ಸಾರಾಂಶ
ಇಬ್ಬಲೂರು ಜಂಕ್ಷನ್-ದೇವರಬೀಸನಹಳ್ಳಿ ಜಂಕ್ಷನ್ ನಡುವಿನ ರಸ್ತೆಯಲ್ಲಿ ಸಂಚಾರ ದಟ್ಟಣೆ ತಪ್ಪಿಸಲು ಕೆಲವು ಮಾರ್ಪಾಡು ಮಾಡಿ ಬೆಂಗಳೂರು ನಗರ ಸಂಚಾರ ಪೊಲೀಸರು ಆದೇಶ ಹೊರಡಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ನಗರದ ಬೆಳ್ಳಂದೂರು ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಇಬ್ಬಲೂರು ಜಂಕ್ಷನ್‌ನಿಂದ ದೇವರಬೀಸನಹಳ್ಳಿ ಜಂಕ್ಷನ್‌ವರೆಗೆ ವಾಹನಗಳ ಸಂಚಾರ ಸುಧಾರಣೆಗೆ ನಗರ ಸಂಚಾರ ಪೊಲೀಸರು ಕೆಲ ಕ್ರಮಗಳನ್ನು ಕೈಗೊಂಡಿದ್ದಾರೆ.*ಹೊರವರ್ತುಲ ರಸ್ತೆಯ ಇಕೋಸ್ಪೇಸ್ ಕಡೆಯಿಂದ ದೇವರಬಿಸನಹಳ್ಳಿ ಜಂಕ್ಷನ್ ಕಡೆಗೆ ತೆರಳಲು ಇಕೋಸ್ಪೇಸ್ ಜಂಕ್ಷನ್‌ನಿಂದ ದೇವರಬಿಸನಹಳ್ಳಿ ವರೆಗಿನ ಮೇಲ್ಸೇತುವೆಯ ಮಧ್ಯದ ರಸ್ತೆಯನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.
ಈ ರಸ್ತೆಯನ್ನು ಇಬ್ಬಲೂರು ಜಂಕ್ಷನ್‌ನಿಂದ ಬೆಳ್ಳಂದೂರು ಮೇಲ್ಸೇತುವೆ ಮೂಲಕ ಹಾಗೂ ಬೆಳ್ಳಂದೂರು ಜಂಕ್ಷನ್‌ನಿಂದ ಮೇಲ್ಸೇತುವೆಯ ಮಧ್ಯ ಭಾಗದ ರಸ್ತೆ ಹಾಗೂ ಸರ್ವಿಸ್ ರಸ್ತೆಯಲ್ಲಿ ಬರುವ ವಾಹನಗಳು ದೇವರಬಿಸನಹಳ್ಳಿ ಜಂಕ್ಷನ್ ಮೂಲಕ ಇಕೋಸ್ಪೇಸ್, ಇಂಟೆಲ್, ಗ್ಲೋಬಲ್ ಟೆಕ್ ಪಾರ್ಕ್, ಐ.ಟಿ ಪಾರ್ಕ್‌ಗಳಿಗೆ ಶೀಘ್ರವಾಗಿ ಮತ್ತು ಸಂಚಾರ ದಟ್ಟಣೆ ರಹಿತವಾಗಿ ತಲುಪಲು ಸಹಕಾರಿಯಾಗಿದೆ.*ಹೊರವರ್ತುಲ ರಸ್ತೆಯ ಬೆಳ್ಳಂದೂರು ಜಂಕ್ಷನ್‌ನಿಂದ ಇಕೋಸ್ಪೇಸ್ ಕಡೆಗೆ ವಾಹನಗಳು ತೆರಳಲು ಅನುವಾಗುವಂತೆ ಬೆಳ್ಳಂದೂರು ಜಂಕ್ಷನ್‌ನಿಂದ ಇಕೋಸ್ಪೇಸ್‌ವರೆಗಿನ ಮೇಲ್ಸೇತುವೆಯ ಮಧ್ಯದ ರಸ್ತೆಯನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಈ ರಸ್ತೆಯನ್ನು ಸರ್ಜಾಪುರ ರಸ್ತೆಯಿಂದ ಬೆಳ್ಳಂದೂರು ಗೇಟ್ ರಸ್ತೆಯ ಮೂಲಕ ಬೆಳ್ಳಂದೂರು ಜಂಕ್ಷನ್ ಕಡೆಗೆ ಪ್ರವೇಶಿಸುವ ವಾಹನ ಸವಾರರು ರಸ್ತೆ ಬಳಸುವ ಮೂಲಕ ಸರ್ಜಾಪುರ ರಸ್ತೆಯಿಂದ ಇಕೋಸ್ಪೇಸ್, ಮಾರತ್‌ಹಳ್ಳಿ ಕಡೆಗೆ ಶೀಘ್ರವಾಗಿ ಮತ್ತು ಸಂಚಾರ ದಟ್ಟಣೆ ರಹಿತವಾಗಿ ತಲುಪಲು ಸಹಕಾರಿಯಾಗಿದೆ.
*ಈ ರಸ್ತೆಗಳು ಸಿಲ್ಕ್‌ಬೋರ್ಡ್ ಜಂಕ್ಷನ್ ಹಾಗೂ ಸರ್ಜಾಪುರ ರಸ್ತೆಯಿಂದ ಬರುವ ವಾಹನಗಳು ಮಾರತ್‌ಹಳ್ಳಿ ಹಾಗೂ ಕೆ.ಆರ್.ಪುರಂ ಕಡೆಗೆ, ದೇವರಬಿಸನಹಳ್ಳಿ, ಇಕೋಸ್ಪೇಸ್, ಇಂಟೆಲ್, ಗ್ಲೋಬಲ್ ಟೆಕ್‌ಪಾರ್ಕ್, ಇಕೋವರ್ಲ್ಡ್, ಐ.ಟಿ ಪಾರ್ಕ್‌ಗಳಿಗೆ ಶೀಘ್ರವಾಗಿ ಮತ್ತು ಸಂಚಾರ ದಟ್ಟಣೆ ರಹಿತವಾಗಿ ತೆರಳಲು ಸಹಕಾರಿಯಾಗಿದೆ. ಸಾರ್ವಜನಿಕರು ಈ ರಸ್ತೆಗಳನ್ನು ಬಳಸುವ ಮೂಲಕ ಸದುಪಯೋಗ ಪಡೆದುಕೊಳ್ಳುವಂತೆ ನಗರ ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ.