ರೇವಣ್ಣ, ಪ್ರಜ್ವಲ್ ಬಂಧನಕ್ಕೆ ಹಾಸನದಲ್ಲಿ ಜಿಲ್ಲಾ ಜನಪರ ಒಕ್ಕೂಟ ಆಗ್ರಹ

| Published : Apr 30 2024, 02:12 AM IST / Updated: Apr 30 2024, 02:13 AM IST

ರೇವಣ್ಣ, ಪ್ರಜ್ವಲ್ ಬಂಧನಕ್ಕೆ ಹಾಸನದಲ್ಲಿ ಜಿಲ್ಲಾ ಜನಪರ ಒಕ್ಕೂಟ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಜ್ವಲ್‌ ರೇವಣ್ಣ ಅವರನ್ನು ಶಿಕ್ಷೆಗೊಳಪಡಿಸಿ ಸಂತ್ರಸ್ತ ಮಹಿಳೆಯರನ್ನು ರಕ್ಷಿಸುವಂತೆ ಆಗ್ರಹಿಸಿ ಜಿಲ್ಲಾ ಜನಪರ ಚಳವಳಿಗಳ ಒಕ್ಕೂಟದಿಂದ ಸೋಮವಾರ ಹಾಸನದ ಜಿಲ್ಲಾಧಿಕಾರಿ ಆವರಣದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಸಿ.ಸತ್ಯಭಾಮ ಅವರಿಗೆ ಮನವಿ ಸಲ್ಲಿಸಲಾಯಿತು.

ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ । ಪ್ರಕರಣದ ತುರ್ತು ವಿಚಾರಣೆಗೆ ವಕೀಲ ದೇವರಾಜೇಗೌಡ ಒತ್ತಾಯ

ಕನ್ನಡಪ್ರಭ ವಾರ್ತೆ ಹಾಸನ

ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶದಿಂದ ಓಡಿಹೋಗಿರುವ ಪ್ರಜ್ವಲ್ ರೇವಣ್ಣ ಮತ್ತು ಎಚ್.ಡಿ.ರೇವಣ್ಣ ಅವರನ್ನು ಕೂಡಲೇ ಬಂಧಿಸಿ ಸೂಕ್ತ ತನಿಖೆ ನಡೆಸಿ, ಶಿಕ್ಷೆಗೊಳಪಡಿಸಿ ಸಂತ್ರಸ್ತ ಮಹಿಳೆಯರನ್ನು ರಕ್ಷಿಸುವಂತೆ ಆಗ್ರಹಿಸಿ ಜಿಲ್ಲಾ ಜನಪರ ಚಳವಳಿಗಳ ಒಕ್ಕೂಟದಿಂದ ಸೋಮವಾರ ನಗರದ ಜಿಲ್ಲಾಧಿಕಾರಿ ಆವರಣದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಸಿ.ಸತ್ಯಭಾಮ ಅವರಿಗೆ ಮನವಿ ಸಲ್ಲಿಸಲಾಯಿತು.

ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಹೊರಟ ಪ್ರತಿಭಟನಾಕಾರರು ಎನ್.ಆರ್.ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ಬಂದರು. ಪ್ರಜ್ವಲ್‌ ರೇವಣ್ಣ ಹಾಗೂ ಎಚ್‌.ಡಿ.ರೇವಣ್ಣ ಅವರ ಬಂಧನಕ್ಕೆ ಆಗ್ರಹಿಸಿ ಘೋಷಣೆ ಕೂಗಲಾಯಿತು.

ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್ ಮತ್ತು ಕೆ.ಎಸ್.ವಿಮಲಾ ಮಾತನಾಡಿ, ‘ಕೆಲ ದಿನಗಳಿಂದ ಹಾಸನದಲ್ಲಿ ಪೆನ್‌ಡ್ರೈವ್ ಮುಖಾಂತರ ಅಶ್ಲೀಲ ಚಿತ್ರಗಳು ಮತ್ತು ದೃಶ್ಯಗಳನ್ನು ಹಂಚಲಾಗುತ್ತಿದೆ. ಆ ಲೈಂಗಿಕ ಚಿತ್ರಗಳು ಮತ್ತು ದೃಶ್ಯಗಳು ವಾಟ್ಸಾಪ್‌ಗಳಲ್ಲಿ ಹರಿದಾಡುತ್ತಿವೆ. ಈ ವಿಚಾರ ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಚರ್ಚೆಗೊಳಗಾಗುತ್ತಿದ್ದು, ಎಲ್ಲೆಡೆ ಈ ಕೃತ್ಯದ ಕುರಿತು ಸಾರ್ವಜನಿಕರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಪ್ರಕರಣದ ಪ್ರಮುಖ ಆರೋಪಿ ಎಂದು ಹೇಳಲಾಗುತ್ತಿರುವ ಪ್ರಜ್ವಲ್ ರೇವಣ್ಣ, ಎಚ್.ಡಿ.ರೇವಣ್ಣರನ್ನು ಕೂಡಲೇ ಬಂಧಿಸಿ ವಿಚಾರಣೆ ನಡೆಸಬೇಕು’ ಎಂದು ಒತ್ತಾಯಿಸಿದರು.

‘ಇಡೀ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿದ ರಾಜ್ಯ ಸರ್ಕಾರದ ಕ್ರಮವನ್ನು ಹಾಸನ ಜಿಲ್ಲಾ ಜನಪರ ಚಳುವಳಿಗಳ ಒಕ್ಕೂಟ ಸ್ವಾಗತಿಸುತ್ತದೆ. ಯಾವುದೇ ಒತ್ತಡಗಳಿಗೆ ಮಣಿಯದೆ, ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ರಕ್ಷಣೆ ಮತ್ತು ನ್ಯಾಯವನ್ನು ಒದಗಿಸಿಕೊಡಬೇಕು ಎಂದು ಮನವಿ ಮಾಡಿಕೊಳ್ಳುತ್ತೇವೆ. ಈತನ ಈ ಕುಕೃತ್ಯದಿಂದಾಗಿ ಹಲವಾರು ಮಹಿಳೆಯರ ಬದುಕು ಛಿದ್ರಗೊಳ್ಳುತ್ತಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

ಪ್ರಕರಣದ ತನಿಖೆಗೆ ಹಾಗೂ ಆರೋಪಿಗಳ ಬಂಧನಕ್ಕೆ ಅಗತ್ಯವಿರುವ ಎಲ್ಲಾ ರೀತಿಯ ಅಧಿಕಾರ ಮತ್ತು ಸೂಕ್ತ ವ್ಯವಸ್ಥೆಯನ್ನು ಎಸ್‌ಐಟಿಗೆ ಒದಗಿಸಬೇಕು. ಇಡೀ ಪ್ರಕರಣದ ತನಿಖೆಗೆ ಜನಸ್ನೇಹಿ ಹಾಗೂ ಮಹಿಳಾಪರ ಸಂವೇದನೆ ಹೊಂದಿರುವ ಪೋಲೀಸು ಅಧಿಕಾರಿಗಳನ್ನು ಬಳಸಿಕೊಳ್ಳಬೇಕು. ಮೊಬೈಲ್ ಮತ್ತು ಪೆನ್‌ಡೈವ್‌ಗಳನ್ನು ವಶಪಡಿಸಿಕೊಳ್ಳಬೇಕು ಹಾಗೂ ಅವುಗಳು ಸಾರ್ವಜನಿಕವಾಗಿ ಮತ್ತಷ್ಟು ಹಂಚಿಕೆಯಾಗದಂತೆ ತಡೆಗಟ್ಟಿ ಅವುಗಳನ್ನು ನಾಶಪಡಿಸಬೇಕು. ಇಡೀ ಪ್ರಕರಣದ ತನಿಖೆಯಲ್ಲಿ ಹಾಗೂ ಆರೋಪಿಗಳನ್ನು ಬಂಧಿಸುವ ಯಾವುದೇ ರಾಜಕೀಯ ಪ್ರಭಾವ ಹಾಗೂ ಒತ್ತಡಕ್ಕೆ ಒಳಗಾಗದಂತೆ ಎಸ್‌ಐಟಿ ಕೆಲಸ ಮಾಡುವುದನ್ನು ರಾಜ್ಯ ಸರ್ಕಾರ ಖಾತ್ರಿಪಡಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಜನಪರ ಚಳುವಳಿಗಳ ಒಕ್ಕೂಟದ ದೇವಿ, ಗೌರಮ್ಮ, ಜೆಎಂಎಸ್, ಶೋಭಾ ರಾಜ್ಯ ಕಾರ್ಯದರ್ಶಿ ಎಐಎಂ ಎಸ್.ಎಸ್, ವಿಮಲ, ಅಖಿಲ ವಿದ್ಯಾಸಂದ್ರ, ಸವಿತಾ, ಸುಶೀಲಾ ಸಮತಾ ವೇದಿಕೆ, ಮೈಸೂರು. ಸಬಿಹಾ ಭೂಮಿಗೌಡ, ಸುಶೀಲ, ರೂಪ ಹಾಸನ, ಮಮತಾ ಶಿವು, ಸೌಮ್ಯ, ಧರ್ಮೇಶ್, ಅರವಿಂದ, ಸಂದೇಶ್ ದಸಂಸ, ವಿಜಯ್ ಕುಮಾರ್ ಮಾದಿಗ ದಂಡೋರ, ಮುಬಶೀರ್ ಅಹಮದ್, ಸಿಐಟಿಯು ಪುಷ್ಪ, ಜಯಂತಿ, ಸಾಹಿತಿ ಸುವರ್ಣ, ಕಲಾವಿದ ಶಿವಪ್ರಸಾದ್, ಡಿವೈಎಫ್‌ಐ ಪೃಥ್ವಿ, ಕೆಪಿಆರ್‌ಎಸ್ ಜಿಲ್ಲಾಧ್ಯಕ್ಷ ಎಚ್.ಆರ್.ನವೀನ್, ಅಬ್ದುಲ್ ಸಮದ್, ದಸಂಸ ಎಸ್.ಎನ್. ಮಲ್ಲಪ್ಪ, ಕೃಷ್ಣ ದಾಸ್, ಎಂ.ಸಿ.ಡೋಂಗ್ರೆ, ಧರ್ಮರಾಜ್ ಇದ್ದರು.

ಪಾಪದ ಕೊಡ ತುಂಬಿದಾಗಲೇ ಶಿಕ್ಷೆ

ಜಿಲ್ಲಾಧಿಕಾರಿ ಸಿ. ಸತ್ಯಭಾಮ ಅವರು ಮನವಿ ಸ್ವೀಕರಿಸಿದ ನಂತರ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿ, ‘ಸಂತ್ರಸ್ತರು ತಮ್ಮ ಕಚೇರಿಗೆ ಬಂದು ದೂರು ಕೊಡಬೇಕು. ಪಾಪದ ಕೊಡ ತುಂಬಿದಾಗಲೇ ಗೊತ್ತಾಗುತ್ತದೆ. ಶಿಶುಪಾಲನಿಗೆ ಕೃಷ್ಣನು ನೂರು ತಪ್ಪು ಮಾಡಲು ಅವಕಾಶ ಕೊಟ್ಟಿದ್ದು, ನೂರ ಒಂದು ತಪ್ಪು ಮಾಡಲು ಅವಕಾಶ ಕೊಡಲಿಲ್ಲ. ಈ ವಿಚಾರ ನಮಗೂ ಗೊತ್ತಿರಲಿಲ್ಲ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಮ್ಮ ಕಡೆಯಿಂದಲೂ ಸೂಕ್ತವಾದ ಸಹಕಾರ ಕೊಡಲಾಗುವುದು. ಎಸ್‌ಐಟಿ ಅವರು ಈ ಪ್ರಕರಣವನ್ನು ತನಿಖೆ ಮಾಡಲಿದೆ. ಹಾಗೆಯೇ ದೂರು ಕೊಟ್ಟ ಮಹಿಳೆಯರು ಕೂಡ ದಿಟ್ಟವಾಗಿರಬೇಕು ಎಂದು ಹೇಳಿದರು.