ಇಫ್ಕೋ ನಿರ್ದೇಶಕರಾಗಿ ಡಾ.ಎಂ.ಎನ್‌.ರಾಜೇಂದ್ರ ಕುಮಾರ್‌ ಅವಿರೋಧ ಆಯ್ಕೆ

| Published : May 05 2024, 02:02 AM IST

ಇಫ್ಕೋ ನಿರ್ದೇಶಕರಾಗಿ ಡಾ.ಎಂ.ಎನ್‌.ರಾಜೇಂದ್ರ ಕುಮಾರ್‌ ಅವಿರೋಧ ಆಯ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರತಿಷ್ಠಿತ ಇಫ್ಕೋ ಸಂಸ್ಥೆಯಲ್ಲಿ ೨ನೇ ಅವಧಿಗೆ ನಿರ್ದೇಶಕರಾಗಿ ಡಾ. ಎಂ.ಎನ್.ರಾಜೇಂದ್ರ ಕುಮಾರ್‌ರವರು ಅವಿರೋಧವಾಗಿ ಆಯ್ಕೆಗೊಂಡಿರುವುದು ಜಿಲ್ಲೆಯ ಸಹಕಾರಿ ಬಂಧುಗಳಿಗೆ ಅತೀವ ಸಂತೋಷವನ್ನು ತಂದಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಸಹಕಾರ ಕ್ಷೇತ್ರದ ಹಿರಿಯ ನಾಯಕ, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಲ ಬೆಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಇದರ ಅಧ್ಯಕ್ಷ, ಸಹಕಾರ ರತ್ನ ಡಾ. ಎಂ.ಎನ್.ರಾಜೇಂದ್ರ ಕುಮಾರ್‌ ಅವರು ದೆಹಲಿಯ ಇಂಡಿಯನ್ ಫಾರ್ಮರ್ಸ್‌ ಫರ್ಟಿಲೈಸರ್ ಕೋ-ಅಪರೇಟಿವ್ (ಇಫ್ಕೋ) ಸಂಸ್ಥೆಯ ನಿರ್ದೇಶಕರಾಗಿ ಸತತ ೨ನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಇಫ್ಕೋ ಆಡಳಿತ ಮಂಡಳಿಯಲ್ಲಿ ರಾಜ್ಯ ಸಹಕಾರ ಮಾರಾಟ ಮಹಾಮಂಡಲಗಳಿಂದ ಮೂವರು ನಿರ್ದೇಶಕರು ಸ್ಥಾನ ಪಡೆದಿದ್ದು, ಈ ಪೈಕಿ ಕರ್ನಾಟಕದಿಂದ ಡಾ. ಎಂ.ಎನ್.ರಾಜೇಂದ್ರ ಕುಮಾರ್, ಉತ್ತರ ಪ್ರದೇಶದಿಂದ ವಾಲ್ಮೀಕಿ ತ್ರಿಪಾಠಿ ಹಾಗೂ ಆಂಧ್ರಪ್ರದೇಶದಿಂದ ಪಿ.ಪಿ. ನಾಗಿ ರೆಡ್ಡಿ ಇವರು ಆಯ್ಕೆಯಾಗಿದ್ದಾರೆ.

ಡಾ. ಎಂ.ಎನ್.ರಾಜೇಂದ್ರ ಕುಮಾರ್‌ರವರು ಸಹಕಾರಿ ಕ್ಷೇತ್ರದಲ್ಲಿ ಸುಮಾರು ೪೫ ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಸಹಕಾರ ಕ್ಷೇತ್ರದ ಮೂಲಕ ದಕ್ಷಿಣ ಕನ್ನಡ ಜಿಲ್ಲೆಗೆ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೀರ್ತಿಯನ್ನು ತಂದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಸೇರಿದಂತೆ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಲ ಇದರ ಅಧ್ಯಕ್ಷರಾಗಿ ಈ ಸಂಸ್ಥೆಗಳ ಅಭೂತಪೂರ್ವ ಯಶಸ್ಸಿಗೆ ಕಾರಣೀಕರ್ತರಾಗಿದ್ದಾರೆ. ಕರ್ನಾಟಕ ರಾಜ್ಯ ಸಹಕಾರ ಅಪೆಕ್ಸ್ ಬ್ಯಾಂಕಿನ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿ ಈ ಸಂಸ್ಥೆಯ ಏಳಿಗೆಗೆ ಶ್ರಮಿಸಿದ್ದಾರೆ. ಮುಖ್ಯವಾಗಿ ರೈತ ಪರವಾದ ಹಲವು ಯೋಜನೆಗಳನ್ನು ಕಾರ್ಯರೂಪಕ್ಕೆ ತಂದು ಸಹಕಾರ ಕ್ಷೇತ್ರವನ್ನು ಇವರು ಅತ್ಯಂತ ಸದೃಢ ಗೊಳಿಸಿದ್ದಾರೆ.

ಇದೀಗ ಪ್ರತಿಷ್ಠಿತ ಇಫ್ಕೋ ಸಂಸ್ಥೆಯಲ್ಲಿ ೨ನೇ ಅವಧಿಗೆ ನಿರ್ದೇಶಕರಾಗಿ ಡಾ. ಎಂ.ಎನ್.ರಾಜೇಂದ್ರ ಕುಮಾರ್‌ರವರು ಅವಿರೋಧವಾಗಿ ಆಯ್ಕೆಗೊಂಡಿರುವುದು ಜಿಲ್ಲೆಯ ಸಹಕಾರಿ ಬಂಧುಗಳಿಗೆ ಅತೀವ ಸಂತೋಷವನ್ನು ತಂದಿದೆ.

ಇಫ್ಕೋ ಸಂಸ್ಥೆ ರೈತ ಒಡೆತನದ ಸಂಸ್ಥೆಯಾಗಿದೆ. ಇದು ಕೃಷಿ ಉತ್ಪಾದನೆಯನ್ನು ಹೆಚ್ಚಿಸುವ, ಗುಣಮಟ್ಟದ ರಸಗೊಬ್ಬರವನ್ನು ಉತ್ಪಾದಿಸುವ ಮತ್ತು ಅವುಗಳ ಸಮತೋಲಿತ ಬಳಕೆಗಳನ್ನು ಉತ್ತೇಜಿಸುವ ಮೂಲಕ ಗ್ರಾಮೀಣ ಆರ್ಥಿಕತೆಯನ್ನು ಸುಧಾರಿಸುವುದು ಇದರ ಪ್ರಮುಖ ಉದ್ದೇಶವಾಗಿದೆ. ಪ್ರಸಕ್ತ ೩೬,೦೦೦ ಸದಸ್ಯ ಸಹಕಾರಿ ಸಂಘಗಳೊಂದಿಗೆ ೧೩೫ ಲಕ್ಷ ಮೆಗಾಟನ್ ರಸಗೊಬ್ಬರ ಉತ್ಪಾದನೆ ಮತ್ತು ೬೦,೦೦೦ ಕೋಟಿ ರು. ವಹಿವಾಟಿನಿಂದ ವಿಶ್ವದಲ್ಲೇ ಇಫ್ಕೋ ಸಂಸ್ಥೆ ಸಹಕಾರ ವಲಯದಲ್ಲಿ ಅಗ್ರಗಣ್ಯ ಸಂಸ್ಥೆಯಾಗಿ ಹೊರಹೊಮ್ಮಿದೆ. ಕಳೆದ ೫೫ ವರ್ಷಗಳಿಂದ ಇಫ್ಕೋ ರೈತರ ಹಾಗೂ ಸಹಕಾರಿಗಳ ಸೇವೆಯಲ್ಲಿ ನಿರತವಾಗಿದೆ.