ಕುಡಿಯುವ ನೀರಿನ ಸಮಸ್ಯೆ: ಡಿಸಿ, ಜಿಪಂ ಸಿಇಒ ಭೇಟಿ

| Published : May 08 2024, 01:03 AM IST

ಸಾರಾಂಶ

ನರಸಿಂಹರಾಜಪುರ, ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿರುವ ತಾಲೂಕಿನ ಸೀತೂರು ಗ್ರಾಮ ಪಂಚಾಯಿತಿಯ ಕೊನೋಡಿ ಗ್ರಾಮದ ಬೆಮ್ಮನೆ ಹಾಗೂ ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿಯ ಚಿಬ್ಬಳ್ಳಿಗೆ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ಡಾ.ಗೋಪಾಲಕೃಷ್ಣ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸೀತೂರು ಗ್ರಾಮ ಪಂಚಾಯಿತಿಯ ಬೆಮ್ಮನೆ, ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿಯ ಚಿಬ್ಬಳ್ಳಿಗೆ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿರುವ ತಾಲೂಕಿನ ಸೀತೂರು ಗ್ರಾಮ ಪಂಚಾಯಿತಿಯ ಕೊನೋಡಿ ಗ್ರಾಮದ ಬೆಮ್ಮನೆ ಹಾಗೂ ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿಯ ಚಿಬ್ಬಳ್ಳಿಗೆ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ಡಾ.ಗೋಪಾಲಕೃಷ್ಣ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸೀತೂರು ಗ್ರಾಮ ಪಂಚಾಯಿತಿ ಕೊನೋಡಿ ಗ್ರಾಮದ ಬೆಮ್ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಎಚ್‌.ಇ.ದಿವಾಕರ ಹಾಗೂ ಇತರ ಗ್ರಾಮಸ್ಥರು ಮಾತನಾಡಿ, ಕೊನೋಡಿ ಗ್ರಾಮದ ಸರಳ ಗಂಡಿ, ಜಾಲ, ಬೆಮ್ಮನೆ, ಹೆರಂದೂರು, ಕೊನೋಡಿಯಲ್ಲಿ ಒಟ್ಟು 68 ಮನೆಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಈ ಹಿಂದೆ ಒಂದು ಬೋರ್ ವೆಲ್ ಮೂಲಕ ಈ ಮನೆಗಳಿಗೆ ಕುಡಿಯುವ ನೀರು ಒದಗಿಸಲಾಗಿತ್ತು. ಈ ವರ್ಷ ಅದರಲ್ಲಿ ನೀರು ಕಡಿಮೆಯಾಗಿದ್ದರಿಂದ 3 ತಿಂಗಳ ಹಿಂದೆ ಟಾಸ್ಕ್‌ ಪೋರ್ಸನಲ್ಲಿ ಬೋರ್‌ ವೆಲ್‌ ಕೊರೆಯಲಾಗಿತ್ತು. ಆದರೆ, ಅದರಲ್ಲಿ ಕೇವಲ 1.50 ಇಂಚು ನೀರು ಬಂದಿದ್ದು ಈ ನೀರು ಇಷ್ಟು ಮನೆಗಳಿಗೆ ಸಾಕಾಗುವುದಿಲ್ಲ. ಇನ್ನೊಂದು ಬೋರ್ ವೆಲ್‌ ಕೊರೆಸಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ಮಾತನಾಡಿ,ಇನ್ನೊಂದು ವಾರ ಕಾಯಿರಿ. ಮಳೆ ಬಂದು ನೀರಿನ ಸಮಸ್ಯೆ ಕಡಿಮೆಯಾಗದಿದ್ದರೆ ಇನ್ನೊಂದು ಬೋರ್ ವೆಲ್ ಕೊರೆಸಲಾಗುವುದು ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಇ.ಒ. ನವೀನ್‌ ಕುಮಾರ್‌, ತಹಸೀಲ್ದಾರ್ ರಮೇಶ್‌, ಇಂಜಿನಿಯರ್‌ ವೀರಪ್ಪ, ಜಿಲ್ಲಾ ಪಂಚಾಯಿತಿ ಕುಡಿಯುವ ನೀರಿನ ವಿಭಾಗದ ಕಾರ್ಯಪಾಲಕ ಇಂಜಿನಿಯರ್‌ ವಿನಾಯಕ ಹುಳ್ಳೂರು,ತಾಲೂಕು ಪಂಚಾಯಿತಿ ಗ್ರಾ.ಉ.ಯೋಜನೆ ಸಹಾಯ ನಿರ್ದೇಶಕ ಮನೀಶ್‌, ರೆವಿನ್ಯೂ ಇನ್ಸಪೆಕ್ಟರ್ ಮಂಜುನಾಥ್, ಗ್ರಾಮ ಲೆಕ್ಕಾಧಿಕಾರಿ ವಿಶ್ವನಾಥ, ಸೀತೂರು ಗ್ರಾಮ ಪಂಚಾಯಿತಿ ಪಿಡಿಒ ಶ್ರೀನಿವಾಸ್‌, ಕಾರ್ಯದರ್ಶಿ ನವೀನ್ , ಸೀತೂರು ವಿಎಸ್ಎಸ್‌ಎನ್‌ ಉಪಾಧ್ಯಕ್ಷ ಬಿ.ಎಸ್.ಶ್ರೀನಿವಾಸ್‌ ಮತ್ತಿತರರು ಇದ್ದರು.

ಚಿಬ್ಬಳ್ಳಿಗೆ ಭೇಟಿ

ನಂತರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ಕುಡಿಯುವ ನೀರಿನ ಸಮಸ್ಯೆ ಇರುವ ಚಿಬ್ಬಳ್ಳಿ ಎಂಬ ಗ್ರಾಮಕ್ಕೆ ಭೇಟಿ ನೀಡಿದರು. ಚಿಬ್ಬಳ್ಳಿಯಲ್ಲಿ 40 ಮನೆಗಳಿದ್ದು ಬೋರ್ ವೆಲ್ ನೀರು ಕಡಿಮೆ ಯಾಗಿದ್ದು ಪಕ್ಕದ ತೋಟದೂರು ಎಂಬ ಹಳ್ಳಿಯ ಖಾಸಗಿ ಬೋರ್ ವೆಲ್‌ ನಿಂದ ಕುಡಿಯುವ ನೀರು ಪಡೆಯಲಾಗುತ್ತಿತ್ತು. ಆ ನೀರು ಕಡಿಮೆಯಾಗಿದೆ ಎಂದು ದೂರು ಬಂದಿತ್ತು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಮೀನಾ ನಾಗರಾಜ್‌ ಮಾತನಾಡಿ, ಟಾಸ್ಕ್‌ ಪೋರ್ಸನಲ್ಲಿ ಬೋರ್‌ ವೆಲ್‌ ಕೊರೆಯಲು ಹಣ ಮೀಸಲಿಡಲಾಗಿದೆ. ಅಗತ್ಯ ಬಿದ್ದರೆ ಟ್ಯಾಂಕರ್‌ ಮೂಲಕ ನೀರು ನೀಡುತ್ತೇವೆ. ಕುಡಿಯುವ ನೀರಿಗೆ ಯಾವುದೇ ಹಣದ ಕೊರತೆ ಇಲ್ಲ. ಟೆಂಡರ್ ಆಗಿದ್ದರೆ ಟ್ಯಾಂಕರ್‌ ಮೂಲಕ ನೀರು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ನರೇಂದ್ರ, ಸದಸ್ಯ ಪಯಾಝ್,ಪಿಡಿಒ ಸುಮಿತ್ರ, ಬರ ನಿರ್ವಹಣೆಯ ನೋಡಲ್‌ ಅಧಿಕಾರಿ ಮೋಹನ್‌ ಇದ್ದರು. ನಂತರ ಜಿಲ್ಲಾಧಿಕಾರಿಗಳು ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಕೂಸಿನ ಮನೆ ವೀಕ್ಷಣೆ ಮಾಡಿದರು.