ಸಾರಾಂಶ
ಶಿರಸಿ:
ಈ ದಿವ್ಯಾಂಗ ಯುವತಿ ಕಳೆದ 8 ವರ್ಷಗಳಿಂದ ನೋಟ್ ಬುಕ್ ನಲ್ಲಿ ಶ್ರೀ ರಾಮನ ನಾಮ ಬರೆಯುತ್ತಲೇ ಇದ್ದಾಳೆ. ಹಗಲಿಡೀ ಬರೆಯುವ ಈಕೆ ಇದುವರೆಗೂ ಸಾವಿರಾರು ನೋಟ್ ಬುಕ್‌ಗಳನ್ನು ರಾಮನ ನಾಮದಲ್ಲಿಯೇ ತುಂಬಿಸಿದ್ದಾಳೆ.ತಾಲೂಕಿನ ನೆಗ್ಗು ಗ್ರಾಮ ಪಂಚಾಯಿತಿ ತುಡುಗುಣಿಯ ಯುವತಿ ಸುವರ್ಣ ಸತ್ಯನಾರಾಯಣ ಭಟ್ ಈ ರಾಮ ಭಕ್ತೆ. ಹುಟ್ಟಿ ಕೇವಲ ನಾಲ್ಕೈದು ದಿನಗಳಲ್ಲಿಯೇ ಕಾಮಾಲೆ ರೋಗಕ್ಕೆ ಒಳಗಾಗಿ ದೇಹದ ಒಂದು ಭಾಗದ ಸ್ವಾಧೀನ ಕಳೆದುಕೊಂಡಿದ್ದಾರೆ. ಮಾತೂ ಸ್ಪಷ್ಟವಾಗಿ ಬಾರದಿದ್ದಾಗ ಶಾಲೆಗೆ ತೆರಳಲು ಆಕೆಗೆ ಸಾಧ್ಯವಾಗಲಿಲ್ಲ. ಆದರೆ, ಬಾಲ್ಯದಿಂದಲೂ ಶ್ರೀ ರಾಮನ ಪರಮ ಭಕ್ತೆಯಾಗಿ ಬೆಳೆದಿದ್ದಾಳೆ ಸುವರ್ಣಾ ಭಟ್. ಆಕೆಯ ಸಂಬಂಧಿಯೋರ್ವರು ಶ್ರೀ ರಾಮನ ನಾಮವನ್ನು ಹೇಗೆ ಬರೆಯುವುದು ಎಂದು ಆಕೆಗೆ ಕಲಿಸಿಕೊಟ್ಟಿದ್ದಾರೆ. ಆ ಬಳಿಕ ಸಿಕ್ಕ ಸಿಕ್ಕ ಪೇಪರ್, ಹಾಳೆಯ ಮೇಲೆ ಆಕೆ ರಾಮನ ನಾಮವನ್ನು ಬರೆಯುತ್ತ ಸಾಗಿದ್ದಾಳೆ.ರಾಮ ನಾಮ ಬರೆಯುವ ಆಕೆಯ ಆಸಕ್ತಿಯನ್ನು ಗಮನಿಸಿದ ಸ್ಥಳೀಯ ಶಾರದಾ ಎನ್ನುವವರು ಆಕೆಗೆ ಒಂದಿಷ್ಟು ನೋಟ್ ಬುಕ್, ಪೆನ್ನು, ಪೆನ್ಸಿಲ್ ಪೂರೈಸಿದ್ದಾರೆ. ಆದರೆ, ಅದೂ ಕೆಲ ದಿನಗಳಲ್ಲಿಯೇ ಖಾಲಿಯಾಗಿತ್ತು. ಆದರೆ, ಶಾರದಾ ಸುವರ್ಣಾಳ ಆಸಕ್ತಿ ಗಮನಿಸಿ ಆಕೆ ರಾಮ ನಾಮ ಬರೆದಷ್ಟೂ ನೋಟ್ ಬುಕ್, ಪೆನ್ನುಗಳನ್ನೂ ಪೂರೈಸಿದ್ದಾರೆ. ಮನೆಯಲ್ಲಿ ರಾಮ ನಾಮ ಹೊಂದಿದ ಪಟ್ಟಿಗಳ ರಾಶಿಯೇ ಆದಾಗ ಅವುಗಳನ್ನು ಏನು ಮಾಡಬೇಕು ಎಂಬುದೂ ಕುಟುಂಬವನ್ನು ಕಾಡಿತು. ತಾಯಿ ಗಂಗಾ ಭಟ್ ರಾಮತಾರಕ ಜಪ ನಡೆಯುವ ಸ್ಥಳಗಳನ್ನು ಸಂಪರ್ಕಿಸಿ, ಆ ಪಟ್ಟಿಗಳನ್ನು ಸಮರ್ಪಿಸುತ್ತಿದ್ದಾರೆ. ಕಾರಣಾಂತರಗಳಿಂದ ತುಡುಗುಣಿ ನಿವಾಸ ತ್ಯಜಿಸಿ ಶಿರಸಿಯ ಕೆಎಚ್‌ಬಿ ಕಾಲನಿಯಲ್ಲಿ ಕುಟುಂಬ ಬಾಡಿಗೆ ಮನೆಯಲ್ಲಿ ವಾಸವಾದರೂ ಸುವರ್ಣಾಳ ರಾಮನಾಮ ಬರವಣಿಗೆಗೆ, ಧ್ಯಾನಕ್ಕೆ ಯಾವುದೇ ಅಡಚಣೆ ಉಂಟಾಗಿಲ್ಲ.ಶ್ರೀ ರಾಮ ತನ್ನ ಜೀವನದಲ್ಲಿ ಬಂದೇ ಬರುತ್ತಾನೆ. ಶಕ್ತಿ ಇರದ ದೇಹಕ್ಕೆ ಮತ್ತೆ ಶಕ್ತಿ ತುಂಬುತ್ತಾನೆ. ರಾಮ ನಾಮವನ್ನು ಸ್ಪಷ್ಟವಾಗಿ ಉಚ್ಛರಿಸುವ ಶಕ್ತಿಯನ್ನು ತನಗೆ ನೀಡೇ ನೀಡುತ್ತಾನೆ ಎನ್ನುವುದು ಸುವರ್ಣಾ ಭಟ್ ಅವರ ಅಚಲ ಭಕ್ತಿ.
;Resize=(128,128))
;Resize=(128,128))
;Resize=(128,128))
;Resize=(128,128))