ಸದಾಶಿವ ಆಯೋಗದ ವರದಿ ಕೇಂದ್ರಕ್ಕೆ ಶಿಫಾರಸು ಬೇಡ

| Published : Feb 10 2024, 01:45 AM IST

ಸಾರಾಂಶ

ಚಿತ್ತಾಪುರ ತಾಲೂಕು ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟದ ತಾಲೂಕು ಅಧ್ಯಕ್ಷ ಮಹೇಶ ಕಾಶಿ ನೇತೃತ್ವದಲ್ಲಿ ನ್ಯಾ. ಎ.ಜೆ ಸದಾಶಿವ ಆಯೊಗದ ವರದಿ ಜಾರಿಗೆ ಬರದಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿ ತಹಸೀಲ್ದಾರ್‌ ಮೂಲಕ ಮುಖ್ಯಮಂತ್ರಿಗೆ ಮನವಿ ಪತ್ರ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಚಿತ್ತಾಪುರ

ಅಸ್ಪಷ್ಟ, ಅಸಂವಿಧಾನಿಕ ಮತ್ತು ಅವಾಸ್ತವಿಕ ಅಂಶಗಳನ್ನು ಒಳಗೊಂಡಿರುವ ನ್ಯಾ. ಎ.ಜೆ ಸದಾಶಿವ ಆಯೊಗದ ವರದಿಯನ್ನು ರಾಜ್ಯ ಸರ್ಕಾರವು ಏಕಪಕ್ಷೀಯವಾಗಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬಾರದು ಎಂದು ತಾಲೂಕು ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟದ ಅಧ್ಯಕ್ಷ ಮಹೇಶ ಕಾಶಿ ಒತ್ತಾಯಿಸಿದರು.

ಪಟ್ಟಣದ ಅಂಬೇಡ್ಕರ್‌ ವೃತ್ತದಿಂದ ನಡೆದ ಬೃಹತ್ ಪ್ರತಿಭಟನೆ ಮೆರವಣಿಗೆ ತಹಸೀಲ್ದಾರ್‌ ಕಚೇರಿ ತಲುಪಿದ ನಂತರ ಪ್ರತಿಭಟನೆಕಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಆ ವರದಿಯಲ್ಲಿ ನಾಡಿನ ಬಂಜಾರ, ಬೋವಿ, ಕೊರಚ, ಕೊರಮ, ಅಲೆಮಾರಿ ಸೇರಿದಂತೆ ಹಲವು ಸಮುದಾಯಗಳ ಸಾಂವಿಧಾನಿಕ ಹಕ್ಕನ್ನು ಅಭದ್ರಗೊಳಿಸುವ ಹುನ್ನಾರವು ಕೆಲವು ಪಟ್ಟಬದ್ರ ಹಿತಾಸಕ್ತಿಗಳು ವ್ಯವಸ್ಥಿತವಾಗಿ ಮಾಡಿ ಆ ಸಮಾಜಕ್ಕೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಆರೊಪಿಸಿದರು.

ಹಿಂದಿನ ಸರ್ಕಾರದ ಅವೈಜ್ಞಾನಿಕ ತೀರ್ಮಾನವನ್ನು ವಿರೋಧಿಸಿ ನಾಡಿನ ಬಂಜಾರ, ಬೊವಿ, ಕೊರಮ,ಕೊರಚ ಅಲೆಮಾರಿ ಸಮುದಾಯಗಳು ರಾಜ್ಯವ್ಯಾಪಿ ಜಂಟಿಯಾಗಿ ಪ್ರಬಲ ಹೋರಾಟಗಳನ್ನು ಸಂಘಟಿಸಿದ್ದೇವು. ಜನಜಾಗೃತಿ ಅಭಿಯಾನ ನಡೆಸಿ ರಾಜ್ಯದ ೪೨ಕ್ಕೂ ಹೆಚ್ಚು ವಿಧಾನಸಭೆ ಕ್ಷೇತ್ರಗಳಲ್ಲಿ ನಮ್ಮ ಚುನಾವಣೆ ಒಗ್ಗಟ್ಟನ್ನು ಪ್ರದರ್ಶನ ಮಾಡಿ ಯಶಸ್ವಿಯಾಗಿದ್ದೇವೆ.

ನಮ್ಮ ಸಮಾಜ ಅತಿ ಹಿಂದುಳಿದ ಸಮಾಜಗಳಾಗಿದ್ದು, ರಾಜ್ಯದ ಕ್ಷೇತ್ರ ಮತ್ತು ದಮನಿತ ಸಮುದಾಯಗಳ ಐಕ್ಯತೆ, ಅಭಿವೃದ್ಧಿ ಮತ್ತು ಆಸಕ್ತಿಯುಳ್ಳ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ನಮ್ಮ ಸಮುದಾಯಗಳ ಹಿತರಕ್ಷಣೆ ಮಾಡುತ್ತದೆ ಎಂದು ಭಾವಿಸಿದ್ದೇವೆ. ನ್ಯಾ. ಎ.ಜೆ ಸದಾಶಿವ ಆಯೋಗದ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡದಂತೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿ ಪತ್ರವನ್ನು ತಹಸೀಲ್ದಾರ್‌ ಸೈಯದ ಷಾಷವಲ್ಲಿ ಮೂಲಕ ಮುಖ್ಯಮಂತ್ರಿಗೆ ಸಲ್ಲಿಸಿದರು.

ಮುಖಂಡರಾದ ಜಗದೀಶ ಚವ್ವಾಣ, ಗೊಪಾಲ ರಾಠೋಡ, ಮದನ್ ರಾಠೋಡ, ಹಣಮಂತ ಕಟ್ಟಮನಿ, ಭೀಮಸಿಂಗ್ ಚವ್ವಾಣ, ಚಂದ್ರಶೇಖರ ಕಾಶಿ, ನಾಮದೇವ ರಾಠೋಡ, ಮನೋಜ್ ರಾಠೋಡ, ಸುಭಾಶ ಕಾಶಿ, ಮಹೇಶ ಎನ್.ಕಾಶಿ, ಸುಭಾಶ್ಚಂದ್ರ ಪವಾರ್, ಸಾಬಣ್ಣ ಕಾಶಿ ಸೇರಿದಂತೆ ಇತರರು ಇದ್ದರು.