ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಐತಿಹಾಸಿಕ ಸ್ಮಾರಕಗಳ ರಕ್ಷಣೆ, ಹಸರೀಕರಣ, ಸ್ವಚ್ಛತೆಗಾಗಿ-2025ನೇ ಸಾಲಿನ ಡಿ.7 ರಂದು ಜಿಲ್ಲೆಯಲ್ಲಿ ಹಮ್ಮಿಕೊಂಡಿರುವ ವೃಕ್ಷೊತ್ಥಾನ ಹೆರಿಟೇಜ್ ರನ್‌ನಲ್ಲಿ ಜಿಲ್ಲಾಡಳಿತ, ಸ್ವಯಂ ಸೇವಾ ಸಂಘ-ಸಂಸ್ಥೆಗಳು, ಸಾರ್ವಜನಿಕರು ಸ್ವಯಂ ಪ್ರೇರಿತವಾಗಿ ಸಕ್ರೀಯವಾಗಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಜಿಲ್ಲಾ ಉಸ್ತುವಾರಿ ಎಂ.ಬಿ.ಪಾಟೀಲ ಕರೆ ನೀಡಿದರು.ನಗರದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಹಮ್ಮಿಕೊಂಡ ವೃಕ್ಷೊತ್ಥಾನ ಹೆರಿಟೇಜ್ ರನ್ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಕಳೆದ 2016 ರಿಂದ ಕೋಟಿ ವೃಕ್ಷ ಅಭಿಯಾನ ಆರಂಭಿಸಲಾಗಿದ್ದು, ವೃಕ್ಷೊತ್ಥಾನ ಆರಂಭದಿಂದ ಇಲ್ಲಿಯವರೆಗೆ ಕೋಟಿ ವೃಕ್ಷ ಅಭಿಯಾನದಡಿ ಜಿಲ್ಲೆಯಲ್ಲಿ 1.50 ಕೋಟಿ ಸಸಿಗಳನ್ನು ನೆಟ್ಟು ಪೋಷಿಸಲಾಗುತ್ತಿದೆ. ಆ ಮೂಲಕ ಅತ್ಯಂತ ಕಡಿಮೆ ಇದ್ದ ಜಿಲ್ಲೆಯ ಅರಣ್ಯ ಪ್ರದೇಶವನ್ನು ರಾಜ್ಯದ ತರುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುತ್ತಿದೆ ಎಂದರು.
ಕಳೆದ 2023ರಲ್ಲಿ ನಡೆದ ವೃಕ್ಷೊತ್ಥಾನ ಹೆರಿಟೇಜ್ ರನ್‌ನಲ್ಲಿ 8 ಸಾವಿರ ಓಟಗಾರರು, 2024ರಲ್ಲಿ 9400 ಓಟಗಾರರು ಭಾಗವಹಿಸಿದ್ದರು. ಈ ಬಾರಿ ನಡೆಯುವ ವೃಕ್ಷೊತ್ಥಾನ ಹೆರಿಟೇಜ್ ರನ್‌ನಲ್ಲಿ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ 15 ಸಾವಿರ ಓಟಗಾರರು ಭಾಗವಹಿಸುವ ನಿರೀಕ್ಷೆ ಇದೆ. ಈ ಅಭಿಯಾನಕ್ಕೆ ಎಲ್ಲರೂ ಕೈ ಜೋಡಿಸುವ ಮೂಲಕ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.ನಿಸರ್ಗದ ಬಗ್ಗೆ ಅಪಾರ ಕಾಳಜಿ, ಪ್ರೀತಿ ಹೊಂದಿದ ನಡೆದಾಡುವ ದೇವರು ಸಿದ್ದೇಶ್ವರ ಸ್ವಾಮೀಗಳ ಆಶಯದಂತೆ ಹೆರಿಟೇಜ್ ರನ್ ಮೂಲಕ ಹಸರಿಕರಣದ ಜಾಗೃತಿ ಮೂಡುತ್ತಿದೆ. ಮಮದಾಪುರದ 1600 ಎಕರೆ ಅರಣ್ಯ ಪ್ರದೇಶಕ್ಕೆ ಸಿದ್ದೇಶ್ವರ ಶ್ರೀಗಳ ಹೆಸರಿಟ್ಟು ಗೌರವ ಅರ್ಪಿಸಲಾಗಿದೆ ಎಂದು ಹೇಳಿದರು.ಮಹಾನಗರ ಪಾಲಿಕೆ ಮಹಾಪೌರ ಮಡಿವಾಳಪ್ಪ ಕರಡಿ, ಜಿಪಂ ಸಿಇಒ ರಿಷಿ ಆನಂದ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಎಎಸ್‌ಐ ಇಲಾಖೆ ಧಾರವಾಡ ವೃತ್ತದ ರಮೇಶ ಮೂಲಿಮನಿ, ಕರ್ನಲ್ ವಂಶಿ, ಮುರುಗೇಶ ಪಟ್ಟಣಶೆಟ್ಟಿ, ಮಹಾಂತೇಶ ಬಿರಾದಾರ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.ಬಾಕ್
ಹೆರಿಟೇಜ್ ರನ್‌ಗಾಗಿ ಜಾಗೃತಿ ಡಿ.7ರಂದು ಹಮ್ಮಿಕೊಂಡ ವೃಕ್ಷೊತ್ಥಾನ ಹೆರಿಟೇಜ್ ಜಾಗೃತಿಗಾಗಿ ಸೆಪ್ಟಂಬರ್ 25 ರಂದು ನಗರದ ಕೋಟೆಗೋಡೆ ಹಾಗೂ ಆಯ್ದ ಐದು ಐತಿಹಾಸಿಕ ಸ್ಮಾರಕ ಹಾಗೂ ದೇವಸ್ಥಾನಗಳನ್ನು ಸ್ವಚ್ಚಗೊಳಿಸುವ ಸ್ವಚ್ಛತಾ ಅಭಿಯಾನ ಕಾರ್ಯಕ್ರಮವವನ್ನು ಹಮ್ಮಿಕೊಂಡು ಈ ಹೆರಿಟೇಜ್ ರನ್ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಹೆರಿಟೇಜ್ ರನ್ ಜಾಗೃತಿಗಾಗಿ ಸೆ.25 ರಂದು ಹಮ್ಮಿಕೊಂಡ ಸ್ವಚ್ಛತಾ ಅಭಿಯಾನದಲ್ಲಿ ವಿದ್ಯಾರ್ಥಿಗಳಿಗೆ ಚಿತ್ರಕಲೆ, ಪ್ರಬಂಧ ಸ್ಪರ್ಧೆ ಸೇರಿದಂತೆ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಂಡು ಜಾಗೃತಿ ಮೂಡಿಸಲಾಗುವುದು ಎಂದು ತಿಳಿಸಿದರು.ಸಭೆಯಲ್ಲಿ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿ ತಮ್ಮ ಅನಿಸಿಕೆ ಹಾಗೂ ಸಲಹೆ ಸೂಚನೆಗಳನ್ನು ನೀಡಿದರು. ಇದೇ ವೇಳೆ ವೃಕ್ಷೊತ್ಥಾನ ಹೆರಿಟೇಜ್ ರನ್ ಪೋಸ್ಟರ್ ಬಿಡುಗಡೆಗೊಳಿಸಲಾಯಿತು.