ಸಾರಾಂಶ
ಕನ್ನಡಪ್ರಭ ವಾರ್ತೆ ಯಲಬುರ್ಗಾ
ತಾಲೂಕಿನ ಹಿರೇಅರಳಿಹಳ್ಳಿ ಗ್ರಾಮದ ಕಿರುಸೇತುವೆಯ ರಸ್ತೆಯಲ್ಲಿ ಚರಂಡಿ ನೀರು ಹರಿದು ಸಂಗ್ರಹವಾಗುತ್ತಿದ್ದು, ರೈತರು, ಸಾರ್ವಜನಿಕರು ಮತ್ತು ವಾಹನ ಸವಾರರ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ.ತಾಲೂಕು ಕೇಂದ್ರದಿಂದ ಸುಮಾರು ೩೫ ಕಿಮೀ ದೂರದಲ್ಲಿರುವ ಹಿರೇಅರಳಿಹಳ್ಳಿ ಕಡೆಯ ಗ್ರಾಮವಾಗಿದೆ. ಅಲ್ಲದೇ ಗ್ರಾಪಂ ಕಚೇರಿ ಹೊಂದಿದೆ. ಗ್ರಾಮದಿಂದ ಸುಮಾರು ಒಂದೂವರೆ ಕಿಮೀ ಅಂತರದಲ್ಲಿ ಗದಗ-ವಾಡಿ ರೈಲ್ವೆ ಮಾರ್ಗ ಹಾದು ಹೋಗಿದೆ. ಹುಬ್ಬಳ್ಳಿಯ ನೈಋತ್ಯ ರೈಲ್ವೆ ಇಲಾಖೆಯವರು ನಾಲೆಗೆ ಕಿರು ಸೇತುವೆ ನಿರ್ಮಿಸಿದ್ದಾರೆ. ನಾಲಾ ಮೂಲಕ ಊರಿನ ಚರಂಡಿ ನೀರು ಹರಿಯುತ್ತಿದ್ದು, ಕೊಳಚೆ ಕಿರುಸೇತುವೆ ಹತ್ತಿರ ಸಂಗ್ರಹವಾಗುತ್ತಿದೆ. ಪರಿಣಾಮ ಅವೈಜ್ಞಾನಿಕ ಕಾಮಗಾರಿ ನಡೆಸಿದ್ದರಿಂದ ನೀರು ಮುಂದಕ್ಕೆ ಹರಿಯುತ್ತಿಲ್ಲ. ಇದರಿಂದ ಹೊಲ ಮನೆಗೆ ತೆರಳುವ ರೈತರು, ಸಾರ್ವಜನಿಕರು ಮತ್ತು ವಾಹನ ಸವಾರರಿಗೆ ತೀವ್ರ ತೊಂದರೆಯಾಗಿದೆ. ಕೊಳಚೆಯಲ್ಲಿಯೇ ನಡೆದುಕೊಂಡು ಹೋಗುವ ಪರಿಸ್ಥಿತಿ ನಿರ್ಮಾವಾಗಿದೆ.
ಸಮಸ್ಯೆಗೆ ಹೊಣೆ ಯಾರು?:ನಾಲಾ ದಾರಿಯು ಹಿರೇಅರಳಿಹಳ್ಳಿಯಿಂದ ಕುಷ್ಟಗಿ ತಾಲೂಕಿನ ಶಾಖಾಪುರ ಸಂಪರ್ಕಿಸುವ ಒಳರಸ್ತೆಯೂ ಹೌದು. ಕೊಳಚೆ ನೀರು ಹರಿದು ಸಂಗ್ರಹದಿಂದ ಬಹುತೇಕ ರೈತರು ಜಾನುವಾರು, ಎತ್ತಿನ ಚಕ್ಕಡಿ ಒಡೆದುಕೊಂಡು ಹೋಗಲು ಸಮಸ್ಯೆ ಎದುರಿಸುತ್ತಿದ್ದಾರೆ. ರೈಲ್ವೆ ಇಲಾಖೆಯವರು ಮಾಡಿದ ಕಿರು ಸೇತುವೆ ಕೆಳಗೆ ಸರಿಯಾದ ರೀತಿಯಲ್ಲಿ ಸಿಸಿ ರಸ್ತೆ ಮಾಡದೇ ಇರುವ ಕಾರಣಕ್ಕೆ ಅವಾಂತರ ಸೃಷ್ಟಿಯಾಗಿದೆ. ಇದರಿಂದ ಬೇಸತ್ತು ಗ್ರಾಪಂ, ತಾಪಂ, ಜಿಪಂ ಮತ್ತು ರೈಲ್ವೆ ಇಲಾಖೆ ಅಲ್ಲದೇ ಶಾಸಕ ಬಸವರಾಜ ರಾಯರಡ್ಡಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಇದಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಯಾವ ಅಧಿಕಾರಿಯೂ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿಲ್ಲ. ಇಂಥ ಸಮಸ್ಯೆಗೆ ಹೊಣೆ ಯಾರು ಎಂದು ರೈತರು ಪ್ರಶ್ನಿಸಿದ್ದಾರೆ.ಆ.೩೦ರಂದು ರಸ್ತೆ ಬಂದ್:ಸಮಸ್ಯೆ ಬಗೆಹರಿಯದ ಕಾರಣ ಚರಂಡಿ ನೀರನ್ನು ರಸ್ತೆಗೆ ಹರಿಯದಂತೆ ರಸ್ತೆಯ ಆರಂಭದ ಭಾಗದಲ್ಲಿ ದೊಡ್ಡದಾದ ಒಡ್ಡು ಹಾಕಿ ಆ.೩೦ರಂದು ರಸ್ತೆ ಬಂದ್ ಮಾಡುವುದಾಗಿ ರೈತರಾದ ಶಂಕ್ರಗೌಡ ಪೊಲೀಸ್ ಪಾಟೀಲ್, ಪ್ರಭುರಾಜ ಹವಾಲ್ದಾರ್, ಸಂಗಮೇಶ ವಾದಿ, ಚನ್ನನಗೌಡ ಪಾಟೀಲ್, ಶರಣಗೌಡ ಹುಡೇದ, ಅಮರೇಗೌಡ ಪಾಟೀಲ್, ರಾಯಪ್ಪ ವಾದಿ, ಶೇಖರಗೌಡ ಪಾಟೀಲ್, ಮಲ್ಲೇಶ ಮೂಲಿ, ಶರಣಯ್ಯ ಸರಗಣಾಚಾರ, ಮಹೇಶ ಕೊಂಡಗುರಿ, ಮಲ್ಲಪ್ಪ ಕಮ್ಮಾರ ಎಚ್ಚರಿಕೆ ನೀಡಿದ್ದಾರೆ.