ಕನ್ನಡ ಮತ್ತು ಕರ್ನಾಟಕದ ಪರಂಪರೆ ಬಗ್ಗೆ ನಾವೆಲ್ಲರೂ ಮಾತನಾಡುತ್ತೇವೆ. ನಾಡಿನ ಇತಿಹಾಸವೂ ನಮಗೆ ಗೊತ್ತು. ಆದರೆ, ಕನ್ನಡ ನಾಡದೇವತೆ ಬಗ್ಗೆ ಬಹಳಷ್ಟು ಜನರಿಗೆ ಗೊತ್ತಿಲ್ಲ.
ನಾಗಮಂಗಲ: ಇಡೀ ಜಗತ್ತನ್ನೇ ಬದಲಾಯಿಸುವ ಯಾವುದಾದರೊಂದು ದಿವ್ಯ ಅಸ್ತ್ರವಿದ್ದರೆ ಅದು ಶಿಕ್ಷಣ ಮಾತ್ರ. ಹಾಗಾಗಿ ಇಂದಿನ ಮಕ್ಕಳಿಗೆ ಮಾನವೀಯ ಮೌಲ್ಯಯುತ ಶಿಕ್ಷಣ ಅತ್ಯವಶ್ಯಕವಾಗಿದೆ ಎಂದು ಹಾವೇರಿ ಜಿಲ್ಲೆ ಶಿಗ್ಗಾಂವ್ ತಾಲೂಕಿನ ಜಕ್ಕನಕಟ್ಟಿಯ ಕಿತ್ತೂರು ರಾಣಿಚನ್ನಮ್ಮ ವಸತಿ ಶಾಲೆ ವಿದ್ಯಾರ್ಥಿನಿ ಕು.ಅನುಷಾ ಕರಿಬಸಯ್ಯ ಹಿರೇಮಠ ಅಭಿಪ್ರಾಯಪಟ್ಟರು.
ತಾಲೂಕಿನ ಆದಿಚುಂಚನಗಿರಿ ಶ್ರೀಕ್ಷೇತ್ರದ ಬಿಜಿಎಸ್ ಸಭಾಭವನದಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿ, ಮಕ್ಕಳಲ್ಲಿ ನೈತಿಕ, ಆಧ್ಯಾತ್ಮಿಕ, ಸಾಮಾಜಿಕ ಮತ್ತು ಭಾವನಾತ್ಮಕ ಗುಣಗಳನ್ನು ಬೆಳೆಸಬೇಕಿದೆ. ಅವೆಲ್ಲವನ್ನೂ ಪ್ರತಿಯೊಬ್ಬ ಮಕ್ಕಳು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಯಶಸ್ಸಿನ ಹಾದಿಯಲ್ಲಿ ನಡೆಯಲು ಸಾಧ್ಯವಾಗುತ್ತದೆ ಎಂದರು. ಪೋಷಕರು ತಮ್ಮ ಮಕ್ಕಳ ಮುಖ ಕಪ್ಪಾಗಿದ್ದರೂ ಸಹಿಸುತ್ತಾರೆ. ಆದರೆ, ಶಾಲೆಗೆ ಹೋಗಿಬರುವ ಮಕ್ಕಳ ಮುಖ ಸಪ್ಪೆಯಾದಾಗ ತಂದೆ ತಾಯಂದಿರು ಸಹಿಸುವುದಿಲ್ಲ. ತಾಯಿ 9 ತಿಂಗಳ ಕಾಲ ತನ್ನ ಗರ್ಭದಲ್ಲಿ ಮಗುವನ್ನು ಪೋಷಿಸಿದರೆ ತಂದೆ ಮಕ್ಕಳನ್ನು ತನ್ನ ಕೈಯಲ್ಲಿಟ್ಟು ಪೋಷಣೆ ಮಾಡುತ್ತಾರೆ. ಇದು ತಂದೆ ತಾಯಂದಿರ ಮಹತ್ವ ಎಂದು ಹೇಳಿದರು. ಕಠಿಣವಾದರೂ ನಡುಗೆಯಲ್ಲೂ ಡಮರುಗದಂತೆ ಸದ್ದು ಮಾಡಿ ಎದ್ದು ಬರುವ ಭಾಷೆ ಯಾವುದಾದರೂ ಈ ಜಗತ್ತಿನಲ್ಲಿದ್ದರೆ ಅದು ಕನ್ನಡ ಭಾಷೆ ಎಂದು ನಾವೆಲ್ಲರೂ ಎದೆತಟ್ಟಿ ಹೇಳಬಹುದು. ಕನ್ನಡ ಮತ್ತು ಕರ್ನಾಟಕದ ಪರಂಪರೆ ಬಗ್ಗೆ ನಾವೆಲ್ಲರೂ ಮಾತನಾಡುತ್ತೇವೆ. ನಾಡಿನ ಇತಿಹಾಸವೂ ನಮಗೆ ಗೊತ್ತು. ಆದರೆ, ಕನ್ನಡ ನಾಡದೇವತೆ ಬಗ್ಗೆ ಬಹಳಷ್ಟು ಜನರಿಗೆ ಗೊತ್ತಿಲ್ಲ ಎಂದರು. ಇಡೀ ಭೂಮಂಡಲಕ್ಕೆ ಯಾರಾದರೂ ಒಡತಿ ಇದ್ದರೆ ಅದು ನಮ್ಮ ನಾಡದೇವತೆ ಭುವನೇಶ್ವರಿ. ಯಾವುದಾರೂ ಒಂದು ಭಾಷೆಗೆ ದೇವತೆ ಆಕಾರ ಕೊಟ್ಟು ಸೀರೆಯುಡಿಸಿ ಮಲ್ಲಿಗೆ ಹೂ ಮುಡಿಸಿ ಅರಿಶಿನ ಕುಂಕುಮವಿಟ್ಟು ಪೂಜಿಸುವ ಜನರಿದ್ದರೆ ನಮ್ಮ ಕನ್ನಡಿಗರು ಮಾತ್ರ ಎಂದು ತಿಳಿಸಿದರು.