಗೂ ಹೊಸಪೇಟೆಯ ಗಣಿ ಕಾರ್ಮಿಕರು ಭಾಗವಹಿಸಲಿದ್ದಾರೆ. ಸಮ್ಮೇಳನದ ಸಭೆಯ ಮುನ್ನ ಮೆರವಣಿಗೆ ನಡೆಯಲಿದೆ. ಸಂಡೂರಿನ ಎಪಿಎಂಸಿಯಿಂದ ಆರಂಭಗೊಂಡು ಪ್ರಮುಖ ರಸ್ತೆಗಳ ಮೂಲಕ ಸಂಚರಿಸಿ ಸಮ್ಮೇಳನ ಜರುಗುವ ಅಂಬೇಡ್ಕರ್ ಭವನಕ್ಕೆ ಸಾಗಲಿದೆ. ಸಮ್ಮೇಳನದಲ್ಲಿ ಗಣಿ ಕಾರ್ಮಿಕರು ಎದುರಿಸುತ್ತಿರುವ ನಾನಾ ಸಮಸ್ಯೆ ಹಾಗೂ ಪರಿಹಾರಗಳ ಕುರಿತು ವಿಸ್ತೃತ ಚರ್ಚೆಗಳು ನಡೆಯಲಿದ್ದು, ಕೊನೆಯಲ್ಲಿ ಗೊತ್ತುವಳಿ ಮಂಡಿಸಲಾಗುವುದು.

ಈ ಸಮ್ಮೇಳನಕ್ಕೆ ಮುಖ್ಯ ಭಾಷಣಕಾರರಾಗಿ ಸಂಯುಕ್ತ ಗಣಿ ಕಾರ್ಮಿಕ ಸಂಘದ ಅಧ್ಯಕ್ಷರು ಹಾಗೂ ಎಐಯುಟಿಯುಸಿ ರಾಜ್ಯ ಅಧ್ಯಕ್ಷರಾದ ಕೆ.ಸೋಮಶೇಖರ್ ಅವರು ಆಗಮಿಸಲಿದ್ದಾರೆ. ಭಾಷಣಕಾರರಾಗಿ ಎಐಯುಟಿಯುಸಿ ರಾಜ್ಯ ಕಾರ್ಯದರ್ಶಿ ಕೆ.ಸೋಮಶೇಖರ್ ಯಾದಗಿರಿ, ಜಿಲ್ಲಾ ಕಾರ್ಯದರ್ಶಿ ಡಾ.ಪ್ರಮೋದ್.ಎನ್ ಆಗಮಿಸಲಿದ್ದಾರೆ. ಪ್ರಾಸ್ತಾವಿಕವಾಗಿ ಸಂಯುಕ್ತ ಗಣಿ ಕಾರ್ಮಿಕರ ಸಂಘದ ಜಿಲ್ಲಾ ಕಾರ್ಯದರ್ಶಿ ಸೋಮಶೇಖರ ಗೌಡ ಮಾತನಾಡಲಿದ್ದಾರೆ. ಸಮ್ಮೇಳನದಲ್ಲಿ 500 ಕಾರ್ಮಿಕರು ಪ್ರತಿನಿಧಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಸಂಯುಕ್ತ ಗಣಿ ಕಾರ್ಮಿಕ ಸಂಘದ ಕಾರ್ಯದರ್ಶಿ ಆರ್.ಸೋಮಶೇಖರ ಗೌಡ, ಎಐಯುಟಿಯುಸಿ ಜಿಲ್ಲಾ ಕಾರ್ಯದರ್ಶಿ ಡಾ.ಪ್ರಮೋದ್, ಉಪಾಧ್ಯಕ್ಷರಾದ ಎ.ಶಾಂತಾ, ಜಂಟಿ ಕಾರ್ಯದರ್ಶಿ ಸುರೇಶ್, ಮುಖಂಡರಾದ ಶರ್ಮಾಸ್, ಕಿರಣ್ ಕುಮಾರ್, ಮುರಳಿಕೃಷ್ಣ, ಕೊಟ್ರೇಶ್, ಸುರೇಶ್, ಹೇಮಣ್ಣ ಸುದ್ದಿಗೋಷ್ಠಿಯಲ್ಲಿದ್ದರು. ಇದೇ ವೇಳೆ ಕಾರ್ಮಿಕರ ಜಿಲ್ಲಾ ಸಮ್ಮೇಳನದ ಪೋಸ್ಟರ್‌ನ್ನು ಸಂಘಟನೆಯ ಮುಖಂಡರು ಬಿಡುಗಡೆಗೊಳಿಸಿದರು.